ಡೆಂಘೆ ಜ್ವರದಿಂದಾಗಿ ಶುಭಮಾನ್​ ಗಿಲ್​ಗೆ ತಪ್ಪಿತು ವಿಶ್ವ ನಂ. 1 ಪಟ್ಟ!

gill web
Published on

ನವದೆಹಲಿ: ಭಾರತದ ಯುವ ಆರಂಭಿಕ ಶುಭಮಾನ್​ ಗಿಲ್​ ಡೆಂಘೆ ಜ್ವರದಿಂದ ಬಳಲುತ್ತಿರುವ ಕಾರಣ ಏಕದಿನ ವಿಶ್ವಕಪ್​ನ ಆರಂಭಿಕ 2 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದು, ಇನ್ನೂ 2 ಪಂದ್ಯದಿಂದ ಹೊರಬೀಳುವ ಭೀತಿಯಲ್ಲಿದ್ದಾರೆ. ಇದರಿಂದಾಗಿ ಅವರು ವಿಶ್ವಕಪ್​ಗೆ ಪದಾರ್ಪಣೆ ಮಾತ್ರವಲ್ಲದೆ, ಐಸಿಸಿ ಏಕದಿನ ಬ್ಯಾಟಿಂಗ್​ ರ್ಯಾಂಕಿಂಗ್​ನಲ್ಲಿ ನಂ. 1 ಪಟ್ಟಕ್ಕೇರುವ ಅವಕಾಶದಿಂದಲೂ ವಂಚಿತರಾಗಿದ್ದಾರೆ.

ಸದ್ಯ ಅಗ್ರಸ್ಥಾನದಲ್ಲಿರುವ ಪಾಕಿಸ್ತಾನದ ನಾಯಕ ಬಾಬರ್​ ಅಜಮ್​ ವಿಶ್ವಕಪ್​ನ ಮೊದಲ 2 ಪಂದ್ಯಗಳಲ್ಲಿ ಒಟ್ಟು 15 ರನ್​ ಮಾತ್ರ ಗಳಿಸಿದ್ದಾರೆ. ಹೀಗಾಗಿ ಗಿಲ್​ ಆಡಿದ್ದರೆ ನಿಶ್ಚಿತವಾಗಿ ನಂ. 1 ಪಟ್ಟಕ್ಕೇರುವ ಅವಕಾಶವಿತ್ತು. ವಿಶ್ವಕಪ್​ಗೆ ಮುನ್ನ ಇವರಿಬ್ಬರ ನಡುವೆ ಕೇವಲ 10 ಅಂಕಗಳ ಅಂತರವಿದ್ದರೆ, ಈಗ ಅದು 5ಕ್ಕೆ ಇಳಿದಿದೆ. ಬುಧವಾರದ ಪರಿಷತ ರ್ಯಾಂಕಿಂಗ್​ ಪ್ರಕಾರ ಬಾಬರ್​ 835 ಮತ್ತು ಗಿಲ್​ 830 ಅಂಕ ಹೊಂದಿದ್ದಾರೆ.

ಈ ನಡುವೆ ಆಸೀಸ್​ ವಿರುದ್ಧ ಮೊದಲ ಪಂದ್ಯದಲ್ಲಿ ಮಿಂಚಿದ ವಿರಾಟ್​ ಕೊಹ್ಲಿ 1 ಸ್ಥಾನ ಬಡ್ತಿ ಪಡೆದು 7ನೇ ಸ್ಥಾನಕ್ಕೇರಿದ್ದರೆ, ಕನ್ನಡಿಗ ಕೆಎಲ್​ ರಾಹುಲ್​ 19ನೇ ಸ್ಥಾನಕ್ಕೇರಿದ್ದಾರೆ. ಬೌಲಿಂಗ್​ನಲ್ಲಿ ವೇಗಿ ಮೊಹಮದ್​ ಸಿರಾಜ್​ ಸದ್ಯ 2ನೇ ಸ್ಥಾನಕ್ಕಿಳಿದಿದ್ದಾರೆ.

ಗಿಲ್​ ತಂಡ ಸೇರಲು ರೆಡಿ

ಟೀಮ್​ ಇಂಡಿಯಾ ಜತೆಗೆ ಚೆನ್ನೈನಿಂದ ನವದೆಹಲಿಗೆ ತೆರಳದ ಶುಭಮಾನ್​ ಗಿಲ್​ ಇದೀಗ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಮುನ್ನ ಅಹಮದಾಬಾದ್​ನಲ್ಲಿ ತಂಡವನ್ನು ಸೇರಿಕೊಳ್ಳಲು ಸಿದ್ಧರಾಗಿದ್ದಾರೆ. ಆದರೆ ಪಂದ್ಯದಲ್ಲಿ ಅವರು ಆಡುವ ಬಗ್ಗೆ ಇನ್ನೂ ಅನುಮಾನಗಳಿವೆ. ಅಲ್ಲದೆ ಬಿಸಿಸಿಐ ವೈದ್ಯಕಿಯ ತಂಡದ ನಿಗಾದಲ್ಲೇ ಇರಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net