ಇದು 1983ರ ವಿಶ್ವಕಪ್​ ಫೈನಲ್​ ನೆನಪಿಸಿತು; ಟೀಮ್ ಇಂಡಿಯಾ ಯುವ ಕ್ರಿಕೆಟಿಗನ ಆಟಕ್ಕೆ ರೈನಾ ಪ್ರಶಂಸೆ | IND vs ENG ODI

ವಿಜಯವಾಣಿ - 2025-02-06T173936.727
Published on

IND vs ENG 1st ODI: ಮಹಾರಾಷ್ಟ್ರದ ವಿಸಿಎ ​​ಕ್ರೀಡಾಂಗಣ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರ ಪಡೆ 248 ರನ್​ಗಳಿಗೆ ಆಲ್​ ಔಟ್​ ಆಯಿತು. ಟೀಮ್ ಇಂಡಿಯಾ ಬೌಲರ್​ಗಳ ಆರ್ಭಟಕ್ಕೆ ತತ್ತರಿಸಿದ ಇಂಗ್ಲೆಂಡ್ ಬ್ಯಾಟರ್ಸ್​, ಅಬ್ಬರದ ಬ್ಯಾಟಿಂಗ್ ನಡೆಸುವಲ್ಲಿ ಕಡೆಗೂ ವಿಫಲರಾದರು.

ರಾಣಾ, ಯಶಸ್ವಿ

ಇನ್ನು ಈ ಪಂದ್ಯದಲ್ಲಿ ಭಾರತ ಪರ ಮಿಂಚಿದ ಹರ್ಷಿತ್ ರಾಣಾ ಮತ್ತು ಯಶಸ್ವಿ ಜೈಸ್ವಾಲ್​ಗೆ ಕ್ರಿಕೆಟ್​ ಅಭಿಮಾನಿಗಳಿಂದ ಮೆಚ್ಚುಗೆಗೆಳು ಹರಿದುಬರುತ್ತಿವೆ. ರಾಣಾ ಮತ್ತು ಜೈಸ್ವಾಲ್‌ರಂತಹ ಯುವ ಆಟಗಾರರು ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ವಿಶ್ವಾಸ ಮಾಜಿ ಕ್ರಿಕೆಟಿಗರಲ್ಲಿ ಮೂಡಿದೆ. ಆರಂಭದಲ್ಲಿ ಒಂದೇ ಓವರ್‌ನಲ್ಲಿ ಫಿಲ್​ ಸಾಲ್ಟ್​ಗೆ 26 ರನ್‌ಗಳನ್ನು ಹೊಡೆಯಲು ಬಿಟ್ಟ ರಾಣಾ, ನಂತರದಲ್ಲಿ ಅವರನ್ನು ಒತ್ತಡಕ್ಕೆ ಸಿಲುಕಿಸಿದರು. ಆದಾಗ್ಯೂ, 10ನೇ ಓವರ್‌ನಲ್ಲಿ ಬೆನ್ ಡಕೆಟ್ (32) ಮತ್ತು ಹ್ಯಾರಿ ಬ್ರೂಕ್ (0) ವಿಕೆಟ್ ಪಡೆಯುವ ಮೂಲಕ ಮೈದಾನದಲ್ಲಿ ರಾಣಾ ಆರ್ಭಟ ಜೋರಾಯಿತು.

ಆ ಕ್ಯಾಚ್​

ಇನ್ನು ರಾಣಾ ಅವರ ಮೊದಲ ವಿಕೆಟ್ ಯಶಸ್ವಿ ಜೈಸ್ವಾಲ್ ಅವರ ಅದ್ಭುತ ಕ್ಯಾಚ್‌ನಿಂದ ಹೊರಹೊಮ್ಮಿದ್ದು, ಕ್ರೀಡಾಭಿಮಾನಿಗಳಲ್ಲಿ ಭಾರೀ ಸಂತಸ ತಂದಿತು. ಬೆನ್ ಡಕೆಟ್​ ಕೊಟ್ಟ ಕ್ಯಾಚ್​ ಹಿಡಿಯಲು ದೂರದಿಂದ ವೇಗವಾಗಿ ಓಡಿಬಂದು ಅದ್ಭುತ ಕ್ಯಾಚ್ ಹಿಡಿದ ಜೈಸ್ವಾಲ್​, ರವಿಶಾಸ್ತ್ರಿ ಉತ್ಸಾಹಕ್ಕೆ ಕಾರಣರಾದರು. ಜೈಸ್ವಾಲ್​ರ ಯಶಸ್ವಿ ಕ್ಯಾಚ್​ಗೆ ಫಿದಾ ಆದ ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್​ ರೈನಾ, ಇದು ನನ್ನನ್ನು 1983ರ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ವಿಶ್ವಕಪ್ ಫೈನಲ್‌ ನೆನಪಿಸಿತು ಎಂದಿದ್ದಾರೆ.

"ಆ ಪಂದ್ಯದಲ್ಲಿ ಕಪಿಲ್ ದೇವ್ ಅವರು ವಿವಿಯನ್ ರಿಚರ್ಡ್ಸ್ ಅವರ ವಿಕೆಟ್​ ಪಡೆಯಲು ಅದ್ಭುತ ಕ್ಯಾಚ್​ ಹಿಡಿದಿದ್ದರು. 1983ರ ವಿಶ್ವಕಪ್ ಫೈನಲ್‌ನಲ್ಲಿ ಕಪಿಲ್ ಪಾಜಿ ಹಿಡಿದ ಅದ್ಭುತ ಕ್ಯಾಚ್​ ಅನ್ನು ಈಗ ಯಶಸ್ವಿ ಜೈಸ್ವಾಲ್ ಅವರಲ್ಲಿ ನೋಡಿದೆ. ಜೈಸ್ವಾಲ್ ಹಿಡಿದ ಅಮೋಘ ಕ್ಯಾಚ್​ ಒಂದು ನಿಮಿಷ ನನಗೆ ಕಪಿಲ್​ ದೇವ್​ ಹಿಡಿದ ಕ್ಯಾಚ್​ ಅನ್ನೇ ನೆನಪಿಸಿತು" ಎಂದು ಉತ್ಸಾಹದಿಂದ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net