ಜಡೇಜಾ ಭರ್ಜರಿ ಆಲ್ರೌಂಡ್ ನಿರ್ವಹಣೆ; ಮೊಹಾಲಿ ಟೆಸ್ಟ್‌ನಲ್ಲಿ ಭಾರತಕ್ಕೆ ಇನಿಂಗ್ಸ್ ಜಯ

ind vs web
Published on

ಮೊಹಾಲಿ: ಬೌಲಿಂಗ್‌ನಲ್ಲೂ ಮಿಂಚುವ ಮೂಲಕ ಆಲ್ರೌಂಡ್ ನಿರ್ವಹಣೆ ತೋರಿದ ರವೀಂದ್ರ ಜಡೇಜಾ (ಪಂದ್ಯದಲ್ಲಿ 87ಕ್ಕೆ 9 ವಿಕೆಟ್) ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಪ್ರವಾಸಿ ಶ್ರೀಲಂಕಾ ವಿರುದ್ಧ ಇನಿಂಗ್ಸ್ ಮತ್ತು 222 ರನ್‌ಗಳಿಂದ ಭರ್ಜರಿ ಗೆಲುವು ತಂದುಕೊಟ್ಟರು. ಈ ಮೂಲಕ ಟೀಮ್ ಇಂಡಿಯಾ, ವಿರಾಟ್ ಕೊಹ್ಲಿ ಅವರ 100ನೇ ಮತ್ತು ರೋಹಿತ್ ಶರ್ಮ ನಾಯಕತ್ವದ ಮೊದಲ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿತು. ರೋಹಿತ್ ಶರ್ಮ ಪೂರ್ಣ ಪ್ರಮಾಣದ ನಾಯಕರಾದ ಬಳಿಕ ಭಾರತಕ್ಕೆ ಇದು ಸತತ 13ನೇ (9 ಟಿ20, 3 ಏಕದಿನ, 1 ಟೆಸ್ಟ್) ಗೆಲುವಾಗಿದೆ.

ಪಂದ್ಯದ ಮೊದಲೆರಡು ದಿನ ಭಾರತ ರನ್‌ಪ್ರವಾಹ ಹರಿಸಿದ್ದರೆ, 3ನೇ ದಿನ ಶ್ರೀಲಂಕಾ ತಂಡ ಒಟ್ಟು 16 ವಿಕೆಟ್ ಕಳೆದುಕೊಂಡು ಪಂದ್ಯದಲ್ಲಿ ಇನ್ನೂ 2 ದಿನಗಳ ಆಟ ಬಾಕಿ ಇರುವಂತೆಯೇ ಶರಣಾಯಿತು. ಈ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಪೂರ್ಣ 12 ಅಂಕ ಕಲೆಹಾಕಿದ್ದು, ಅಂಕಪಟ್ಟಿಯಲ್ಲಿ 65 ಅಂಕ (ಶೇ. 54.16) 5ನೇ ಸ್ಥಾನಕ್ಕೇರಿದೆ. ಶ್ರೀಲಂಕಾ ತಂಡ ಶೇ. 66.66 ಅಂಕದೊಂದಿಗೆ ಅಗ್ರಸ್ಥಾನದಿಂದ 3ನೇ ಸ್ಥಾನಕ್ಕಿಳಿದಿದೆ.

ಪಿಸಿಎ ಕ್ರೀಡಾಂಗಣದಲ್ಲಿ ಭಾನುವಾರ 4 ವಿಕೆಟ್‌ಗೆ 108 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ, ಭೋಜನ ವಿರಾಮಕ್ಕೆ ಮೊದಲೇ 174 ರನ್‌ಗೆ ಆಲೌಟ್ ಆಯಿತು. ಭರ್ತಿ 400 ರನ್ ಹಿನ್ನಡೆ ಕಂಡ ಶ್ರೀಲಂಕಾಕ್ಕೆ ಭಾರತ ಫಾಲೋಆನ್ ಹೇರಿತು. 2ನೇ ಇನಿಂಗ್ಸ್‌ನಲ್ಲೂ ಭಾರತದ ದಾಳಿಗೆ ನಲುಗಿದ ಶ್ರೀಲಂಕಾ ದಿನದಾಟ ಮುಕ್ತಾಯಕ್ಕೆ ಕೆಲ ಓವರ್ ಬಾಕಿ ಇರುವಾಗ 178 ರನ್‌ಗೆ ಸರ್ವಪತನ ಕಂಡಿತು. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಸಾಧಿಸಿತು.

