ಟೀಮ್​ ಇಂಡಿಯಾ ವಿರುದ್ಧದ ಹೀನಾಯ ಸೋಲಿಗೆ ಇದೇ ಕಾರಣ... ಬಾಂಗ್ಲಾ ನಾಯಕ ಜಾಕಿರ್ ಅಲಿ ಅಚ್ಚರಿ ಹೇಳಿಕೆ! Jaker Ali

Jaker Ali
Published on

Jaker Ali : ಸತತ ಗೆಲುವುಗಳೊಂದಿಗೆ ಟೀಮ್​ ಇಂಡಿಯಾ 2025ರ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದೆ. ಬುಧವಾರ (ಸೆ.24) ಬಾಂಗ್ಲಾದೇಶ ವಿರುದ್ಧ 41 ರನ್‌ಗಳ ಜಯ ಸಾಧಿಸುವ ಮೂಲಕ ಅಂತಿಮ ಸುತ್ತಿನ ಸ್ಪರ್ಧೆಗೆ ಲಗ್ಗೆ ಇಟ್ಟಿದೆ. ಏಷ್ಯಾ ಕಪ್​ ಎತ್ತಿ ಹಿಡಿಯಲು ಭಾರತಕ್ಕೆ ಇನ್ನೊಂದು ಹೆಜ್ಜೆ ಬಾಕಿ ಇದೆ. ಈ ಮಧ್ಯೆ, ಬ್ಯಾಟಿಂಗ್ ಕ್ರಮಾಂಕದಲ್ಲಿನ ವೈಫಲ್ಯದಿಂದಾಗಿ ಪಂದ್ಯ ಸೋತಿದ್ದೇವೆ ಎಂದು ಬಾಂಗ್ಲಾದೇಶ ನಾಯಕ ಜಾಕಿರ್ ಅಲಿ ಹೇಳಿದ್ದಾರೆ. ಅಲ್ಲದೆ, ಇಂದು (ಸೆ.25) ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಗೆದ್ದು ಫೈನಲ್ ತಲುಪುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಟೀಮ್​ ಇಂಡಿಯಾ ವಿರುದ್ಧ ಸೋಲುಂಡ ಬಳಿಕ ಪಂದ್ಯದ ಪ್ರಸ್ತುತಿಯಲ್ಲಿ ಮಾತನಾಡಿದ ಜಾಕಿರ್ ಅಲಿ, ತಮ್ಮ ಬೌಲರ್‌ಗಳು ಅಸಾಧಾರಣ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದರು. ನಮ್ಮ ಬೌಲರ್​ಗಳು ಟೀಮ್ ಇಂಡಿಯಾವನ್ನು ಕಡಿಮೆ ಸ್ಕೋರ್‌ಗೆ ಸೀಮಿತಗೊಳಿಸಿದರು. ಎಲ್ಲ ಶ್ರೇಯಸ್ಸು ನಮ್ಮ ಹುಡುಗರಿಗೆ ಸಲ್ಲುತ್ತದೆ. ಮೊದಲ 10 ಓವರ್‌ಗಳ ನಂತರ, ತಮ್ಮ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಈ ಪಂದ್ಯದಿಂದ ನಾವು ಬಹಳಷ್ಟು ಕಲಿತಿದ್ದೇವೆ ಎಂದು ಜಾಕಿರ್​ ಅಲಿ ಹೇಳಿದರು.

ಗುರುವಾರ (ಸೆ.25) ಪಾಕಿಸ್ತಾನ ವಿರುದ್ಧ ಪಂದ್ಯವಿದ್ದು, ಈ ಪಂದ್ಯವನ್ನು ಗೆದ್ದರೆ ನಾವು ಫೈನಲ್ ತಲುಪುತ್ತೇವೆ. ಪಾಕ್​ ವಿರುದ್ಧದ ಪಂದ್ಯದಲ್ಲಿ ಯಾವ ಸಂಯೋಜನೆ ಉತ್ತಮವಾಗಿರುತ್ತದೆ ಎಂಬುದರ ಬಗ್ಗೆ ನಾವು ಗಮನ ಹರಿಸುತ್ತಿದ್ದೇವೆ. ಭಾರತದ ವಿರುದ್ಧದ ಪಂದ್ಯದಲ್ಲಿ ಸೋಲಿಗೆ ನಮ್ಮ ಬ್ಯಾಟರ್‌ಗಳ ವೈಫಲ್ಯವೇ ಕಾರಣ ಎಂದು ಜಾಕಿರ್​ ಅಲಿ ಹೇಳಿದರು.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 168 ರನ್ ಗಳಿಸಿತು. ಅಭಿಷೇಕ್ ಶರ್ಮ (75 ರನ್​, 37 ಎಸೆತ, 6 ಬೌಂಡರಿ, 5 ಸಿಕ್ಸರ್) ಅಬ್ಬರದ ಬ್ಯಾಟಿಂಗ್​ ಮಾಡಿದರು. ಹಾರ್ದಿಕ್ ಪಾಂಡ್ಯ (38 ರನ್​, 29 ಎಸೆತ) ಮತ್ತು ಶುಭಮಾನ್ ಗಿಲ್ (29 ರನ್​, 19 ಎಸೆತ) ಉತ್ತಮ ಪ್ರದರ್ಶನವನ್ನು ನೀಡಿದರು. ಬಾಂಗ್ಲಾದೇಶದ ಬೌಲರ್‌ಗಳಲ್ಲಿ ರಿಷಾದ್ ಹೊಸೈನ್ ಎರಡು ವಿಕೆಟ್ ಪಡೆದರೆ, ತಂಜಿಮ್ ಹಸನ್, ಮುಸ್ತಾಫಿಜುರ್ ಮತ್ತು ಸೈಫುದ್ದೀನ್ ತಲಾ ಒಂದು ವಿಕೆಟ್ ಪಡೆದರು.

ಸೈಫ್ ಹಸನ್ (69 ರನ್​ 3 ಬೌಂಡರಿ, 5 ಸಿಕ್ಸರ್) ಅರ್ಧಶತಕದ ಹೊರತಾಗಿಯೂ, 169 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 19.3 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟ್ ಆಯಿತು. ಭಾರತೀಯ ಬೌಲರ್‌ಗಳಲ್ಲಿ ಕುಲದೀಪ್ ಯಾದವ್ ಮೂರು ವಿಕೆಟ್ ಪಡೆದರೆ, ಜಸ್​ಪ್ರೀತ್​ ಬುಮ್ರಾ ಮತ್ತು ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಮತ್ತು ತಿಲಕ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net