ಜೂನಿಯರ್​ ಏಷ್ಯಾಕಪ್​ ಕ್ರಿಕೆಟ್​: ಇಂದು ಭಾರತ-ಬಾಂಗ್ಲಾದೇಶ ಫೈನಲ್ ಫೈಟ್​​

web u19 asia
Published on

ದುಬೈ: ಬಲಿಷ್ಠ ಬ್ಯಾಟಿಂಗ್​ ವಿಭಾಗವನ್ನು ಹೊಂದಿರುವ ಭಾರತ ಮತ್ತು ಕರಾರುವಾಕ್​ ಬೌಲಿಂಗ್​ ವಿಭಾಗವನ್ನು ಹೊಂದಿರುವ ಬಾಂಗ್ಲಾದೇಶ ತಂಡಗಳು 19 ವಯೋಮಿತಿಯ ಏಷ್ಯಾಕಪ್​ ಏಕದಿನ ಕ್ರಿಕೆಟ್​ ಟೂರ್ನಿಯ ಫೈನಲ್​ನಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. ದುಬೈ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಬಾಂಗ್ಲಾವನ್ನು ಮಣಿಸಿ 9ನೇ ಬಾರಿ ಪ್ರಶಸ್ತಿ ಜಯಿಸುವುದು ಭಾರತ ತಂಡದ ಗುರಿಯಾಗಿದೆ.

ಟೂರ್ನಿಯಲ್ಲಿ 2021ರಲ್ಲಿ ಕೊನೇ ಬಾರಿ ಚಾಂಪಿಯನ್​ ಆಗಿರುವ ಭಾರತ ತಂಡ 2023ರ ಕಳೆದ ಆವೃತ್ತಿಯ ಸೆಮಿೈನಲ್​ನಲ್ಲಿ ಬಾಂಗ್ಲಾ ವಿರುದ್ಧ ಸೋತು ಹೊರಬಿದ್ದಿತ್ತು. ಅದಕ್ಕೀಗ ಸೇಡು ತೀರಿಸಿಕೊಳ್ಳುವ ಅವಕಾಶವೂ ಮೊಹಮದ್​ ಅಮಾನ್​ ಸಾರಥ್ಯದ ಭಾರತ ತಂಡದ ಮುಂದಿದೆ.

ಟೂರ್ನಿಯಲ್ಲಿ ಇದುವರೆಗೆ ಕ್ರಮವಾಗಿ 175 ಮತ್ತು 167 ರನ್​ ಸಿಡಿಸಿರುವ ಆರಂಭಿಕ ಆಯುಷ್​ ಮಹಾತ್ರೆ ಮತ್ತು 13 ವರ್ಷದ ವೈಭವ್​ ಸೂರ್ಯವಂಶಿ ಭಾರತೀಯ ಬ್ಯಾಟಿಂಗ್​ ಬಲವಾಗಿದ್ದಾರೆ. ಬಾಂಗ್ಲಾ ಪರ ಮೊಹಮದ್​ ಅಲ್​ ಹಾದ್​ ಮತ್ತು ಮೊಹಮದ್​ ಇಕ್ಬಾಲ್​ ಹಸನ್​ ತಲಾ 10 ವಿಕೆಟ್​ ಕಬಳಿಸಿ ಬೌಲಿಂಗ್​ನಲ್ಲಿ ಪ್ರಾಬಲ್ಯ ಮರೆದಿದ್ದಾರೆ.

ಪಾಕ್​ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಸೋತಿದ್ದ ಭಾರತ ತಂಡ ನಂತರದಲ್ಲಿ ಸತತ 3 ಪಂದ್ಯಗಳಲ್ಲಿ ಗೆದ್ದ ಆತ್ಮವಿಶ್ವಾಸದಲ್ಲಿದೆ. ಮತ್ತೊಂದೆಡೆ ಬಾಂಗ್ಲಾ ಲೀಗ್​ ಹಂತದಲ್ಲಿ ಲಂಕಾ ವಿರುದ್ಧ ಮಾತ್ರ ಸೋತಿದೆ.

*ಆರಂಭ: ಬೆಳಗ್ಗೆ 10.15, ನೇರ್​ಪ್ರಸಾರ: ಸೋನಿ ಸ್ಪೋರ್ಟ್ಸ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net