More

    ಟೀಮ್ ಇಂಡಿಯಾ ನಾಯಕತ್ವ ವಹಿಸುವ ಮೂಲಕ ಹಲವು ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್

    ಜೊಹಾನ್ಸ್‌ಬರ್ಗ್: ಬೆನ್ನು ನೋವಿನ ಸಮಸ್ಯೆಯಿಂದಾಗಿ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ಕೊನೇಕ್ಷಣದಲ್ಲಿ ಹೊರಗುಳಿದರು. ಅವರ ಗೈರಲ್ಲಿ ಕನ್ನಡಿಗ ಕೆಎಲ್ ರಾಹುಲ್ ಟೆಸ್ಟ್ ನಾಯಕರಾಗಿ ಬಡ್ತಿ ಪಡೆದರು. ಈ ಮೂಲಕ ಕೆಎಲ್ ರಾಹುಲ್ ವಾಂಡರರ್ಸ್‌ನಲ್ಲಿ ಹಲವು ದಾಖಲೆಗಳ ಒಡೆಯರಾದರು.

    ಕೆಎಲ್ ರಾಹುಲ್ ಅವರು ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ 34ನೇ ಆಟಗಾರ ಎನಿಸಿಕೊಂಡರು. ಜತೆಗೆ ಟೆಸ್ಟ್ ತಂಡ ಮುನ್ನಡೆಸಿದ ಕರ್ನಾಟಕದ ನಾಲ್ಕನೇ ಆಟಗಾರ ಎನಿಸಿದರು. ಇದಕ್ಕೂ ಮೊದಲು ಜಿ.ಆರ್.ವಿಶ್ವನಾಥ್ (1980, 2 ಟೆಸ್ಟ್), ರಾಹುಲ್ ದ್ರಾವಿಡ್ (2003-07, 25 ಟೆಸ್ಟ್), ಅನಿಲ್ ಕುಂಬ್ಳೆ (2007-08, 14 ಟೆಸ್ಟ್) ನಾಯಕರಾಗಿದ್ದರು.

    2014ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದ 29 ವರ್ಷದ ರಾಹುಲ್, ಬಳಿಕ 2019-20ರ ಸಾಲಿನಲ್ಲಿ ಟೆಸ್ಟ್ ತಂಡದಿಂದ ಕೊಕ್ ಕೂಡ ಪಡೆದಿದ್ದರು. ಇದೀಗ ವಾಂಡರರ್ಸ್‌ನಲ್ಲಿ ಅವರ ಟೆಸ್ಟ್ ಕ್ರಿಕೆಟ್ ಜೀವನ ಹೊಸ ಎತ್ತರಕ್ಕೆ ಏರಿದೆ. ಈಗಾಗಲೆ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಭಾರತ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ.

    ರಾಹುಲ್ 1990ರ ಬಳಿಕ ಸೀಮಿತ ಓವರ್‌ಗೆ ಮುನ್ನ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಮೊದಲಿಗರೆನಿಸಿದರು. 1990ರಲ್ಲಿ ಮೊಹಮದ್ ಅಜರುದ್ದೀನ್ ಈ ಅವಕಾಶ ಪಡೆದಿದ್ದರು. ಅದಕ್ಕೆ ಮುನ್ನ ಸುನೀಲ್ ಗಾವಸ್ಕರ್, ಬಿಷನ್ ಸಿಂಗ್ ಬೇಡಿ, ಅಜಿತ್ ವಾಡೇಕರ್ ಇಂಥ ಅವಕಾಶ ಗಿಟ್ಟಿಸಿಕೊಂಡಿದ್ದರು.

    ಕೆಎಲ್ ರಾಹುಲ್ ಪ್ರಥಮ ದರ್ಜೆ ಪಂದ್ಯಗಳಲ್ಲಿ ಅತ್ಯಂತ ಕಡಿಮೆ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಅನುಭವವಿದ್ದರೂ, ಟೆಸ್ಟ್ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದ ಎಂಎಸ್ ಧೋನಿ ಸರಿಗಟ್ಟಿದರು.

    2005ರ ಬಳಿಕ ಮೊದಲ ಬಾರಿಗೆ ಭಾರತ ತಂಡವನ್ನು 4 ಟೆಸ್ಟ್‌ಗಳಲ್ಲಿ ಮೂವರು ನಾಯಕರು ಮುನ್ನಡೆಸಿದ್ದರು. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ಗೆ ಅಜಿಂಕ್ಯ ರಹಾನೆ ನಾಯಕರಾಗಿದ್ದರೆ, 2ನೇ ಟೆಸ್ಟ್ ಮತ್ತು ದಕ್ಷಿಣ ಆಫ್ರಿಕಾದ ಮೊದಲ ಟೆಸ್ಟ್‌ಗೆ ಕೊಹ್ಲಿ ನಾಯಕರಾಗಿದ್ದರು. ಇದೀಗ ರಾಹುಲ್ ನಾಯಕರಾಗಿದ್ದಾರೆ. 2005ರಲ್ಲಿ ಜಿಂಬಾಬ್ವೆ ವಿರುದ್ಧ ಗಂಗೂಲಿ ನಾಯಕರಾಗಿದ್ದರೆ, ತವರಿನಲ್ಲಿ ಲಂಕಾ ವಿರುದ್ಧ ಮೊದಲ 2 ಟೆಸ್ಟ್‌ಗೆ ದ್ರಾವಿಡ್ ನಾಯಕರಾಗಿದ್ದರು. ಸರಣಿಯ ಕೊನೇ ಟೆಸ್ಟ್‌ಗೆ ಸೆಹ್ವಾಗ್ ನಾಯಕರಾಗಿದ್ದರು.

    ಕರ್ನಾಟಕದ ರಾಹುಲ್‌ದ್ವಯರು
    ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ಪಂದ್ಯದಲ್ಲಿ ಕನ್ನಡಿಗರೇ ಕೋಚ್-ಕ್ಯಾಪ್ಟನ್ ಆಗಿದ್ದಾರೆ. ಅದರಲ್ಲೂ ಕರ್ನಾಟಕದ ‘ರಾಹುಲ್’ ಹೆಸರಿನವರೇ ನಾಯಕ ಹಾಗೂ ಕೋಚ್ ಆಗಿದ್ದು ವಿಶೇಷ. ಕೊಹ್ಲಿ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ತಂಡದ ಸಾರಥ್ಯವಹಿಸಿದರೆ, ದಿಗ್ಗಜ ರಾಹುಲ್ ದ್ರಾವಿಡ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಏಕದಿನ ಸರಣಿಗೆ ಈ ರೀತಿ ಒಂದಾಗಬೇಕಿದ್ದ ಈ ಜೋಡಿ, ವಾಂಡರರ್ಸ್‌ ಅಂಗಳದಲ್ಲೇ ಜತೆಯಾಯಿತು.

    ವಾಂಡರರ್ಸ್‌ನಲ್ಲಿ ವೇಗಿಗಳ ದರ್ಬಾರ್ ; ಕೆಎಲ್ ರಾಹುಲ್ ನಾಯಕನಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts