

Ishan Kishan: ನಿನ್ನೆ (ಏಪ್ರಿಲ್ 23) ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ನಿರ್ಣಾಯಕ ಪಂದ್ಯದಲ್ಲಿ ಇಶಾನ್ ಕಿಶನ್ ಸಂಪೂರ್ಣವಾಗಿ ವಿಫಲಗೊಂಡರು. ನಾಲ್ಕು ಎಸೆತಗಳನ್ನು ಆಡಿ ಪೆವಿಲಿಯನ್ನತ್ತ ಸಾಗಿದ ಕಿಶನ್, ಔಟ್ ಆದ ರೀತಿಗೆ ಕ್ರಿಕೆಟ್ ಪ್ರೇಮಿಗಳು ಭಾರೀ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೂ ಗ್ರಾಸವಾಗಿದೆ.
ಹಿಂದೆಂದೂ ಈ ರೀತಿ ಯಾವೊಬ್ಬ ಅಂಪೈರ್ ಕೂಡ ಔಟ್ ಕೊಟ್ಟಿರಲಿಲ್ಲ. ಇದು ಬಹುತೇಕರನ್ನು ಅನುಮಾನಕ್ಕೆ ದೂಡಿತು. ಕಿಶನ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಗೊಂದಲದಲ್ಲೇ ಕೈಮೇಲಕ್ಕೆತ್ತಿದ ಅಂಪೈರ್, ಔಟ್ ಘೋಷಿಸುವುದೋ ಬಿಡುವುದೋ ಎಂಬ ರೀತಿಯಲ್ಲಿ ತಮ್ಮ ನಿರ್ಣಯ ತಿಳಿಸಿದರು. ಬ್ಯಾಟ್ ಬಾಲ್ಗೆ ಟಚ್ ಆಗದೆ ಇದ್ದರೂ ಔಟ್ ಎಂಬ ಘೋಷಣೆ ಫಿಕ್ಸಿಂಗ್ ಆರೋಪವನ್ನು ಮುನ್ನೆಲೆಗೆ ತಂದಿದೆ.
ಇಶಾನ್ ಕಿಶನ್ ಪೆವಿಲಿಯನ್ನತ್ತ ಸಾಗಿದ್ದನ್ನು ಕಂಡ ಕ್ರಿಕೆಟ್ ಪ್ರೇಮಿಗಳು, ಅಂಪೈರ್ ಮತ್ತು ಕಿಶನ್ ಫಿಕ್ಸಿಂಗ್ ನಡೆಸಿದ್ದಾರೆ ಎಂದು ಜಾಲತಾಣಗಳಲ್ಲಿ ಆರೋಪಿಸಿದ್ದಾರೆ. ಕಿಶನ್ ವಿರುದ್ಧ ಕಿಡಿಕಾರಿದವರಿಗೆ ತಿರುಗೇಟು ನೀಡಿರುವ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು, ಇಲ್ಲಿ ಕಿಶನ್ ಅವರದ್ದೇನು ತಪ್ಪಿಲ್ಲ ಎಂದಿದ್ದಾರೆ.
"ಆ ಸಂದರ್ಭದಲ್ಲಿ ಅಲ್ಟ್ರಾ ಎಡ್ಜ್ನಲ್ಲಿ ಏನೋ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಇಶಾನ್ಗೆ ತನ್ನ ಬ್ಯಾಟ್ ಬಾಲ್ಗೆ ತಗುಲಿದೆ ಎಂದು ಅನಿಸಿದೆ. ಹೀಗಾಗಿ ತಕ್ಷಣವೇ ಅಲ್ಲಿಂದ ಹೊರ ನಡೆದಿದ್ದಾರೆ. ಅದೇ ಬ್ಯಾಟ್ ಪ್ಯಾಡ್ ಮತ್ತು ಬಾಲ್ಗೆ ಟಚ್ ಆಗಿದಿದ್ದರೆ ಖಂಡಿತ ಅಲ್ಲೊಂದು ಗೊಂದಲ ಇರುತ್ತಿತ್ತು. ಇಲ್ಲಿ ತಾಂತ್ರಿಕ ಸಮಸ್ಯೆಯಿಂದ ಕಿಶನ್ ಔಟ್ ಆಗಿದ್ದಾರೆ" ಎಂದು ರಾಯುಡು ಹೇಳಿದ್ದಾರೆ,(ಏಜೆನ್ಸೀಸ್).