

ನವದೆಹಲಿ: ಇತ್ತೀಚೆಗಷ್ಟೇ ಅಂತ್ಯಗೊಂಡ ಐಪಿಎಲ್ ರಿಟೆನ್ಶನ್ (IPL 2025) ಪ್ರಕ್ರಿಯೆಯಲ್ಲಿ ಅನ್ಕ್ಯಾಪ್ಡ್ ಪ್ಲೇಯರ್ ಅಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಫ್ರಾಂಚೈಸಿ 4 ಕೋಟಿ ರೂ.ಗೆ ಉಳಿಸಿಕೊಂಡರೆ, ರವೀಂದ್ರ ಜಡೇಜಾ, ಮತೀಶಾ ಪತಿರಾನಾರನ್ನು ಉತ್ತಮ ಬೆಲೆಗೆ ರಿಟೇನ್ ಮಾಡಿಕೊಂಡಿದೆ. ಈ ವಿಚಾರದಲ್ಲಿ ಸಿಎಸ್‌ಕೆ ಮ್ಯಾನೇಜ್ಮೆಂಟ್ಗೆ ಇರುವ ಖುಷಿ, ಕ್ರಿಕೆಟ್ ಅಭಿಮಾನಿಗಳಿಗಿಲ್ಲ. ಕೆಲವರು ಜಡೇಜಾಗೆ 18 ಕೋಟಿ ಕೊಟ್ಟು ಉಳಿಸಿಕೊಳ್ಳುವ ಅವಶ್ಯಕತೆ ಇತ್ತೇ ಎಂದು ಜಾಲತಾಣಗಳಲ್ಲಿ ಟೀಕಿಸಿದ್ದಾರೆ. ಸದ್ಯ ಈ ವಿಚಾರಕ್ಕೆ ಸ್ಪಂದಿಸಿರುವ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಟೀಮ್ ತೆಗೆದುಕೊಂಡಿರುವ ನಿರ್ಧಾರ ಸರಿಯಿದೆ ಎಂದಿದ್ದಾರೆ.
"ಐಪಿಎಲ್ 2025ರ ಮೆಗಾ ಹರಾಜಿಗೂ ಮೊದಲು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ರವೀಂದ್ರ ಜಡೇಜಾಗೆ ಹೆಚ್ಚು ಖರ್ಚು ಮಾಡಿದ್ದು ಸರಿಯಿಲ್ಲ ಎಂಬ ಪ್ರಶ್ನೆಗಳನ್ನು ಎತ್ತಲಾಗಿದೆ ಎಂದು ಹೇಳಿದ ಆಕಾಶ್ ಚೋಪ್ರಾ, ಈ ವಿಷಯದಲ್ಲಿ ಫ್ರಾಂಚೈಸಿ ತೆಗೆದುಕೊಂಡ ನಿರ್ಧಾರಗಳು ಸರಿಯಿದೆ. ಪ್ರಸ್ತುತ ರಿಟೆನ್ಶನ್ ಪ್ರಕ್ರಿಯೆಯಲ್ಲಿ 65 ಕೋಟಿ ರೂ. ವ್ಯಯಿಸಿರುವ ಸಿಎಸ್‌ಕೆ, ತಮ್ಮ ಪರ್ಸ್ನಲ್ಲಿ 55 ಕೋಟಿ ರೂ. ಹಣವನ್ನು ಹರಾಜಿಗಾಗಿ ಉಳಿಸಿಕೊಂಡಿದೆ" ಎಂದರು.
"ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಮತ್ತು ರವೀಂದ್ರ ಜಡೇಜಾ ಅವರನ್ನು 18 ಕೋಟಿ ರೂ.ಗೆ ಉಳಿಸಿಕೊಂಡಿರುವ ಸಿಎಸ್‌ಕೆ, ಮತೀಶಾ ಪತಿರಾನಾ ಅವರನ್ನು 13 ಕೋಟಿ ರೂ.ಗೆ ಉಳಿಸಿಕೊಂಡರೆ, ಶಿವಂ ದುಬೆರನ್ನು 12 ಕೋಟಿ ರೂ.ಗೆ ರಿಟೇನ್ ಮಾಡಿಕೊಂಡಿದೆ. ಕಳೆದ ಟಿ20 ಫಾರ್ಮೆಟ್ನಲ್ಲಿ ಜಡೇಜಾ ಅಂತಹ ಅದ್ಭುತ ಪ್ರದರ್ಶನ ನೀಡಿಲ್ಲ ಎಂಬ ಮಾತುಗಳಿವೆ. ರವೀಂದ್ರ ಜಡೇಜಾ ತಂಡಕ್ಕೆ ಬಹಳ ಮುಖ್ಯವಾದ ಆಟಗಾರ. ಅವರು ಚೆನ್ನೈ ಸೂಪರ್ ಕಿಂಗ್ಸ್ ಕುಟುಂಬದವರು. ಹೀಗಾಗಿ ಫ್ರಾಂಚೈಸಿ ಅವರ ಕೌಶಲ್ಯ, ಕೊಡುಗೆಗಳನ್ನು ಮರೆಯದೆ ಉಳಿಸಿಕೊಳ್ಳಲು ನಿರ್ಧರಿಸಿದೆ. ಇನ್ನು ಪತಿರಾನಾ ಅವರ ಆ 4 ಓವರ್ಗಳು ತಂಡಕ್ಕೆ ಚಿನ್ನದಂತೆ. ನನ್ನ ಪ್ರಕಾರ ಮ್ಯಾನೇಜ್ಮೆಂಟ್ ತೆಗೆದುಕೊಂಡ ನಿಲುವು ಸರಿಯಿದೆ" ಎಂದು ಹೇಳಿದರು,(ಏಜೆನ್ಸೀಸ್).