ಹೈದರಾಬಾದ್​ ಟೆಸ್ಟ್​ನಲ್ಲಿ ಭಾರತಕ್ಕೆ ಬೃಹತ್​ ಮುನ್ನಡೆ; ವಿಕೆಟ್​ಗಾಗಿ ಆಂಗ್ಲರ ಪರದಾಟ

ind vs eng web
Published on

ಹೈದರಾಬಾದ್​: ಕನ್ನಡಿಗ ಕೆಎಲ್​ ರಾಹುಲ್​ (86 ರನ್​, 123 ಎಸೆತ, 8 ಬೌಂಡರಿ, 2 ಸಿಕ್ಸರ್​) ಮತ್ತು ಆಲ್ರೌಂಡರ್​ ರವೀಂದ್ರ ಜಡೇಜಾ (81*ರನ್​, 155 ಎಸೆತ, 7 ಬೌಂಡರಿ, 2 ಸಿಕ್ಸರ್​) ಉಪಯುಕ್ತ ಬ್ಯಾಟಿಂಗ್​ ಬಲದಿಂದ ಭಾರತ ತಂಡ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಬೃಹತ್​ ಮುನ್ನಡೆ ಕಂಡಿದ್ದು, ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಅನನುಭವಿ ಬೌಲಿಂಗ್​ ವಿಭಾಗದಿಂದಾಗಿ ಪರದಾಡಿದ ಇಂಗ್ಲೆಂಡ್​ ತಂಡ ದಿನದಾಟದಲ್ಲಿ 6 ವಿಕೆಟ್​ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಆರ್​ಜಿಐ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ 1 ವಿಕೆಟ್​ಗೆ 119 ರನ್​ಗಳಿಂದ ಆಟ ಮುಂದುವರಿಸಿದ ಭಾರತ ತಂಡ ದಿನದಂತ್ಯಕ್ಕೆ 110 ಓವರ್​ಗಳಲ್ಲಿ 7 ವಿಕೆಟ್​ಗೆ 421 ರನ್​ ಪೇರಿಸಿದೆ. ಸದ್ಯ 175 ರನ್​ ಮುನ್ನಡೆಯಲ್ಲಿರುವ ರೋಹಿತ್​ ಶರ್ಮ ಬಳಗ ಮೂರನೇ ದಿನವೇ ಗೆಲುವು ಒಲಿಸಿಕೊಳ್ಳಲು ಹೋರಾಡುವ ನಿರೀಕ್ಷೆ ಇದೆ.

ಶತಕದತ್ತ ಮುನ್ನಡೆದಿರುವ ರವೀಂದ್ರ ಜಡೇಜಾ ಜತೆಗೆ ಮತ್ತೋರ್ವ ಆಲ್ರೌಂಡರ್​ ಅಕ್ಷರ್​ ಪಟೇಲ್​ (35*ರನ್​, 62 ಎಸೆತ, 5 ಬೌಂಡರಿ, 1 ಸಿಕ್ಸರ್​) ಕ್ರೀಸ್​ನಲ್ಲಿದ್ದಾರೆ. ಇವರಿಬ್ಬರು ಮುರಿಯದ 8ನೇ ವಿಕೆಟ್​ಗೆ 63 ರನ್​ ಸೇರಿಸಿದ್ದು, 3ನೇ ದಿನ ಮುನ್ನಡೆಯನ್ನು 200ರ ಗಡಿ ದಾಟಿಸುವ ನಿರೀೆ ಇದೆ.

ಶತಕವಂಚಿತ ರಾಹುಲ್​

ಬೆಳಗ್ಗೆ ಕ್ರಮವಾಗಿ 76 ಮತ್ತು 14 ರನ್​ಗಳಿಂದ ಆಟ ಮುಂದುವರಿಸಿದ ಯಶಸ್ವಿ ಜೈಸ್ವಾಲ್​ ಮತ್ತು ಶುಭಮಾನ್​ ಗಿಲ್​ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮೊದಲ ದಿನದಂತ್ಯದಲ್ಲಿ ಬಿರುಸಿನ ಆಟದಿಂದ ಗಮನಸೆಳೆದಿದ್ದ ಜೈಸ್ವಾಲ್​ (80) 2ನೇ ದಿನ ಮತ್ತೆ 4 ರನ್​ ಮಾತ್ರ ಗಳಿಸಿ ದಿನದ 4ನೇ ಎಸೆತದಲ್ಲೇ ಔಟಾದರೆ, ಗಿಲ್​ ಮತ್ತೆ 9 ರನ್​ ಸೇರಿಸಿ 10 ಓವರ್​ಗಳ ಬಳಿಕ ನಿರ್ಗಮಿಸಿದರು. ಆಗ ಕನ್ನಡಿಗ ಕೆಎಲ್​ ರಾಹುಲ್​ ತಂಡಕ್ಕೆ ಆಸರೆಯಾಗಿ ನಿಂತರು. ಶ್ರೇಯಸ್​ ಅಯ್ಯರ್​ (35) ಜತೆಗೂಡಿ 4ನೇ ವಿಕೆಟ್​ಗೆ 64 ರನ್​ ಸೇರಿಸಿದ ರಾಹುಲ್​ ನಂತರ ಜಡೇಜಾ ಜತೆಗೆ 65 ರನ್​ ಕಲೆಹಾಕುವ ಮೂಲಕ ಮುನ್ನಡೆ ತಂದುಕೊಟ್ಟರು. ಆದರೆ ಚಹಾ ವಿರಾಮಕ್ಕೆ ಮುನ್ನ ರಾಹುಲ್​, ಎಡಗೈ ಸ್ಪಿನ್ನರ್​ ಟಾಮ್​ ಹಾರ್ಟ್ಲಿ ಎಸೆತದಲ್ಲಿ ಡೀಮ್​ ಮಿಡ್​ವಿಕೆಟ್​ನಲ್ಲಿದ್ದ ರೆಹನ್​ ಅಹ್ಮದ್​ಗೆ ಕ್ಯಾಚ್​ ನೀಡಿ 50ನೇ ಟೆಸ್ಟ್​ನಲ್ಲಿ ಶತಕದ ಸಂಭ್ರಮ ಕಾಣುವುದನ್ನು ತಪ್ಪಿಸಿಕೊಂಡರು.

