ಇದು ಧೋನಿ ಮಿಸ್ಟೇಕ್​ ಅಲ್ಲ! KKR​ ವಿರುದ್ಧದ ಪಂದ್ಯದಲ್ಲಿ ನಡೆದಿದ್ದೇ ಬೇರೆ: ಮಾಜಿ ಕ್ರಿಕೆಟಿಗ ಆರೋಪ

ವಿಜಯವಾಣಿ - 2025-04-12T080629.008
Published on

CSK vs KKR: ನಿನ್ನೆ (ಏ.11) ಚೆಪಾಕ್​ನಲ್ಲಿ ನಡೆದ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಸಿಎಸ್​ಕೆ ತಂಡಕ್ಕೆ ವ್ಯಾಪಕ ಟೀಕೆಗಳು ಹರಿದುಬಂದಿವೆ. ಐಪಿಎಲ್​ ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿದ ಬಲಿಷ್ಠ ತಂಡವೊಂದು ಇದೀಗ ಗೆಲುವಿಗಾಗಿ ತೀರ ಪರದಾಡುತ್ತಿರುವುದು ಮತ್ತು ಅಂಕಪಟ್ಟಿಯ ಕೊನೆ ಸ್ಥಾನಕ್ಕೆ ಸೆಣಸಾಡುತ್ತಿರುವುದು ಸದ್ಯ ಕ್ರಿಕೆಟ್​ ಪ್ರೇಮಿಗಳ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ. ಈ ಮಧ್ಯೆ ಮಾಜಿ ಬ್ಯಾಟರ್ ಆರೋಪವೊಂದು ಸದ್ದು ಮಾಡಿದೆ.

ಅಸಲಿಗೆ ಔಟ್?

16ನೇ ಓವರ್​ನಲ್ಲಿ ಸಿಎಸ್​ಕೆ ಪರ ಬ್ಯಾಟ್​ ಮಾಡಲು ಕಣಕ್ಕಿಳಿದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಸುನಿಲ್ ನರೈನ್ ಬೌಲಿಂಗ್​ನಲ್ಲಿ ತಮ್ಮ ವಿಕೆಟ್​ ಕಳೆದುಕೊಂಡರು. ನರೈನ್​ ಹಾಕಿದ ಬಾಲ್​​ ಧೋನಿ ಹೊಡೆತಕ್ಕೆ ಸಿಲುಕದೆ, ಸ್ಟಂಪ್ಸ್​ ಮೇಲೆ ಹಾರಿ ಹೋಯಿತು. ಈ ವೇಳೆ ಕೆಕೆಆರ್​ ಔಟ್​ ಎಂದು ಅಪೀಲ್​ ಮಾಡುತ್ತಿದ್ದಂತೆ ಆನ್​-ಫೀಲ್ಡ್​ ಅಂಪೈರ್​ ಔಟ್ ಎಂದು ಘೋಷಿಸಿದರು. ತಕ್ಷಣವೇ ಡಿಆರ್​ಎಸ್​ ತೆಗೆದುಕೊಂಡ ಧೋನಿ, ತಮ್ಮದು ಅಸಲಿಗೆ ಔಟ್​ ಇತ್ತಾ? ಎಂಬುದನ್ನು ಟಿವಿ​ ಅಂಪೈರ್​ಗೆ ಪ್ರಶ್ನಿಸಿದರು. ಅಂತಿಮವಾಗಿ ಇಲ್ಲಿಯೂ ಅದು ಔಟ್​ ಎಂದೇ ನಿರ್ಣಯಿಸಲಾಯಿತು.

ಧೋನಿ ಔಟ್ ಆಗಿರಲಿಲ್ಲ

ಕೇವಲ ಒಂದು ರನ್​ಗೆ ಧೋನಿ ಪೆವಿಲಿಯನ್​ ಹಾದಿ ಹಿಡಿದರು. ಇದು ಸಿಎಸ್​ಕೆ ಅಭಿಮಾನಿಗಳನ್ನು ಅಕ್ಷರಶಃ ಅಚ್ಚರಿಗೆ ದೂಡಿತು. ಬಹುತೇಕರು ಇದು ಔಟ್​ ಅಲ್ಲ ಎಂದೇ ವಾದಿಸಿದರು. ಆದರೆ, ಟಿವಿ ಅಂಪೈರ್​ ನಿರ್ಣಯವೇ ಅಲ್ಲಿ ಅಂತಿಮ ಹಾಗೂ ಸೂಕ್ತವಾಗಿತ್ತು. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನವಜೋತ್ ಸಿಂಗು ಸಿಧು, "ಇಲ್ಲಿ ಧೋನಿ ಮೋಸ ಮಾಡಲು ಸಾಧ್ಯವಿಲ್ಲ. ಅವರು ತಮ್ಮ ಬ್ಯಾಟ್ ಮೇಲಕ್ಕೆತ್ತಿ ಅಂಪೈರ್‌ಗೆ ಇನ್​ಸೈಡ್​ ಎಡ್ಜ್​ ಕುರಿತು ತಿಳಿಸಿದರು. ಅಸಲಿಗೆ ಧೋನಿ ಔಟ್ ಆಗಿರಲಿಲ್ಲ" ಎಂಬುದು ಖಚಿತ ಎಂದರು.

"ಮನುಷ್ಯ ಅಂದಮೇಲೆ ಎಲ್ಲರೂ ತಪ್ಪು ಮಾಡುತ್ತಾರೆ. ಇಲ್ಲಿ ಥರ್ಡ್​ಅಂಪೈರ್ ಕೂಡ ಅಂತಹದ್ದೇ ಒಂದು ತಪ್ಪು ಮಾಡಿದ್ದಾರೆ. ಇರಲಿ, ಅದನ್ನೇ ದೊಡ್ಡ ಸಮಸ್ಯೆಯನ್ನಾಗಿ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಮತ್ತು ಪ್ರಯೋಜನವಿಲ್ಲ" ಎಂದು ಸಿಧು ಅಭಿಪ್ರಾಯಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net