ICC Champions Trophy: ಮಳೆಯಿಂದ ಪಂದ್ಯ ರದ್ದಾದರೂ ಸೆಮಿಫೈನಲ್​ ಪ್ರವೇಶಿಸಿದ ಆಸ್ಟ್ರೇಲಿಯಾ!

web aus
Published on

ಲಾಹೋರ್​: ಏಕದಿನ ಕ್ರಿಕೆಟ್​ ವಿಶ್ವ ಚಾಂಪಿಯನ್​ ಆಸ್ಟ್ರೆಲಿಯಾ ತಂಡ ಸುಲಭ ಗೆಲುವಿನತ್ತ ಮುನ್ನುತ್ತಿದ್ದಾಗ ಕಾಡಿದ ಮಳೆಯಿಂದಾಗಿ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ತನ್ನ 3ನೇ ಹಾಗೂ ಕೊನೇ ಲೀಗ್​ ಪಂದ್ಯ ರದ್ದುಗೊಂಡು ಅಂಕ ಹಂಚಿಕೊಂಡಿತು. ಸತತ 2ನೇ ಪಂದ್ಯದಲ್ಲಿ ಒಂದು ಅಂಕಕ್ಕೆ ತೃಪ್ತಿಪಟ್ಟ ನಡುವೆಯೂ ಆಸ್ಟ್ರೆಲಿಯಾ ತಂಡ ಬಿ ಗುಂಪಿನ ಮೊದಲ ತಂಡವಾಗಿ ಸೆಮಿಫೈನಲ್​ ಪ್ರವೇಶ ಖಚಿತಪಡಿಸಿಕೊಂಡಿತು. ಗಣಿತಶಾಸ್ತ್ರದ ಪ್ರಕಾರ ಅಫ್ಘಾನಿಸ್ತಾನ ತಂಡದ ಸೆಮೀಸ್​ ಆಸೆ ಈಗಲೂ ಜೀವಂತವಿದ್ದರೂ, ಅದರ ನಿರ್ಗಮನ ಬಹುತೇಕ ಖಚಿತವೆನ್ನಬಹುದು. ದ. ಆಫ್ರಿಕಾ ತಂಡ ಶನಿವಾರ 200ಕ್ಕೂ ಅಧಿಕ ರನ್​ ಅಂತರದಿಂದ ಇಂಗ್ಲೆಂಡ್​ ಎದುರು ಸೋತರಷ್ಟೇ ಆಫ್ಘನ್​ ಸೆಮೀಸ್​ ಪ್ರವೇಶಿಸಲಿದೆ.

ಗಡಾಫಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಆ್ಘನ್​ ತಂಡ ಸೆದಿಖುಲ್ಲಾ ಅಟಲ್​ (85 ರನ್​, 95 ಎಸೆತ, 6 ಬೌಂಡರಿ, 3 ಸಿಕ್ಸರ್​) ಮತ್ತು ಅಜ್ಮತ್​ಉಲ್ಲಾ ಒಮರ್ಜಾಯಿ (67 ರನ್​, 63 ಎಸೆತ, 1 ಬೌಂಡರಿ, 5 ಸಿಕ್ಸರ್​) ಅರ್ಧಶತಕದ ನಡುವೆ ಭರ್ತಿ 50 ಓವರ್​ಗಳಲ್ಲಿ 273 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಎಡಗೈ ಆರಂಭಿಕ ಟ್ರಾವಿಸ್​ ಹೆಡ್​ (59*ರನ್​, 40 ಎಸೆತ, 9 ಬೌಂಡರಿ, 1 ಸಿಕ್ಸರ್​) ಬಿರುಸಿನ ಬ್ಯಾಟಿಂಗ್​ನಿಂದ ಆಸೀಸ್​ 12.5 ಓವರ್​ಗಳಲ್ಲಿ 1 ವಿಕೆಟ್​ಗೆ 109 ರನ್​ ಗಳಿಸಿ ಜಯದತ್ತ ಸಾಗುತ್ತಿದ್ದಾಗ ಮಳೆ ಅಡಚಣೆ ತಂದಿತು. ಒಂದೂವರೆ ಗಂಟೆಯ ನಂತರ ಮಳೆ ನಿಂತರೂ, ಮೈದಾನವನ್ನು ಆಟಕ್ಕೆ ಸಜ್ಜುಗೊಳಿಸಲು ಗ್ರೌಂಡ್ಸ್​ಮನ್​ ಶಕ್ತರಾಗಲಿಲ್ಲ. ಒದ್ದೆಯಾಗಿದ್ದ ಮೈದಾನದಲ್ಲಿ ಆಟ ಮುಂದುವರಿಸಲು ಅಸಾಧ್ಯವೆನಿಸಿದ ಕಾರಣ ಅಂಪೈರ್ಸ್​ ಪಂದ್ಯ ರದ್ದುಗೊಳಿಸಿದರು.

ಪಂದ್ಯದಲ್ಲಿ ಡಕ್ವರ್ತ್​-ಲೂಯಿಸ್​ ನಿಯಮದನ್ವಯ ಲಿತಾಂಶ ನಿರ್ಧರಿಸಲು ಆಸೀಸ್​ ಕನಿಷ್ಠ 20 ಓವರ್​ ಬ್ಯಾಟಿಂಗ್​ ಮಾಡುವುದು ಅಗತ್ಯವಾಗಿತ್ತು. ಒಂದು ವೇಳೆ ಪಂದ್ಯದಲ್ಲಿ ಓವರ್​ ಕಡಿತಗೊಂಡು ಕನಿಷ್ಠ 20 ಓವರ್​ಗಳಿಗೆ ಇಳಿದಿದ್ದರೆ ಆಸೀಸ್​ 123 ರನ್​ ಗಳಿಸಿದರೂ ಗೆಲುವು ಸಾಧಿಸುತ್ತಿತ್ತು.

ಅಫ್ಘಾನಿಸ್ತಾನ: 50 ಓವರ್​ಗಳಲ್ಲಿ 273 (ಗುರ್ಬಜ್​ 0, ಜದ್ರಾನ್​ 22, ಅಟಲ್​ 85, ರಹಮತ್​ 12, ಶಾಹಿದಿ 20, ಒಮರ್ಜಾಯಿ 67, ನಬಿ 1, ನೈಬ್​ 4, ರಶೀದ್​ ಖಾನ್​ 19, ಡ್ವಾರ್ಶುಯಿಸ್​ 47ಕ್ಕೆ 3, ಸ್ಪೆನ್ಸರ್​ 49ಕ್ಕೆ 2, ಜಂಪಾ 48ಕ್ಕೆ 2, ಎಲ್ಲಿಸ್​ 60ಕ್ಕೆ 1, ಮ್ಯಾಕ್ಸ್​ವೆಲ್​ 28ಕ್ಕೆ 1). ಆಸ್ಟ್ರೆಲಿಯಾ: 12.5 ಓವರ್​ಗಳಲ್ಲಿ 1 ವಿಕೆಟ್​ಗೆ 109 (ಶಾರ್ಟ್​ 20, ಹೆಡ್​ 59*, ಸ್ಮಿತ್​ 19, ಒಮರ್ಜಾಯಿ 43ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net