

ಬೆಂಗಳೂರು: ರೇಸ್ ಕೋರ್ಸ್ ಸ್ಥಳಾಂತರದ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿರುವ ನಡುವೆ, ಗಣರಾಜ್ಯೋತ್ಸವದ ದಿನವಾದ ಶುಕ್ರವಾರ ಬೆಂಗಳೂರಿನ ಚಳಿಗಾಲದ ಡರ್ಬಿ ಯಶಸ್ವಿಯಾಗಿ ಆಯೋಜನೆಗೊಂಡಿದೆ. ದಾಖಲೆಯ ಒಟ್ಟು 1.70 ಕೋಟಿ ರೂಪಾಯಿ ಬಹುಮಾನ ಮೊತ್ತದ ಪ್ರತಿಷ್ಠಿತ "ದಿ ವಿನ್ಫೇರ್ 247 ಬೆಂಗಳೂರು ಡರ್ಬಿಯಲ್ಲಿ ನಿರೀೆಯಂತೆಯೇ ಫೇವರಿಟ್ ಜಮಾರಿ ಕುದುರೆ ಗೆಲುವಿನ ಕೇಕೆ ಹಾಕಿತು.
ಬೆಂಗಳೂರು ಟರ್ಫ್ ಕ್ಲಬ್ನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ, ಕುದುರೆ ರೇಸ್ ಕಣ್ತುಂಬಿಕೊಂಡರು. ಎಂದಿನಂತೆ ಈ ಬಾರಿಯೂ ಹೆಚ್ಚು ಗ್ಲಾಮರಸ್ ಬೆಡಗಿಯರು ಪಾಲ್ಗೊಂಡು ರೇಸ್ಗೆ ಮೆರುಗು ನೀಡಿದರು. ಆಕರ್ಷಕ ಉಡುಗೆಗಳನ್ನು ತೊಟ್ಟು ಕ್ಯಾಮರಾಗಳಿಗೆ ಪೋಸ್ ನೀಡಿ, ನೆಚ್ಚಿನ ಕುದುರೆ ಓಡುವಾಗ ಪ್ರೋತ್ಸಾಹಿಸಿದರು.
ಜಾಕಿ ಪಿ. ಟ್ರೆವರ್ ಸವಾರಿ ನಡೆಸಿದ ಮತ್ತು ಪಿ. ಶ್ರಾಫ್ ತರಬೇತಿ ನೀಡಿದ ಜಮಾರಿ, 10 ಕುದುರೆಗಳ ಸ್ಪರ್ಧೆಯಲ್ಲಿ ಮೊದಲನೆಯದಾಗಿ ಓಟ ಮುಗಿಸಿ ತನ್ನ ಮಾಲೀಕರಿಗೆ 83.72 ಲಕ್ಷ ರೂ. ಬಹುಮಾನ ಮತ್ತು ಟ್ರೋಫಿಯನ್ನು ಗೆದ್ದುಕೊಟ್ಟಿತು. ಫೈವ್ ಸ್ಟಾರ್ಸ್ ಶಿಪ್ಪಿಂಗ್ ಕೋ. ಪೆವೇಟ್ ಲಿಮಿಟೆಡ್ ಸೇರಿದಂತೆ ವಿವಿಧ ವ್ಯಕ್ತಿಗಳ ಮಾಲೀಕತ್ವಕ್ಕೆ ಸೇರಿದ ಕಂದುಬಣ್ಣದ ಜಮಾರಿ ಕುದುರೆ, ಇತರ ಫೇವರಿಟ್ಗಳಾದ ಟೆಹಾನಿ, ಸಂಥಿಂಗ್ ರಾಯಲ್, ಫಾಸ್ಟ್ ಫೇಸ್ ಕುದುರೆಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಅಲಂಕರಿಸಿತು.