ಟೆಸ್ಟ್ ಕ್ರಿಕೆಟ್​ನಂತೆ ಕರೊನಾ ವಿರುದ್ಧ ಹೋರಾಡಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್

Sachin_Tendulkar
Published on

ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕರೊನಾ ವಿರುದ್ಧದ ಹೋರಾಟವನ್ನು ಟೆಸ್ಟ್ ಕ್ರಿಕೆಟ್​ಗೆ ಹೋಲಿಸಿದ್ದು, ತಾಳ್ಮೆ ಮತ್ತು ರಕ್ಷಣೆಯೇ ಎಲ್ಲಕ್ಕಿಂತ ಮುಖ್ಯವಾದುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಕರೊನಾ ವಿರುದ್ಧದ ಹೋರಾಟದಲ್ಲಿ ನಾವು ಕ್ರಿಕೆಟ್​ನ ಹಳೆಯ ಪ್ರಕಾರವಾದ ಟೆಸ್ಟ್​ನಿಂದ ಪಾಠಗಳನ್ನು ಕಲಿಯಬೇಕಾಗಿದೆ ಎಂದು ಅಂಕಣವೊಂದರಲ್ಲಿ ಬರೆದಿರುವ ಸಚಿನ್, ‘ನಾವು ಅತ್ಯುತ್ತಮ ರಕ್ಷಣಾತ್ಮಕ ಆಟಗಾರರಾಗಿರಬೇಕು’ ಎಂದು ಕ್ರಿಕೆಟ್ ಭಾಷೆಯಲ್ಲೇ ರೂಪಕಾಲಂಕಾರಗಳನ್ನು ಮಾಡಿದ್ದಾರೆ.

‘ಕ್ರಿಕೆಟ್​ನ ಕಿರು ಪ್ರಕಾರಗಳಾದ ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ಕೆಲ ವೈಯಕ್ತಿಕ ನಿರ್ವಹಣೆಗಳೇ ತಂಡದ ಜಯಕ್ಕೆ ಕಾರಣವಾಗುತ್ತದೆ. ಆದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ವರ್ಕ್ ಮತ್ತು ಜತೆಯಾಟಗಳು ಪ್ರಮುಖವಾದುದು’ ಎಂದು 46 ವರ್ಷದ ಸಚಿನ್ ಹೇಳಿದ್ದಾರೆ. 200 ಟೆಸ್ಟ್ ಪಂದ್ಯಗಳಲ್ಲಿ 15,921 ರನ್ ಗಳಿಸಿರುವ ಅವರು 2013ರಲ್ಲಿ ನಿವೃತ್ತರಾಗಿದ್ದರು.

ಕರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲ ದೇಶಗಳು ಒಗ್ಗೂಡಬೇಕು ಎಂದಿರುವ ಸಚಿನ್, ‘ಪ್ರತಿ ದೇಶವೂ ಈಗ ಕರೊನಾ ವಿರುದ್ಧದ ಹೋರಾಟದಲ್ಲಿ ವಿವಿಧ ಹಂತಗಳಲ್ಲಿವೆ. ಎಲ್ಲ ದೇಶಗಳು ಈಗ ತಮ್ಮನ್ನು ಒಂದೇ ತಂಡದ ಭಾಗ ಎಂದು ಪರಿಗಣಿಸಬೇಕು. ಟೆಸ್ಟ್​ನಂತೆ ಪ್ರತಿ ಅವಧಿಯ ಹೋರಾಟದತ್ತ ಗಮನಹರಿಸಬೇಕು. ಅಂತಿಮವಾಗಿ ಜಯಶಾಲಿಗಳಾಗಬೇಕು’ ಎಂದು ಹೇಳಿದ್ದಾರೆ. ‘ಕ್ರಿಕೆಟ್ ಒಂದು ವಿಶೇಷವಾದ ಆಟ. ಹೆಚ್ಚಿನ ಕ್ರೀಡೆಗಳು ಜನರ ಆಕರ್ಷಣೆಗಾಗಿ ಇತರ ಕ್ರೀಡೆಗಳೊಂದಿಗೆ ಸ್ಪರ್ಧಿಸಿದರೆ, ಕ್ರಿಕೆಟ್ ತನ್ನದೇ ವಿವಿಧ ಪ್ರಕಾರಗಳ ಜತೆ ಸ್ಪರ್ಧೆ ನಡೆಸುತ್ತಿರುತ್ತದೆ. ಟಿ20 ಕ್ರಿಕೆಟ್ ಜನಪ್ರಿಯತೆ ನಡುವೆ ಟೆಸ್ಟ್ ಕ್ರಿಕೆಟ್​ನ ಪ್ರಸ್ತುತತೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆದರೆ ಈಗ ಇಡೀ ಜಗತ್ತೇ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುವಂತಾಗಿದೆ’ ಎಂದು ಸಚಿನ್ ಅಂಕಣವನ್ನು ಆರಂಭಿಸಿದ್ದಾರೆ. ಜಗತ್ತಿನ ಎಲ್ಲ ಕಡೆ ಕ್ರಿಕೆಟ್ ಆಟ ಸಂಪೂರ್ಣ ಸ್ಥಗಿತಗೊಂಡಿರುವ ಬಗ್ಗೆಯೂ ಸಚಿನ್ ಬೇಸರ ವ್ಯಕ್ತಪಡಿಸಿದ್ದಾರೆ.

