ನಾನು ಪಾಕಿಸ್ತಾನಿ ಅಲ್ಲ! ಸುಳ್ಳು ಆರೋಪ, ಟ್ರೋಲ್​ಗಳ ವಿರುದ್ಧ ಗುಡುಗಿದ ನಟಿ ಇಮಾನ್ವಿ ಇಸ್ಮಾಯಿಲ್​ | Imanvi

ವಿಜಯವಾಣಿ (57)
Published on

Imanvi Ismail: ಏಪ್ರಿಲ್​ 22ರಂದು 28 ಅಮಾಯಕರ ಪ್ರಾಣವನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಯಿಂದ ಇಡೀ ದೇಶವೇ ಆಘಾತಕ್ಕೊಳಗಾಗಿದೆ. ಉಗ್ರರ ಭೀಕರ ಗುಂಡಿನ ದಾಳಿಗೆ ಕೆರಳಿರುವ ಭಾರತೀಯರು, ಪಾಕಿಸ್ತಾನದ ಜನರಿಗೆ ನಮ್ಮ ನೆಲದಲ್ಲಿ ಉಳಿಯಲು ಜಾಗ ಕೊಡಬೇಡಿ. ಎಲ್ಲರನ್ನೂ ಇಲ್ಲಿಂದ ಓಡಿಸಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಂತೆಯೇ ಸರ್ಕಾರ ಕೂಡ ಹಲವು ಕಠಿಣ ನಿರ್ಧಾರಗಳನ್ನು ಕೈಗೊಂಡು, ಅವು ತಕ್ಷಣವೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಯುವ ನಟಿ ವಿರುದ್ಧ ನೆಟ್ಟಿಗರು ತೀವ್ರ ಕಿಡಿಕಾರಿದ್ದಾರೆ.

ಯುವ ನಟಿ ಪಾಕಿಸ್ತಾನ ಮೂಲದವಳು. ಅವಳನ್ನು ತಕ್ಷಣವೇ ಮುಂಬರುವ ತೆಲುಗು ಚಿತ್ರದಿಂದ ಕೈಬಿಡಿ. ಪಾಕ್ ನಂಟು ಹೊಂದಿರುವ ಯಾರಿಗೂ ಇಲ್ಲಿ ಜಾಗ ಕೊಡಬಾರದು ಎಂದು ಅನೇಕರು ಚಿತ್ರತಂಡಕ್ಕೆ ಆಗ್ರಹಿಸಿದ್ದಾರೆ. ತನ್ನ ವಿರುದ್ಧ ವ್ಯಾಪಕ ಟೀಕೆ, ನೆಗೆಟಿವ್​ ಟ್ರೋಲ್​ಗಳ ಸುರಿಮಳೆ ಹರಿದುಬಂದ ಹಿನ್ನೆಲೆ ಕಡೆಗೂ ನಟಿ ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೂ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿರುವ ನಟಿ ಇಮಾನ್ವಿ ಇಸ್ಮಾಯಿಲ್​. ಟಾಲಿವುಡ್​ ರೆಬೆಲ್​ ಸ್ಟಾರ್​ ಪ್ರಭಾಸ್ ಅಭಿನಯದ 'ಫೌಜಿ' ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿರುವ ನಟಿಗೆ ಇದೀಗ ವ್ಯಾಪಕ ಟೀಕೆ, ಟ್ರೋಲ್​ಗಳು ವ್ಯಕ್ತವಾಗಿವೆ.

ಹನು ರಾಘವ್​ಪುಡಿ ನಿರ್ದೇಶನದ ಹಾಗೂ ಪ್ರಭಾಸ್​ ನಟಿಸಿರುವ 'ಫೌಜಿ' ಚಿತ್ರದಲ್ಲಿ ಬಣ್ಣ ಹಚ್ಚಿರುವ ಇಮಾನ್ವಿಯನ್ನು ತಪ್ಪಾಗಿ ಪಾಕಿಸ್ತಾನಿ ಎಂದು ಕರೆದಿರುವ ನೆಟ್ಟಿಗರು, ಆಕೆಯನ್ನು ತಕ್ಷಣವೇ ಚಿತ್ರತಂಡದಿಂದ ತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ. ಕಡೆಗೂ ಈ ಕುರಿತು ತನ್ನ ಬೇಸರ ಹೊರಹಾಕಿದ ಯುವ ನಟಿ, ಸುದೀರ್ಘ ಬರಹದ ಮುಖೇನ ತಾನು ಪಾಕಿಸ್ತಾನಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಮೊದಲಿಗೆ ಪಹಲ್ಗಾಮ್​ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಇಮಾನ್ವಿ, "ಕಲಾವಿದೆಯಾಗಿ ನನಗೆ ಪ್ರೀತಿ ಹಂಚುವುದು ಗೊತ್ತೇ ಹೊರತು, ದ್ವೇಷದ ಕಿಚ್ಚಲ್ಲ. ಕಳೆದ ಎರಡು-ಮೂರು ದಿನಗಳಿಂದ ನನ್ನ ವಿರುದ್ಧ ಕೇಳಿಬಂದಿರುವ ಆರೋಪಗಳು ಶುದ್ಧ ಸುಳ್ಳು. ನಾನು ಪಾಕಿಸ್ತಾನಿಯಲ್ಲ. ನನಗೆ ಅಥವಾ ನನ್ನ ಕುಟುಂಬಕ್ಕೆ ಪಾಕ್​ ಸೇನೆಯೊಂದಿಗೆ ಯಾವ ಸಂಬಂಧವೂ ಇಲ್ಲ" ಎಂದು ಹೇಳಿದ್ದಾರೆ.

"ನಾನು ಭಾರತ-ಅಮೆರಿಕನ್​. ಜನಿಸಿದ್ದು ಅಮೆರಿಕದ ಲಾಸ್​ ಏಜೆಂಲಿಸ್​ನಲ್ಲಿ. ನನ್ನ ಪೋಷಕರು ಭಾರತದಲ್ಲೇ ಇದ್ದರು. ನಾನು ಜನಿಸುವ ಸಮಯದಲ್ಲಿ ಅವರು ಅಮೆರಿಕ ಪ್ರಜೆಗಳಾದರು. ನನಗೆ ಹಿಂದಿ, ತೆಲುಗು, ಗುಜರಾತಿ ಮತ್ತು ಇಂಗ್ಲಿಷ್​ ಭಾಷೆ ಮಾತನಾಡಲು ಬರುತ್ತದೆ. ಇಲ್ಲಿನ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಆಳವಾದ ಸಂಬಂಧವಿದೆ. ಭಾರತೀಯ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವುದು ನನಗೆ ಬಹಳ ಖುಷಿ ನೀಡಿದೆ. ಈ ಪ್ಲಾಟ್​ಫಾರ್ಮ್​ ಜನರನ್ನು ಒಟ್ಟುಗೂಡಿಸಬೇಕೇ ವಿನಃ ಒಡೆಯಬಾರದು ಎಂದು ನಟಿ ಸ್ಪಷ್ಟನೆ ನೀಡಿದ್ದಾರೆ. ಇಮಾನ್ವಿ ಸಂದೇಶದ ಬಳಿಕ ಅನೇಕರು ಆಕೆಗೆ ಬೆಂಬಲಿಸಿರುವುದು ಕಮೆಂಟ್​ಗಳಲ್ಲಿ ಸ್ಪಷ್ಟವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net