

ಪಲ್ಲೆಕಿಲೆ: ಮಾಜಿ ವೇಗಿ ಹಾಗೂ ಕನ್ನಡಿಗ ಜಾವಗಲ್ ಶ್ರೀನಾಥ್ಗೆ ಭಾರತ-ನೇಪಾಳ ನಡುವಿನ ಕಾದಾಟ, ಐಸಿಸಿ ಮ್ಯಾಚ್ ರೆಫ್ರಿಯಾಗಿ 250ನೇ ಪಂದ್ಯ ಆಗಿರಲಿದೆ. ರಂಜನ್ ಮದುಗಲೆ, ಕ್ರಿಸ್ ಬ್ರಾಡ್ ಮತ್ತು ಜೆಫ್ ಕ್ರೋವ್ ಬಳಿಕ ಈ ಸಾಧನೆ ಮಾಡಿದ 4ನೇ ರೆಫ್ರಿ ಎನಿಸಲಿದ್ದಾರೆ.
"ಮ್ಯಾಚ್ ರೆಫ್ರಿಯಾಗಿ ಈ ಮೈಲಿಗಲ್ಲು ನೆಡುತ್ತಿರುವುದು ವಿಶೇಷವಾಗಿದೆ. ಕಳೆದ 17 ವರ್ಷಗಳಿಂದ ಈ ಕೆಲಸ ನಿರ್ವಹಿಸುತ್ತಿರುವೆ. ನಾನು ಆಡಿರುವುದಕ್ಕಿಂತ ಹೆಚ್ಚಿನ ಏಕದಿನ ಪಂದ್ಯಗಳಲ್ಲಿ ಈಗ ಮ್ಯಾಚ್ ರೆಫ್ರಿಯಾಗಿ ಕಾರ್ಯನಿರ್ವಹಿಸಿರುವೆ ಎಂಬುದು ನಿಜಕ್ಕೂ ನಂಬಲಸಾಧ್ಯ' ಎಂದು 54 ವರ್ಷದ ಜಾವಗಲ್ ಶ್ರೀನಾಥ್ ತಿಳಿಸಿದ್ದಾರೆ. ಅವರು ಭಾರತ ತಂಡದ ಪರ 67 ಟೆಸ್ಟ್, 229 ಏಕದಿನ ಪಂದ್ಯ ಆಡಿದ್ದಾರೆ.
"ಈ ಕೆಲಸದೊಂದಿಗೆ ಈಗಲೂ ಕ್ರಿಕೆಟ್ ಆಟದೊಂದಿಗೆ ಸಂಬಂಧ ಮುಂದುವರಿಸಿರುವುದು ನನ್ನ ಭಾಗ್ಯ. 2006ರಲ್ಲಿ ಶ್ರೀಲಂಕಾ&ದಣ ಆಫ್ರಿಕಾ ನಡುವೆ ಕೊಲಂಬೊದಲ್ಲಿ ನಡೆದ ಟೆಸ್ಟ್ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಮ್ಯಾಚ್ ರೆಫ್ರಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದೆ. ಮುಂಬರುವ ದಿನಗಳಲ್ಲೂ ಸಾಧ್ಯವಾದಷ್ಟು ಕಾಲ ಈ ಕೆಲಸದಲ್ಲಿ ಮುಂದುವರಿಯಲು ಬಯಸಿರುವೆ' ಎಂದು ಶ್ರೀನಾಥ್ ತಿಳಿಸಿದ್ದಾರೆ. ಅವರು ಇದುವರೆಗೆ 65 ಟೆಸ್ಟ್, 118 ಟಿ20 ಮತ್ತು 16 ಮಹಿಳಾ ಟಿ20 ಪಂದ್ಯಗಳಲ್ಲೂ ಮ್ಯಾಚ್ ರೆಫ್ರಿಯಾಗಿದ್ದಾರೆ. 2007ರ ಏಕದಿನ ವಿಶ್ವಕಪ್, 2009, 2013ರ ಚಾಂಪಿಯನ್ಸ್ ಟ್ರೋಫಿ, 2012, 2014, 2016, 2021ರ ಟಿ20 ವಿಶ್ವಕಪ್ಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ.