

ಲಂಡನ್: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಆಸ್ಟ್ರೆಲಿಯಾ ಮತ್ತು ಆತಿಥೇಯ ಇಂಗ್ಲೆಂಡ್ ನಡುವಿನ ಆಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಸ್ಥಳಿಯ "ಜಸ್ಟ್ ಸ್ಟಾಪ್ ಆಯಿಲ್' ಎಂಬ ಪರಿಸರ ಜಾಗೃತಿಯ ಗುಂಪಿನ ಪ್ರತಿಭಟನಾಕಾರರಿಂದ ಕೆಲಕಾಲ ಆಟಕ್ಕೆ ಅಡಚಣೆಯಾಯಿತು. ಮೈದಾನಕ್ಕೆ ಕೇಸರಿ ಬಣ್ಣದ ಪೌಡರ್ ಎರಚುವ ಮೂಲಕ ಅವರು ಪಂದ್ಯಕ್ಕೆ ಸುಮಾರು 6 ನಿಮಿಷಗಳ ಕಾಲ ಅಡಚಣೆ ಉಂಟು ಮಾಡಿದರು.
ಕೇಸರಿ ಬಣ್ಣದ ಪೌಡರ್ನೊಂದಿಗೆ ಮೈದಾನಕ್ಕೆ ನುಗ್ಗಿದ ಇಬ್ಬರು ಪ್ರತಿಭಟನಾಕಾರರನ್ನು ಭದ್ರತಾ ಸಿಬ್ಬಂದಿ ಹೊರಗಟ್ಟಲು ಹರಸಾಹಸ ಪಟ್ಟರು. ಈ ಪೈಕಿ ಒಬ್ಬನನ್ನು ವಿಕೆಟ್ ಕೀಪರ್ ಜಾನಿ ಬೇರ್ಸ್ಟೋ ಒಬ್ಬರೇ ಸುಮಾರು 50 ಮೀಟರ್ ದೂರ ಎತ್ತಿಕೊಂಡು ಹೋಗಿ ಮೈದಾನದಿಂದ ಹೊರ ಹಾಕಿದರು. ಇನ್ನೊಬ್ಬ ಪ್ರತಿಭಟನಾಕಾರನನ್ನು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಆಸೀಸ್ ಬ್ಯಾಟರ್ ಡೇವಿಡ್ ವಾರ್ನರ್ ಅಡ್ಡಗಟ್ಟಿ, ಭದ್ರತಾ ಸಿಬ್ಬಂದಿಗೆ ಹಿಡಿದುಕೊಟ್ಟರು. ಪಿಚ್ನಿಂದ ಸ್ವಲ್ಪ ದೂರದಲ್ಲಿ ಮೈದಾನದ ಹುಲ್ಲಿನ ಮೇಲೆ ಪ್ರತಿಭಟನಾಕಾರರು ಕೇಸರಿ ಬಣ್ಣವನ್ನು ಚೆಲ್ಲಿದರು. ಒಂದು ವೇಳೆ ಪಿಚ್ ಮೇಲೆ ಬಣ್ಣ ಚೆಲ್ಲಿದ್ದರೆ ಅದಕ್ಕೆ ಹಾನಿಯಾಗುವ ಅಪಾಯವಿತ್ತು. ಈ ನಡುವೆ ಬೇರ್ಸ್ಟೋ ಬಟ್ಟೆಗೂ ಕೇಸರಿ ಬಣ್ಣ ಮೆತ್ತಿದ್ದರಿಂದ ಅವರು ಪಂದ್ಯದ ನಡುವೆ ಡ್ರೆಸ್ಸಿಂಗ್ ರೂಂಗೆ ಮರಳಿ ಬಟ್ಟೆ ಬದಲಾಯಿಸಿಕೊಂಡು ಬಂದರು. ಮೈದಾನದಲ್ಲಿ ಬಿದ್ದಿದ್ದ ಕೇಸರಿ ಬಣ್ಣವನ್ನು ಗ್ರೌಂಡ್ಮನ್ಸ್ ಸ್ವಚ್ಛಗೊಳಿಸಿದರು.
ಜಸ್ಟ್ ಸ್ಟಾಪ್ ಆಯಿಲ್ನ ಸದಸ್ಯರು ಇತ್ತೀಚೆಗೆ ಪ್ರೀಮಿಯರ್ ಲೀಗ್ ಸಹಿತ ಇಂಗ್ಲೆಂಡ್ನ ಹಲವು ಕ್ರೀಡಾಕೂಟಗಳಿಗೆ ಕೇಸರಿ ಬಣ್ಣದೊಂದಿಗೆ ನುಗ್ಗಿ ಅಡ್ಡಿಪಡಿಸುವ ಮೂಲಕ ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದಾರೆ. ಜಸ್ಟ್ ಸ್ಟಾಪ್ ಆಯಿಲ್ ಪ್ರತಿಭಟನಾಕಾರರು ಪಿಚ್ಗೆ ಹಾನಿ ಮಾಡಬಹುದು ಎಂಬ ಭಯದಿಂದಾಗಿ ಈ ಮುನ್ನ ಓವಲ್ನಲ್ಲಿ ಭಾರತ-ಆಸ್ಟ್ರೆಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ಐಸಿಸಿ, ಎರಡು ಪಿಚ್ಗಳನ್ನು ನಿರ್ಮಿಸಿತ್ತು. ಹೊಸ ಇಂಧನ ಪರವಾನಗಿ ಮತ್ತು ಉತ್ಪಾದನೆಯನ್ನು ಬ್ರಿಟನ್ ಸರ್ಕಾರ ನಿಲ್ಲಿಸಬೇಕೆಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.