

ಗದಗ: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಹುನ್ನಾರ ಮಾಡುತ್ತಿದ್ದಾರೆ. ಇದೇ ಮುಂದುವರೆದರೆ ಬಾಂಗ್ಲಾದೇಶದಲ್ಲಿನ ಸದ್ಯದ ಪರಿಸ್ಥಿತಿ ಮುಂದೊಂದು ದಿನ ಭಾರತದಲ್ಲಿ ಉದ್ಭವಿಸಬಹುದು, ಜನರು ಪ್ರಧಾನಿ ಮೋದಿ ನಿವಾಸಕ್ಕೆ ಇದೇ ರೀತಿ ನುಗ್ಗಲಿದ್ದಾರೆ ಎಂದು ರೋಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಿ.ಎಸ್. ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗಜೇಂದ್ರಗಢದಲ್ಲಿ ನಡೆದ ಅಹಿಂದ ಸಮಾವೇಶದಲ್ಲಿ ಮಾತನಾಡಿದ ಶಾಸಕ ಜಿ.ಎಸ್. ಪಾಟೀಲ್ ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಶಾಸಕರ ಹೇಳಿಕೆ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು, ಕಿಡಿಕಾರಿದ್ದಾರೆ.
ನಾವೆಲ್ಲರೂ ಒಂದಾಗಬೇಕು, ಗಟ್ಟಿಯಾಗಬೇಕು. ಧ್ವನಿಗಟ್ಟಿಗೊಳಿಸಬೇಕು. ನಮ್ಮ ಹೋರಾಟ ಮುಂದುವರೆಯಬೇಕು. ಸಿದ್ದರಾಮಯ್ಯ, ಕಾಂಗ್ರೆಸ್ ವಿರುದ್ಧ ಬಿಜೆಪಿ ಹುನ್ನಾರ ಮಾಡಿದೆ. ಸಿದ್ದರಾಮಯ್ಯಗೆ ಈ ಸ್ಥಿತಿ ಬರಲು ಅಮಿತ್ ಷಾ ಕಾರಣ. ಅವರು ರಾಜಕೀಯ ಜೀವನದುದ್ದಕ್ಕೂ ಇಂಥದ್ದನ್ನೇ ಮಾಡಿಕೊಂಡು ಬಂದವರು. ಅಂಥವರ ಕೈಗೆ ನಾವು ದೇಶ ಕೊಟ್ಟಿದ್ದೇವೆ. ಈ ದೇಶ ಯಾವ ರೀತಿ ಮುನ್ನಡೆಯಬೇಕು ಎಂಬ ಬಗ್ಗೆ ನಾವು ಯೋಚಿಸಬೇಕು. ಬಾಂಗ್ಲಾದೇಶದಲ್ಲಿ ಜನ ಪ್ರಧಾನಿ ಮನೆಗೆ ಹೊಕ್ಕಂತೆ ಈ ದೇಶದಲ್ಲಿಯೂ ನುಗ್ಗುವ ದಿನ ಬಹಳ ದೂರ ಇಲ್ಲ. ಅದಕ್ಕೇ ಹೇಳುತ್ತಿದ್ದೇನೆ, ನಾವೆಲ್ಲ ಒಂದಾಗಬೇಕು. ಗಟ್ಟಿಯಾಗಬೇಕು. ನಮ್ಮ ಧ್ವನಿ ಗಟ್ಟಿಯಾಗಬೇಕು, ನಮ್ಮ ಹೋರಾಟ ಮುಂದುವರಿಯಬೇಕು ಎಂದು ಹೇಳಿದ್ದಾರೆ.
ಶಾಸಕ ಜಿ.ಎಸ್. ಪಾಟೀಲ್ ಹೇಳಿಕೆಗೆ ಕಿಡಿಕಾರಿರುವ ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯಪಾಲರ ಮೇಲೆ ಬಾಂಗ್ಲಾದೇಶದ ಮಾದರಿಯಲ್ಲಿ ಕಲ್ಲು ತೂರಾಟ ಮಾಡಿ ದಾಳಿ ಮಾಡುತ್ತೇವೆ ಎಂದು ನಾಲಿಗೆ ಹರಿಬಿಟ್ಟಿದ್ದ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ಹೇಳಿಕೆ ಬೆನ್ನಲ್ಲೇ ಈಗ ಮತ್ತೊಬ್ಬ ಕಾಂಗ್ರೆಸ್ ಶಾಸಕ ಬಾಂಗ್ಲಾದೇಶದ ರೀತಿಯಲ್ಲಿ ಪ್ರಧಾನಿ ಮೋದಿ ಅವರ ಮೇಲೆ ದಾಳಿ ಮಾಡುತ್ತೇವೆ ಎಂದು ನಾಲಿಗೆ ಹರಿಬಿಟ್ಟಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಸಂಸದ ರಮೇಶ್ ಜಿಗಜಿಣಗಿ ಮಾತನಾಡಿ, ಕಾಂಗ್ರೆಸ್ ನಾಯಕರು ಮತ್ತು ಶಾಸಕರಿಗೆ ಜಾಸ್ತಿ ತಿಳವಳಿಕೆ ಇಲ್ಲ. ಚುನಾವಣೆಯಲ್ಲಿ ಗೆದ್ದು ಬಂದಿದ್ದಕ್ಕೆ ದೊಡ್ಡವರು ಎಂದು ತಿಳಿದುಕೊಂಡಿದ್ದಾರೆ. ರಾಜ್ಯವನ್ನು ಹದೆಗೆಡಿಸಿದ್ದಾರೆ, ಒಂದೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಜನರ ತಲೆಕೆಡಿಸಿ ಅಧಿಕಾರಕ್ಕೆ ಬಂದಿದ್ದಾರೆ. ರೋಣ ಶಾಸಕ ಕಾಂಗ್ರೆಸ್ ಜಿಎಸ್ ಪಾಟೀಲ್ ಬಾಂಗ್ಲಾ ದೇಶದಂತೆ ಜನರು ದಂಗೆ ಏಳುತ್ತಾರೆಂದು ಹೇಳಿದ್ದು ಸರಿಯಲ್ಲ. ಬಾಂಗ್ಲಾ ದೇಶದ ಪರಿಸ್ಥಿತಿ ಮೋದಿಗೆ ಆಗಲು ಸಾಧ್ಯವಿಲ್ಲ. ಅದೇನಾದರೂ ಆದರೆ, ಅದು ಕಾಂಗ್ರೆಸ್ಗೆ ಆಗಬೇಕಷ್ಟೇ ಎಂದು ಸಂಸದ ರಮೇಶ್ ಜಿಗಜಿಣಗಿ ಕಿಡಿಕಾರಿದ್ದಾರೆ.