VIDEO: ರಬಾಡಗೆ ಭರ್ಜರಿ ಸಿಕ್ಸರ್ ಸಿಡಿಸಿದ ಬುಮ್ರಾ, ಪತ್ನಿ ಸಂಜನಾ ಸಂಭ್ರಮ

bumrah web
Published on

ಜೊಹಾನ್ಸ್‌ಬರ್ಗ್: ಕಂಗೆಡಿಸುವ ಯಾರ್ಕರ್ ಎಸೆತಗಳಿಗೆ ಹೆಸರಾಗಿರುವ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ ಇತ್ತೀಚೆಗೆ ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕೊಡುಗೆಗಳನ್ನು ನೀಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 200ರ ಗಡಿ ದಾಟುವಲ್ಲಿ ಬುಮ್ರಾ ಕೊಡುಗೆ ಅಮೂಲ್ಯವಾದುದು. ಅದರಲ್ಲೂ ಅವರು ದಕ್ಷಿಣ ಆಫ್ರಿಕಾದ ಪ್ರಮುಖ ವೇಗಿ ಕಗಿಸೊ ರಬಾಡ ಎಸೆತದಲ್ಲಿ ಸಿಡಿಸಿದ ಭರ್ಜರಿ ಸಿಕ್ಸರ್ ಭಾರಿ ಗಮನಸೆಳೆಯಿತು. ಅವರ ಪತ್ನಿ ಮತ್ತು ಟಿವಿ ನಿರೂಪಕಿ ಸಂಜನಾ ಗಣೇಶನ್ ಕೂಡ ಈ ಸಿಕ್ಸರ್‌ಗೆ ಫಿದಾ ಆಗಿಬಿಟ್ಟಿದ್ದರು.

ಜೊಹಾನ್ಸ್‌ಬರ್ಗ್ ಟೆಸ್ಟ್‌ನ ಮೊದಲ ದಿನ ಶಮಿ ಔಟಾದ ಬೆನ್ನಲ್ಲೇ 10ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದಿದ್ದ ಬುಮ್ರಾ 11 ಎಸೆತಗಳಲ್ಲಿ 14 ರನ್ ಬಾರಿಸಿದರು. ಈ ವೇಳೆ ರಬಾಡ ಎಸೆದ ಬೌನ್ಸರ್ ಎಸೆತಕ್ಕೆ ಬುಮ್ರಾ ಭರ್ಜರಿ ಸಿಕ್ಸರ್ ಸಿಡಿಸಿದರು. ಆಗ ವಾಂಡರರ್ಸ್‌ ಸ್ಟೇಡಿಯಂನ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಸಂಜನಾ ಗಣೇಶನ್ ಚಪ್ಪಾಳೆ ತಟ್ಟುವ ಜತೆಗೆ ನಗುಮೊಗದೊಂದಿಗೆ ಸಂಭ್ರಮಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ ಅವರಂಥ ಟೆಸ್ಟ್ ತಜ್ಞ ಬ್ಯಾಟರ್‌ಗಳ ವೈಫಲ್ಯದ ನಡುವೆ ಬುಮ್ರಾ ಅವರಂಥ ಬಾಲಂಗೋಚಿಯಿಂದ ಉಪಯುಕ್ತ ಕೊಡುಗೆ ಬಂದಿದ್ದು, ಟೀಮ್ ಇಂಡಿಯಾದಲ್ಲೂ ಸಾಕಷ್ಟು ಸಂಭ್ರಮ ತಂದಿತು. ಈ ಪಂದ್ಯಕ್ಕೆ ಉಪನಾಯಕರಾಗಿಯೂ ಬಡ್ತಿ ಪಡೆದಿರುವ ಬುಮ್ರಾ, ಈ ಹೊಸ ಜವಾಬ್ದಾರಿಯನ್ನು ಸಮರ್ಥವಾಗಿಯೇ ನಿರ್ವಹಿಸಿದಂತಿತ್ತು ಈ ಸಿಕ್ಸರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net