ಮುನ್ನಡೆ ಹಿಗ್ಗಿಸಿದ ಜಡೇಜಾ

ರವೀಂದ್ರ ಜಡೇಜಾ ಎದುರಿಸಿದ ಮೊದಲ 40 ಎಸೆತಗಳಲ್ಲಿ 35 ರನ್​ ಬಾರಿಸುವ ಮೂಲಕ ಆಂಗ್ಲರಿಗೆ ಅವರದೇ ರೀತಿಯ ಆಕ್ರಮಣಕಾರಿ ಬ್ಯಾಟಿಂಗ್​ನಿಂದ ತಿರುಗೇಟು ನೀಡಿದರು. ಆದರೆ ರಾಹುಲ್​ ಔಟಾದ ಬಳಿಕ ಜಡೇಜಾ ಆಟ ಸ್ವಲ್ಪ ನಿಧಾನಗೊಂಡಿತು. ಮುನ್ನಡೆ ಹಿಗ್ಗಿಸಲು ಹೋರಾಡಿದ ಜಡೇಜಾ ಟೆಸ್ಟ್​ನಲ್ಲಿ 20ನೇ ಅರ್ಧಶತಕ ಬಾರಿಸಿ ಎಂದಿನಂತೆ ಖಡ್ಗ ಝಳಪಿಸಿದಂತೆ ಸಂಭ್ರಮಿಸಿದರು. ಇದಕ್ಕೆ ಮುನ್ನ ಅವರು 49 ರನ್​ ಗಳಿಸಿದಾಗ ರೂಟ್​ ಎಸೆತದಲ್ಲಿ ಅಂಪೈರ್​ ಎಲ್​ಬಿಡಬ್ಲ್ಯು ತೀರ್ಪು ನೀಡಿದರೂ, ಚೆಂಡು ಬ್ಯಾಟ್​ ಸ್ಪರ್ಶಿಸಿದ್ದು ಮರುಪ್ರಸಾರದಲ್ಲಿ ಸ್ಪಷ್ಟವಾಗಿ ಕಾಣಿಸಿದ್ದರಿಂದ ಜಡೇಜಾ ಡಿಆರ್​ಎಸ್​ ಮೂಲಕ ಬಚಾವ್​ ಆದರು. 6ನೇ ವಿಕೆಟ್​ಗೆ ಕೆಎಸ್​ ಭರತ್​ ಜತೆಗೆ 68 ರನ್​ ಸೇರಿಸಿದ ಜಡೇಜಾ, ಅಶ್ವಿನ್​ ಜತೆ ವಿಕೆಟ್​ ನಡುವಿನ ಓಟದಲ್ಲಿ ಎಡವಟ್ಟು ಮಾಡಿಕೊಂಡರು. ದಿನದಂತ್ಯದಲ್ಲಿ ಅಕ್ಷರ್​ ಜತೆಗೂಡಿ ಜಡೇಜಾ ಆಂಗ್ಲರನ್ನು ಸತಾಯಿಸಿದರು.

ವಿಕೆಟ್​ಗಾಗಿ ಇಂಗ್ಲೆಂಡ್​ ತಿಣುಕಾಟ

ತ್ರಿವಳಿ ಸ್ಪಿನ್ನರ್​ಗಳ ಜತೆಗೆ ಓರ್ವ ವೇಗಿಯನ್ನು ಒಳಗೊಂಡ ನಾಲ್ವರು ತಜ್ಞ ಬೌಲರ್​ಗಳೊಂದಿಗೆ ಕಣಕ್ಕಿಳಿದಿರುವ ಇಂಗ್ಲೆಂಡ್​ ದಿನವಿಡೀ ವಿಕೆಟ್​ಗಾಗಿ ಪರದಾಡಿತು. ಆಂಗ್ಲರಿಗೆ ಇಬ್ಬರು ಅನನುಭವಿ ಸ್ಪಿನ್ನರ್​ಗಳಾದ ಹಾರ್ಟ್ಲಿ-ರೆಹನ್​ಗಿಂತ ಅರೆಕಾಲಿಕ ಸ್ಪಿನ್ನರ್​ ಜೋ ರೂಟ್​ ಹೆಚ್ಚು ಉಪಯುಕ್ತರೆನಿಸಿದರು. ಅನುಭವಿ ಸ್ಪಿನ್ನರ್​ ಜಾಕ್​ ಲೀಚ್​ ಮೊಣಕಾಲು ನೋವಿನಿಂದಾಗಿ ಹೆಚ್ಚಿನ ಓವರ್​ ಎಸೆಯಲು ಸಾಧ್ಯವಾಗದ್ದೂ ಆಂಗ್ಲರಿಗೆ ಹಿನ್ನಡೆ ತಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net