ಕರೊನಾ ವಿರುದ್ಧದ ಹೋರಾಟದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ. ಯುವ ಜನತೆ ಎಚ್ಚರಿಕೆ ತೆಗೆದುಕೊಳ್ಳದಿದ್ದರೆ ಸೋಂಕನ್ನು ಹಿರಿಯ ನಾಗರಿಕರಿಗೆ ಹರಡುವ ಅಪಾಯ ಇರುತ್ತದೆ. ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಅಪಾಯ ವಾಗಬಹುದು ಎಂದು ಸಚಿನ್ ಹೇಳಿದ್ದಾರೆ.

ಅನಗತ್ಯ ಪ್ರಯಾಣಗಳನ್ನು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಕಾರ್ಯಕ್ರಮಗಳನ್ನು ತಪ್ಪಿಸಿದರೆ, ಸ್ಕ್ರೀನಿಂಗ್​ಗೆ ಒಳಗಾಗುವ ಜನರ ಸಂಖ್ಯೆಯನ್ನು ತಗ್ಗಿಸಬಹುದು. ಇದರಿಂದ ವೈದ್ಯಕೀಯ ವರ್ಗಕ್ಕೆ ತುರ್ತು ಪ್ರಕರಣಗಳತ್ತ ಗಮನ ಹರಿಸಲು ಹೆಚ್ಚಿನ ಸಮಯ ಸಿಗುತ್ತದೆ ಎಂದು ಸಚಿನ್ ಹೇಳಿದ್ದಾರೆ.

ಸುಳ್ಳು ಸುದ್ದಿಗಳಿಂದ ದೂರವಿರಿ

ಕರೊನಾ ಸೋಂಕಿನ ಬಗ್ಗೆ ದೇಶದ ಜನರು ಗಾಬರಿಗೊಳ್ಳಬಾರದು ಎಂದಿರುವ ಭಾರತದ ದಿಗ್ಗಜ ಟೆನಿಸ್ ಆಟಗಾರ ಲಿಯಾಂಡರ್ ಪೇಸ್, ಸುಳ್ಳು ಸುದ್ದಿಗಳಿಂದ ದೂರವಿರಿ ಎಂದೂ ಸಲಹೆ ನೀಡಿದ್ದಾರೆ. ‘ಜಗತ್ತಿನ ಎಲ್ಲ ಕಡೆ ಹರಡುತ್ತಿರುವ ಎದುರಾಳಿಯ ವಿರುದ್ಧ ನಾವು ಈಗ ದೊಡ್ಡ ಹೋರಾಟವನ್ನೇ ನಡೆಸಬೇಕಿದೆ. ಹಾಲಿ ಪರಿಸ್ಥಿತಿಯಲ್ಲಿ ಸಮಾಜದ ಎಲ್ಲರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಅಗತ್ಯ. ಈ ಮೂಲಕ ಆರೋಗ್ಯಯುತ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು 46 ವರ್ಷದ ಪೇಸ್ ಟ್ವೀಟಿಸಿದ್ದಾರೆ. ಆರೋಗ್ಯ ಇಲಾಖೆ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ ಎಂದೂ ಪೇಸ್ ಸರಣಿ ಟ್ವೀಟ್​ಗಳಲ್ಲಿ ತಿಳಿಸಿದ್ದಾರೆ. ‘ನಿರಂತರವಾಗಿ ಕೈಗಳನ್ನು ತೊಳೆಯುತ್ತಿರಿ. ಜವಾಬ್ದಾರಿಯುತ ನಾಗರಿಕರಾಗಿರಿ’ ಎಂದು ಪೇಸ್ ಹೇಳಿದ್ದಾರೆ. ಅವರ ವೃತ್ತಿಜೀವನದ ಕೊನೇ ಋತು ಈಗ ತಾತ್ಕಾಲಿಕ ವಿರಾಮದಲ್ಲಿದ್ದು, ಟೋಕಿಯೊ ಗೇಮ್್ಸ ನಡೆದರೆ ಅವರು ದಾಖಲೆಯ 8ನೇ ಬಾರಿ ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿಯುವ ಹಂಬಲದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net