ಸಾಧಕ ಕ್ರೀಡಾ ಪಟುಗಳ ತಾಯಂದಿರಿಗೆ ಜೀಜಾಮಾತ ಸನ್ಮಾನ; ಕ್ರೀಡಾ ಭಾರತಿಯಿಂದ ಪ್ರಶಸ್ತಿ ಪುಸ್ಕಾರ

ಸನ್ಮಾನ
Published on

ಬೆಂಗಳೂರು: ಕ್ರೀಡಾ ಭಾರತಿ ಕರ್ನಾಟಕದ ವತಿಯಿಂದ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಿದ ಕ್ರೀಡಾಪಟುಗಳ ತಾಯಂದಿರನ್ನು ಗುರುತಿಸಿ ಗೌರವಿಸುವ "ಜೀಜಾಮಾತ ಸನ್ಮಾನ" ಕಾರ್ಯಕ್ರಮ ರಾಜಭವನದಲ್ಲಿ ನಡೆಯಿತು.

ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾ ಸಾಧಕರನ್ನು ಎಲ್ಲೆಡೆ ಗೌರವಿಸುತ್ತಾರೆ. ಆದರೆ ಆ ಸಾಧನೆಯ ಹಿಂದೆ ಸಕಲ ರೀತಿಯ ತ್ಯಾಗವನ್ನು ಮಾಡಿದ ಕ್ರೀಡಾಪಟುವಿನ ತಾಯಂದಿರನ್ನು ಗುರುತಿಸುವ ಕಾರ್ಯ ನಡೆಯುವುದಿಲ್ಲ. ಕ್ರೀಡಾ ಸಾಧಕರ ತಾಯಂದಿರನ್ನು ಜೀಜಾಮಾತ ಪುರಸ್ಕಾರ ಕಾರ್ಯಕ್ರಮದ ಮೂಲಕ, ಕ್ರೀಡಾ ಭಾರತಿಯು ಗುರುತಿಸುವ ಕಾರ್ಯ ಮಾಡಿದ್ದು ಒಂದು ಉತ್ತಮ ಬೆಳವಣಿಗೆ ಎಂದು ಮುಖ್ಯ ಅತಿಥಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮಾತನಾಡುತ್ತಾ, ಕ್ರೀಡಾ ಭಾರತಿಯ ಈ ಕಾರ್ಯ ಮಾತೆಯರಿಗೆ ಇನ್ನಷ್ಟು ಪ್ರೇರಣೆ ನೀಡಲಿದೆ. ತಾಯಂದಿರು ತಮ್ಮ ಮಕ್ಕಳು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದರು.

ಕ್ರೀಡಾ ಭಾರತಿ ಅಖಿಲ ಭಾರತ ಕಾರ್ಯಾಧ್ಯಕ್ಷ ಮಧ್ಯಪ್ರದೇಶದ ರತ್ಲಾಂ ಕ್ಷೇತ್ರದ ಶಾಸಕ ಚೈತನ್ಯ ಕಶ್ಯಪ್ ಮಾತನಾಡಿ, ಕ್ರೀಡಾ ಭಾರತಿಯು ರಾಷ್ಟ್ರೀಯ ಕ್ರೀಡಾ ಸಂಘಟನೆಯಾಗಿದ್ದು ಕ್ರೀಡೆಯಿಂದ ಚಾರಿತ್ಯ, ಚಾರಿತ್ರ್ಯದಿಂದ ರಾಷ್ಟ್ರ ನಿರ್ಮಾಣ ಎಂಬ ಧ್ಯೇಯದೊಂದಿಗೆ ಕಳೆದ 30 ವರ್ಷಗಳಿಂದ ದೇಶಾದ್ಯಂತ ಕ್ರೀಡಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಸ್ವಸ್ಥ ಸಮಾಜ ನಿರ್ಮಾಣ ದೃಷ್ಟಿಯಿಂದ ಎಲ್ಲಾ ವಯೋಮಾನದವರು ಕ್ರೀಡೆಯಲ್ಲಿ ತೊಡಗಬೇಕು. ಆಟವಾಡುವ ಸಹಜ ಗುಣ ನಮ್ಮಲ್ಲಿ ಬೆಳೆಯಬೇಕು.

