ಒಲಿಂಪಿಕ್ಸ್ ಜ್ಯೋತಿಗೆ ಜಪಾನ್ ಸರಳ ಸ್ವಾಗತ

olampic 20 mar 20
Published on

ಹಿಗಶಿಮತ್ಸುಶಿಮಾ(ಜಪಾನ್): ಟೋಕಿಯೊ ಒಲಿಂಪಿಕ್ಸ್ ಕ್ರೀಡಾಜ್ಯೋತಿಗೆ ಗುರುವಾರ ಆತಿಥೇಯ ಜಪಾನ್​ನಲ್ಲಿ ತೀರ ಸರಳ ರೀತಿಯಲ್ಲಿ ಸ್ವಾಗತ ದೊರೆತಿದೆ. ಮಾರಕ ಕರೊನಾ ಸೋಂಕಿನ ಭೀತಿಯಿಂದಾಗಿ ಒಲಿಂಪಿಕ್ಸ್ ಕ್ರೀಡಾಕೂಟವೇ ನಡೆಯುವುದು ಅನುಮಾನವೆನಿಸಿರು ವುದರಿಂದ, ಜಪಾನ್ ಅದ್ದೂರಿ ಸ್ವಾಗತ ನೀಡುವ ಕಾರ್ಯಕ್ರಮವನ್ನು ಸರಳಗೊಳಿಸಿತ್ತು.

ಗ್ರೀಸ್​ನ ಅಥೆನ್ಸ್​ನಿಂದ ಜ್ಯೋತಿಯನ್ನು ಹೊತ್ತುತಂದ ವಿಶೇಷ ವಿಮಾನ ಮಟ್ಸುಶಿಮಾದಲ್ಲಿ ಗುರುವಾರ ಬೆಳಗ್ಗೆ ಬಂದಿಳಿಯಿತು. 2011ರ ಭೂಕಂಪ, ಸುನಾಮಿ ಮತ್ತು ಅಣುಸ್ಥಾವರ ದುರಂತದ ಬಳಿಕ ತನ್ನ ಚೇತರಿಕೆಯನ್ನು ಜಗತ್ತಿಗೆ ತೋರಿಸುವ ಸಲುವಾಗಿ ‘ರಿಕವರಿ ಒಲಿಂಪಿಕ್ಸ್’ ಎಂಬ ಧ್ಯೇಯದೊಂದಿಗೆ ಕೂಟದ ಆಯೋಜನೆಗೆ ಸಜ್ಜಾಗಿದ್ದ ಜಪಾನ್​ಗೆ ಕರೊನಾ ಭೀತಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜಪಾನ್ ಮಾಜಿ ಒಲಿಂಪಿಯನ್​ಗಳಾದ ಸವೊರಿ ಯೊಶಿದ ಮತ್ತು ಟಡಹಿರೊ ನೊಮುರಾ ವಿಮಾನ ನಿಲ್ದಾಣದಲ್ಲಿ ಒಲಿಂಪಿಕ್ಸ್ ಜ್ಯೋತಿಯನ್ನು ಸ್ವೀಕರಿಸಿ ಹೂವಿನ ರೀತಿಯ ದೊಡ್ಡ ಕಡಾಯಿಯಲ್ಲಿ ಬೆಳಗಿದರು. ಸಮಾರಂಭದಲ್ಲಿ ಆಯ್ದ ಅತಿಥಿಗಳಷ್ಟೇ ಹಾಜರಿದ್ದರು.

ಮಾರ್ಚ್ 12ರಂದು ಅಥೆನ್ಸ್​ನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಬೆಳಗಿರುವ ಜ್ಯೋತಿಯನ್ನು ಬುಧವಾರ ಜಪಾನ್​ಗೆ ಹಸ್ತಾಂತರಿಸಲಾಗಿತ್ತು. ಮಾರ್ಚ್ 26ರಂದು ಜಪಾನ್​ನಲ್ಲಿ ಜ್ಯೋತಿ ರಿಲೇ ಆರಂಭಗೊಳ್ಳಲಿದೆ. ಜುಲೈ 24ರಂದು ಉದ್ಘಾಟನಾ ಸಮಾರಂಭದ ವೇಳೆ ಜ್ಯೋತಿ ಬೆಳಗುವ ಮೂಲಕವೇ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಸಿಗಲಿದೆ. -ಪಿಟಿಐ/ಏಜೆನ್ಸೀಸ್

ಮುಂದೂಡುವುದು ಅಕಾಲಿಕ ನಿರ್ಣಯ

ಟೋಕಿಯೊ ಒಲಿಂಪಿಕ್ಸ್ ಮುಂದೂಡಿದರೆ ಅದೊಂದು ಅಕಾಲಿಕ ನಿರ್ಧಾರವಾಗುತ್ತದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ (ಐಒಸಿ) ಮುಖ್ಯಸ್ಥ ಥಾಮಸ್ ಬಾಷ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಕರೊನಾ ಭೀತಿಯಿಂದಾಗಿ, ಒಲಿಂಪಿಕ್ಸ್ ಆಯೋಜಿಸುವ ವಿವಿಧ ಮಾರ್ಗಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟವನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ. ಕೂಟಕ್ಕೆ ಇನ್ನೂ ನಾಲ್ಕೂವರೆ ತಿಂಗಳು ಸಮಯವಿದ್ದು, ನಮ್ಮ ಟಾಸ್ಕ್ ಫೋರ್ಸ್​ನ ಸೂಚನೆಯಂತೆ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net