ಚಾಂಪಿಯನ್ಸ್​ ಟ್ರೋಫಿ ನಿರಾಸೆಯ ಬೆನ್ನಲ್ಲೇ ಶಾಕಿಂಗ್​ ನಿರ್ಧಾರ ಪ್ರಕಟಿಸಿದ ಇಂಗ್ಲೆಂಡ್​ ನಾಯಕ ಜೋಸ್​ ಬಟ್ಲರ್​!

web buttler
Published on

ಕರಾಚಿ: ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಲೀಗ್​ ಹಂತದಲ್ಲೇ ನಿರ್ಗಮಿಸಿರುವ ಹಿನ್ನೆಲೆಯಲ್ಲಿ ಜೋಸ್​ ಬಟ್ಲರ್​ ಇಂಗ್ಲೆಂಡ್​ನ ಏಕದಿನ ಮತ್ತು ಟಿ20 ತಂಡಗಳ ನಾಯಕತ್ವ ತ್ಯಜಿಸಲು ನಿರ್ಧರಿಸಿದ್ದಾರೆ. ದ. ಆಫ್ರಿಕಾ ವಿರುದ್ಧದ ಕೊನೇ ಲೀಗ್​ ಪಂದ್ಯಕ್ಕೆ ಮುನ್ನ ಶನಿವಾರ ಅವರು ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅವರು 2022ರ ಜೂನ್​ನಿಂದ ಇಂಗ್ಲೆಂಡ್​ ವೈಟ್​ಬಾಲ್​ ತಂಡದ ನಾಯಕರಾಗಿದ್ದಾರೆ.

ನಾನು ಇಂಗ್ಲೆಂಡ್​ ನಾಯಕತ್ವ ತ್ಯಜಿಸಲಿದ್ದೇನೆ. ಇದು ನನ್ನ ಮತ್ತು ಇಂಗ್ಲೆಂಡ್​ ತಂಡದ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರವೆನಿಸಿದೆ. ನಾನು ಅತ್ಯಂತ ಸ್ಪಷ್ಟವಾಗಿರುವೆ. ನಮಗಿದು ಪ್ರಮುಖ ಟೂರ್ನಿ ಆಗಿತ್ತು. ಆದರೆ ನನ್ನ ನಾಯಕತ್ವದಲ್ಲಿ ಉತ್ತಮ ನಿರ್ವಹಣೆ ಬರಲಿಲ್ಲ. ಹಳೆಯ ಟೂರ್ನಿಗಳ ಹ್ಯಾಂಗ್​ಓವರ್​ ಕಾಣಿಸಿತು. ಹೀಗಾಗಿ ನನ್ನ ನಾಯಕತ್ವ ಈಗ ಮುಕ್ತಾಯದ ಹಂತ ತಲುಪಿದೆ ಎಂದು 34 ವರ್ಷದ ಬಟ್ಲರ್​ ಕೊನೇ ಲೀಗ್​ ಪಂದ್ಯಕ್ಕೆ ತಿಳಿಸಿದರು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಸದ್ಯಕ್ಕಿಲ್ಲ ಎಂದೂ ಬಟ್ಲರ್​ ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆಯಲಿರುವ ಪಂದ್ಯ ಬಟ್ಲರ್​ ನಾಯಕತ್ವದಲ್ಲಿ ಆಂಗ್ಲರಿಗೆ ಕೊನೇ ಪಂದ್ಯವಾಗಿರಲಿದೆ. 2022ರಲ್ಲಿ ಬಟ್ಲರ್​ ನಾಯಕತ್ವದಲ್ಲೇ ಇಂಗ್ಲೆಂಡ್​ ಟಿ20 ವಿಶ್ವಕಪ್​ ಜಯಿಸಿತ್ತು. ಆದರೆ ಅವರ ನಾಯಕತ್ವದಲ್ಲೇ ಆಡಿದ 2023 ಏಕದಿನ ವಿಶ್ವಕಪ್​ನಲ್ಲಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಕಳೆದ ವರ್ಷ ಟಿ20 ವಿಶ್ವಕಪ್​ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು.

ಬಟ್ಲರ್​ ನಾಯಕತ್ವದಲ್ಲಿ ಆಡಿದ 44 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್​ 18ರಲ್ಲಿ ಗೆದ್ದು 25ರಲ್ಲಿ ಸೋತಿದೆ. ಒಂದು ಪಂದ್ಯ ರದ್ದಾಗಿದೆ. ಬಟ್ಲರ್​ ಸಾರಥ್ಯದ ಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ ಸುಧಾರಿತ ದಾಖಲೆ ಹೊಂದಿದ್ದು, 26 ಜಯ, 22 ಸೋಲು ಕಂಡಿದೆ. 3 ಪಂದ್ಯಗಳು ರದ್ದಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net