ಕ್ರೀಡಾ ಸಾಧಕರ ತಾಯಂದಿರನ್ನು ಗುರುತಿಸಿ ಗೌರವಿಸುವ ಸಲುವಾಗಿ ಕ್ರೀಡಾ ಭಾರತಿಯು ಹಲವು ವರ್ಷಗಳಿಂದ ಜೀಜಾಮಾತ ಪುರಸ್ಕಾರವನ್ನು ನೀಡುತ್ತಾ ಬರುತ್ತಿದೆ. ಹಾಗೆಯೇ ಕ್ರೀಡೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುವ ತರಬೇತುದಾರರನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ "ವಿದ್ಯಾರಣ್ಯ ಪ್ರಶಸ್ತಿ"ಯನ್ನು ತರಬೇತುದಾರರಿಗೆ ನೀಡುತ್ತಾ ಬರುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ 9 ಮಂದಿಗೆ ಜೀಜಾ ಮಾತಾ ಪುರಸ್ಕಾರ, 4 ಮಂದಿಗೆ ವಿದ್ಯಾರಣ್ಯ ಪ್ರಶಸ್ತಿ ಹಾಗೂ ಒಬ್ಬರಿಗೆ ಕ್ರೀಡಾಪೋಷಕ ಪ್ರಶಸ್ತಿಯನ್ನು ನೀಡಲಾಯಿತು.

ರಮೇಶ್ ಸುರೇಶ್ -ಕಬಡ್ಡಿ, ಶ್ರೀಹರಿ -ಸ್ವಿಮ್ಮಿಂಗ್, ಪ್ರಿಯಾ ಮೋಹನ್ ಮತ್ತು ವಿಜಯಕುಮಾರಿ -ಅಥ್ಲೆಟಿಕ್, ಲಕ್ಷ್ಮಿ -ಫೆನ್ಸಿಂಗ್, ಮನು -ಜಾವೆಲಿನ್, ಗುರುರಾಜ ಪೂಜಾರಿ ಹಾಗೂ ಪುನೀತ್ -ವೇಟ್ ಲಿಫ್ಟಿಂಗ್, ವೆಂಕಪ್ಪ ಕೆಂಗಲಗತ್ತಿ -ಸೈಕ್ಲಿಂಗ್ ಮುಂತಾದ ಕ್ರೀಡಾ ಸಾಧಕರ ತಾಯಂದಿರನ್ನು ಜೀಜಾಮಾತ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕ್ರೀಡಾ ಭಾರತೀಯ ಕರ್ನಾಟಕ ಆಂಧ್ರ ತೆಲಂಗಾಣ ರಾಜ್ಯವನ್ನೊಳಗೊಂಡ ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕ ಚಂದ್ರಶೇಖರ ಜಾಗೀರ್ದಾರ್ ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದರು. ಕ್ರೀಡಾ ಭಾರತಿ ರಾಜ್ಯ ಅಧ್ಯಕ್ಷ ಮುಕುಂದರಾವ್ ಕಿಲ್ಲೇಕರ್, ರಾಜ್ಯ ಉಪಾಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಪದ್ಮಶ್ರೀ ಕೆ.ವೈ ವೆಂಕಟೇಶ್, ರಾಜ್ಯ ಕಾರ್ಯದರ್ಶಿ ಅಶೋಕ್ ಶ್ರೀOತ್ರೆ, ಕರ್ನಾಟಕ ದಕ್ಷಿಣ ಪ್ರಾಂತದ ಕ್ರೀಡಾ ಭಾರತಿಯ ಅಧ್ಯಕ್ಷ ಡಾ. ವೈ.ಎಸ್ ಲಕ್ಷ್ಮೀಶ ಮುಂತಾದವರು ಉಪಸ್ಥಿತರಿದ್ದರು. ಕ್ರೀಡಾ ಭಾರತಿ ಕರ್ನಾಟಕದ ದಕ್ಷಿಣ ಪ್ರಾಂತದ ಕಾರ್ಯದರ್ಶಿಗಳಾದ ಮಹೇಂದ್ರ ಪ್ರಸಾದ್ ಸ್ವಾಗತಿಸಿ ಕ್ರೀಡಾ ಭಾರತಿ ರಾಜ್ಯ ಸಹ ಕಾರ್ಯದರ್ಶಿಗಳಾದ ಬಸವರಾಜ್ ಅವರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net