

ಕೌಲಾಲಂಪುರ: ಭಾರತ ತಂಡ ಜೂನಿಯರ್ ಪುರುಷರ ಹಾಕಿ ವಿಶ್ವಕಪ್ನಲ್ಲಿ ಸತತ 3ನೇ ಬಾರಿ ಸೆಮಿಫೈನಲ್ಗೇರಿದ ಸಾಧನೆ ಮಾಡಿದೆ. ಎರಡು ಬಾರಿಯ ಚಾಂಪಿಯನ್ ಭಾರತ ತಂಡ ಮಂಗಳವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ ಎದುರು 4-3 ಗೋಲುಗಳಿಂದ ರೋಚಕ ಗೆಲುವು ದಾಖಲಿಸಿತು. ಗುರುವಾರ ನಡೆಯಲಿರುವ ಉಪಾಂತ್ಯ ಹೋರಾಟದಲ್ಲಿ ಭಾರತ ತಂಡ 6 ಬಾರಿಯ ಚಾಂಪಿಯನ್ ಜರ್ಮನಿ ಎದುರು ಸೆಣಸಲಿದೆ.
ಪಂದ್ಯದ ಮೊದಲಾರ್ಧದಲ್ಲಿ 0-2 ಹಿನ್ನಡೆಯಲ್ಲಿದ್ದ ಭಾರತ ತಂಡ ಬಳಿಕ ಸಮಬಲ ಸಾಧಿಸಿದರೂ, ಪಂದ್ಯ ಮುಕ್ತಾಯಕ್ಕೆ 8 ನಿಮಿಷಗಳಿರುವವರೆಗೂ 3-2ರಿಂದ ಹಿಂದಿತ್ತು. ಆದರೆ, 52ನೇ ನಿಮಿಷದಲ್ಲಿ ಭಾರತ ಮತ್ತೆ ಸಮಬಲ ಸಾಧಿಸಿತು. 57ನೇ ನಿಮಿಷದಲ್ಲಿ ನಾಯಕ ಉತ್ತಮ್ ಸಿಂಗ್ ಭಾರತ ತಂಡಕ್ಕೆ ಗೆಲುವಿನ ಗೋಲು ತಂದುಕೊಟ್ಟರು.
ಜರ್ಮನಿ ಪರ ಟಿಮೋ ಬೋರ್ಸ್ (5ನೇ ನಿಮಿಷ) ಮತ್ತು ಪೆಪಿಜ್ ವಾನ್ ಡರ್ ಹೈಜ್ಡೆನ್ (16) ಮೊದಲೆರಡು ಗೋಲು ಬಾರಿಸಿದರು. ಮೊದಲಾರ್ಧದಲ್ಲಿ ಭಾರತದ ರಕ್ಷಣಾ ವಿಭಾಗ ಉತ್ತಮ ನಿರ್ವಹಣೆಯ ನಡುವೆ ಇದೆರಡು ಎಡವಟ್ಟುಗಳಿಂದ ಹಿನ್ನಡೆ ಕಾಣುವಂತೆ ಮಾಡಿತು. ಬಳಿಕ 3ನೇ ಕ್ವಾರ್ಟರ್ನ ಆರಂಭದಲ್ಲೇ ಆದಿತ್ಯ ಲಲಗೆ (34) ಮತ್ತು ಅರೈಜೀತ್ ಸಿಂಗ್ ಹಂಡಲ್ (35) ಒಂದು ನಿಮಿಷದ ಅಂತರದಲ್ಲಿ 2 ಗೋಲು ಬಾರಿಸಿ ಸಮಬಲ ತಂದರು. 44ನೇ ನಿಮಿಷದಲ್ಲಿ ಒಲಿವರ್ ಹೊರ್ಟೆನ್ಸಿಯುಸ್ (44) ಡಚ್ಚರಿಗೆ ಮತ್ತೆ ಮುನ್ನಡೆ ಒದಗಿಸಿದರು. ನಂತರ ಆಕ್ರಮಣ ಹೆಚ್ಚಿಸಿದ ಭಾರತಕ್ಕೆ ಸೌರಭ್ ಆನಂದ್ ಕುಶ್ವಾಹ್ (52) ಮತ್ತೆ ಸಮಬಲ ತಂದುಕೊಟ್ಟರು. ಬಳಿಕ ಪಂದ್ಯ ಮುಕ್ತಾಯಕ್ಕೆ 3 ನಿಮಿಷಗಳಿರುವಾಗ ಉತ್ತಮ್ ಸಿಂಗ್ ಮತ್ತೊಂದು ಪೆನಾಲ್ಟಿ ಕಾರ್ನರ್ಅನ್ನು ಗೋಲಾಗಿ ಪರಿವರ್ತಿಸಿ ಜಯಭೇರಿ ಮೊಳಗಿಸಿದರು.
ಭಾರತದ ಗೆಲುವಿನಲ್ಲಿ ರೋಹಿತ್ ಸಾರಥ್ಯದ ರಕ್ಷಣಾ ವಿಭಾಗ ಮತ್ತು ಗೋಲು ಕೀಪರ್ ಹಾಗೂ ಕನ್ನಡಿಗ ಮೋಹಿತ್ ಎಚ್ಎಸ್ ನಿರ್ವಹಣೆಯೂ ಪ್ರಮುಖ ಪಾತ್ರ ವಹಿಸಿತು. ಕೊನೇ ಕ್ವಾರ್ಟರ್ನಲ್ಲಿ ಭಾರತದ ರಕ್ಷಣಾ ಪಡೆ ಡಚ್ಚರ ಸತತ 6 ಪೆನಾಲ್ಟಿ ಕಾರ್ನರ್ಗಳು ಗೋಲಾಗದಂತೆ ತಡೆಯೊಡ್ಡಿತು. ಈ ಪ್ರಯತ್ನಕ್ಕಾಗಿ ರೋಹಿತ್ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. 2021ರ ಕಳೆದ ಆವೃತ್ತಿಯ ಸೆಮಿಫೈನಲ್ನಲ್ಲಿ ಜರ್ಮನಿ ಎದುರು ಸೋತಿದ್ದ ಭಾರತ ತಂಡ ಈ ಬಾರಿ ಸೇಡು ತೀರಿಸಿಕೊಳ್ಳುವ ಅವಕಾಶ ಹೊಂದಿದೆ.