

ನವದೆಹಲಿ: ಐಸಿಸಿಯ ನೂತನ ಅಧ್ಯಕ್ಷರಾಗಿ ಜಯ್ ಷಾ ಅವಿರೋಧವಾಗಿ ಆಯ್ಕೆಯಾಗಿದ್ದು, ಡಿಸೆಂಬರ್ನಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಚಾಂಪಿಯನ್ಸ್ ಟ್ರೋಫಿ ವಿವಾದದ ಹೊರತಾಗಿಯೂ ಪಾಕಿಸ್ತಾನವು ಕೂಡ ಜಯ್ ಷಾ ಆಯ್ಕೆಯನ್ನು ಒಪ್ಪಿಕೊಂಡಿದ್ದು, ಸದಸ್ಯ ರಾಷ್ಟ್ರಗಳಿಗೆ ಸಹಕಾರ ನೀಡಿದೆ.
ಇತ್ತ ಜಯ್ ಷಾ ಐಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಮಾತನಾಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್, ಜಯ್ ಷಾ ಆಯ್ಕೆ ಪಿಸಿಬಿಯ ಮಾಸ್ಟರ್ಸ್ಟ್ರೋಕ್ ಎಂದು ಬಣ್ಣಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಕುರಿತು ಮಾತನಾಡಿದ ಲತೀಫ್, ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ ಜಯ್ ಷಾ ಅವರ ಆಯ್ಕೆಯನ್ನು ಯಾವುದೇ ಕಾರಣಕ್ಕೂ ವಿರೋಧಿಸಲಿಲ್ಲ. ಏಕೆಂದರೆ 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪಾಕ್ ನೆಲಕ್ಕೆ ಬಂದು ಆಡಲಿದೆ ಎಂಬ ವಿಶ್ವಾಸವಿದೆ.
ಭಾರತ ಪಾಕಿಸ್ತಾನಕ್ಕೆ ಬರುವ ಸಂಬಂಧ ಈಗಾಗಲೇ ಅರ್ಧ ಅನುಮತಿ ಸಿಕ್ಕಿದ್ದು, ಭಾರತವು ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಬರುತ್ತಿದೆ. ಉಭಯ ದೇಶಗಳ ನಡುವಿನ ಸಂಬಂಧ ಖಾತ್ರಿಪಡಿಸುವಲ್ಲಿ ಜಯ್ ಷಾ ಪ್ರಮುಖ ಪಾತ್ರವಹಿಸಲಿದ್ದಾರೆ. ಅವರು ಭಾರತವನ್ನು ಪಾಕಿಸ್ತಾನಕ್ಕೆ ಕರೆತರುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ರಶೀದ್ ಲತೀಫ್ ಹೇಳಿದ್ದಾರೆ.
ಹಾಲಿ ಚಾಂಪಿಯನ್ಸ್ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯೂ ಫೆಬ್ರವರಿ 19ರಂದು ಆರಂಭವಾಗಲಿದ್ದು, ಸಂಪೂರ್ಣ ಟೂರ್ನಿಯು ಪಾಕಿಸ್ತಾನದ ನೆಲದಲ್ಲಿಯೇ ನಡೆಯಲಿದೆ. ಭದ್ರತೆಯ ಕಾರಣದಿಂದಾಗಿ ಭಾರತ ಪಾಕಿಸ್ತಾನದಲ್ಲಿ ಆಡಲು ಹಿಂದೇಟು ಹಾಕುತ್ತಿದ್ದು, ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು ಎಂದು ವಿನಂತಿಸಿದೆ. ಐಸಿಸಿ ಕೂಡ ಭಾರತದ ಬೇಡಿಕೆಗೆ ಸ್ಪಂದಿಸಿದ್ದು, ಪಿಸಿಬಿ ಮಾತ್ರ ಹೈಬ್ರಿಡ್ ಮಾದರಿಯಲ್ಲಿ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದೆ. ಇದೀಗ ಜಯ್ ಷಾ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.