ಶ್ರೀಲಂಕಾಕ್ಕೆ ಫಾಲೋಆನ್
ಬೆಳಗ್ಗೆ ಕ್ರಮವಾಗಿ 26 ಮತ್ತು 1 ರನ್‌ನಿಂದ ದಿನದಾಟ ಆರಂಭಿಸಿದ ಪಥುಮ ನಿಸ್ಸಂಕ ಮತ್ತು ಚರಿತ್ ಅಸಲಂಕಾ 15 ಓವರ್‌ಗಳ ಕಾಲ ಕಾಡಿತು. ಅಸಲಂಕಾ ವಿಕೆಟ್ ಕಬಳಿಸುವ ಮೂಲಕ ಬುಮ್ರಾ ಈ ಜೋಡಿಯನ್ನು ಬೇರ್ಪಡಿಸಿದರು. ಬಳಿಕ ಜಡೇಜಾ ಮಾರಕ ದಾಳಿಯಿಂದ ಲಂಕಾ ತಂಡವನ್ನು ಕಂಗೆಡಿಸಿದರು. ವಿಕೆಟ್ ಕೀಪರ್ ಡಿಕ್‌ವೆಲ್ಲ (2) ಬೆನ್ನಲ್ಲೇ ಬಾಲಂಗೋಚಿಗಳಾದ ಸುರಂಗ ಲಕ್ಮಲ್, ವಿಶ್ವ ಫೆರ್ನಾಂಡೊ, ಲಹಿರು ಕುಮಾರ ಖಾತೆಯನ್ನೇ ತೆರೆಯದೆ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಸತತ 2 ಎಸೆತಗಳಲ್ಲೇ ಕೊನೇ 2 ವಿಕೆಟ್ ಕಬಳಿಸಿ ಜಡೇಜಾ (41ಕ್ಕೆ 5) 5 ವಿಕೆಟ್ ಗೊಂಚಲಿನ ಸಾಧನೆ ಮಾಡಿದರು. 13 ರನ್ ಅಂತರದಲ್ಲಿ ಶ್ರೀಲಂಕಾ ಕೊನೇ 6 ವಿಕೆಟ್ ಕಳೆದುಕೊಂಡು ಫಾಲೋಆನ್‌ಗೆ ಸಿಲುಕಿದರೆ, ಅರ್ಧಶತಕದ ಪ್ರತಿರೋಧ ತೋರಿದ ನಿಸ್ಸಂಕ (61*) ಏಕಾಂಗಿಯಾಗಿ ಕ್ರೀಸ್‌ನಲ್ಲಿ ಉಳಿದರು.

2ನೇ ಇನಿಂಗ್ಸ್‌ನಲ್ಲಿ ಲಂಕಾ ಕುಸಿತ
ಭೋಜನ ವಿರಾಮಕ್ಕೂ ಮೊದಲೇ 2ನೇ ಇನಿಂಗ್ಸ್‌ನಲ್ಲಿ 4 ಓವರ್ ಎದುರಿಸಿದ ಲಂಕಾ, ಇನಿಂಗ್ಸ್ ಸೋಲಿನಿಂದ ಪಾರಾಗುವ ಕೆಚ್ಚೆದೆ ತೋರಲಿಲ್ಲ. ಹೊಸ ಚೆಂಡಿನಲ್ಲೇ ದಾಳಿ ಆರಂಭಿಸಿದ ಅಶ್ವಿನ್ ಆರಂಭಿಕ ಲಹಿರು ತಿರಿಮನ್ನೆ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ಅಟ್ಟಿದರು. ಬಳಿಕ ನಾಯಕ ದಿಮುತ್ ಕರುಣರತ್ನೆ (27), ಏಂಜೆಲೊ ಮ್ಯಾಥ್ಯೂಸ್ (28), ಧನಂಜಯ ಡಿಸಿಲ್ವ (30) ಮತ್ತು ಚರಿತ್ ಅಸಲಂಕಾ (20) ಕ್ರೀಸ್‌ಗೆ ಅಂಟಿಕೊಳ್ಳುವ ಪ್ರಯತ್ನ ಮಾಡಿದರೂ, ಭಾರತದ ದಾಳಿ ಎದುರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಆರ್. ಅಶ್ವಿನ್ (47ಕ್ಕೆ 4) ಮತ್ತು ಜಡೇಜಾ (46ಕ್ಕೆ 4) ಜೋಡಿಯ ದಾಳಿಗೆ ಲಂಕಾ ನಿರುತ್ತರವಾಯಿತು. ನಿರೋಶನ್ ಡಿಕ್‌ವೆಲ್ಲ (51*) ಪ್ರತಿರೋಧ ಒಡ್ಡಿದರೂ, ಅವರಿಗೆ ಇತರರಿಂದ ಸಮರ್ಥ ಬೆಂಬಲ ಸಿಗಲಿಲ್ಲ. ಹೀಗಾಗಿ ದಿನದಾಟ ಕೊನೆಗೊಳ್ಳುವುದಕ್ಕೆ ಮೊದಲೇ ಲಂಕಾ ಶರಣಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net