

ಚೆನ್ನೈ: ಇಲ್ಲಿನ ಚೇಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಭಾರೀ ಹಣಾಹಣಿಯಲ್ಲಿ ಉತ್ತಮ ಪ್ರದರ್ಶನದ ಮೂಲಕ ಚೆನ್ನೈ ಪಡೆ ಗೆದ್ದು ಬೀಗಿತು. ಐದು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದ ಸಿಎಸ್ಕೆ, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡು, ಪ್ಲೇಆಫ್ ಪ್ರವೇಶಿಸುವ ಭರವಸೆ ಹೊಂದಿದೆ. ಸದ್ಯ ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ.
ಮೊದಲು ಟಾಸ್ ಗೆದ್ದ ಆರ್ಆರ್ ಬ್ಯಾಟಿಂಗ್ ಆಯ್ದುಕೊಳ್ಳುವ ಮೂಲಕ ಸಿಎಸ್ಕೆಗೆ ಫೀಲ್ಡ್ ಮಾಡುವಂತೆ ತಿಳಿಸಿತು. 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 140 ರನ್ ಕಲೆಹಾಕಿತು. ಈ ಗುರಿಯನ್ನು ಚೇಸ್ ಮಾಡುತ್ತಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಒಂದು ರನ್ ಹೊಡೆದು ಮತ್ತೊಂದು ರನ್ಗೆ ಹಿಂತಿರುಗುವಾಗ ವಿಕೆಟ್ಗೆ ಅಡ್ಡಲಾಗಿ ಓಡಿ ಬಂದರು. ಈ ವೇಳೆ ನೇರವಾಗಿ ವಿಕೆಟ್ಗೆ ಗುರಿಯಿಟ್ಟ ಕೀಪರ್ ಸಂಜು ಸ್ಯಾಮ್ಸನ್, ಬಾಲ್ನ ಬೀಸಿ ಹೊಡೆದರು. ಇದು ಜಡೇಜಾ ಬೆನ್ನಿಗೆ ತಗುಲಿತು. ಇದರಿಂದ ಎರಡು ತಂಡಗಳ ನಡುವೆ ತೀವ್ರ ಗೊಂದಲ ಉಂಟಾಯಿತು.
ನಾನ್ ಸ್ಟ್ರೈಕರ್ ಎಂಡ್ಗೆ ಸಂಜು ಬೀಸಿದ ಬಾಲ್ ನೇರವಾಗಿ ಜಡೇಜಾ ಬೆನ್ನಿಗೆ ತಗುಲಿತು. ಇದನ್ನು ಔಟ್ ಎಂದು ಪರಿಗಣಿಸಿದ ಕ್ಯಾಪ್ಟನ್ ಸಾಮ್ಸನ್, ಅಂಪೈರ್ ಕರೆಗಾಗಿ ಕಾದು ಕುಳಿತರು. ಈ ವೇಳೆ ನಿರ್ಧಾರ ಕಾಯ್ದಿರಿಸಿದ ಅಂಪೈರ್, ಇದು ಔಟ್ ಹೌದಾ? ಅಲ್ವಾ? ಎಂದು ಸೂಕ್ಷ್ಮವಾಗಿ ಪರಿಶೀಲಿಸಿದರು. ನಂತರದಲ್ಲಿ ಇದು ಔಟ್ ಎಂದು ಖಚಿತವಾಗಿ ಘೋಷಿಸಿದರು.
ಜಡೇಜಾ ಔಟ್ ಎಂದು ಗೊತ್ತಾಗುತ್ತಿದ್ದಂತೆ ಸಿಎಸ್ಕೆ ಅಭಿಮಾನಿಗಳು ಒಂದು ನಿಮಿಷ ಮೌನಕ್ಕೆ ಶರಣಾದರು. ಅಂಪೈರ್ ನಿರ್ಣಯ ನೋಡ್ತಿದ್ದಂತೆ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಸಿಂಗ್, ಆಶ್ಚರ್ಯಕರ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).