

ಹಾಂಗ್ರೆೌ: ಯುವ ಶೂಟರ್ ಇಶಾ ಸಿಂಗ್ ಏಷ್ಯನ್ ಗೇಮ್ಸ್ನಲ್ಲಿ ಶುಕ್ರವಾರದಂದು 2 ಬೆಳ್ಳಿ ಪದಕ ಗೆದ್ದುಕೊಂಡರೆ, ಐಶ್ವರಿ ಪ್ರತಾಪ್ ಸಿಂಗ್ ತೋಮರ್ 1 ಚಿನ್ನ ಮತ್ತು 1 ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಇವರಿಬ್ಬರೂ ಹಾಂಗ್ರೆೌ ಏಷ್ಯಾಡ್ನಲ್ಲಿ ತಲಾ 4 ಪದಕ ಗೆದ್ದ ಸಾಧನೆ ಮಾಡಿದ್ದಾರೆ. 18 ವರ್ಷದ ಇಶಾ ಸಿಂಗ್ ಈ ಮುನ್ನ ತಲಾ 1 ಚಿನ್ನ, ಬೆಳ್ಳಿ ಗೆದ್ದಿದ್ದರೆ, 22 ವರ್ಷದ ಐಶ್ವರಿ 1 ಚಿನ್ನ ಮತ್ತು ಕಂಚು ಗೆದ್ದಿದ್ದರು.
ಭಾರತದ ಶೂಟರ್ಗಳು ಶುಕ್ರವಾರ 2 ಚಿನ್ನ, 3 ಬೆಳ್ಳಿಗೆ ಗುರಿಯಿಟ್ಟರು. ಇದರೊಂದಿಗೆ ಕೂಟದ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ಇದುವರೆಗೆ ಒಟ್ಟು 18 ಪದಕ (6 ಚಿನ್ನ, 7 ಬೆಳ್ಳಿ, 5 ಕಂಚು) ಬೇಟೆಯಾಡಿದಂತಾಗಿದೆ. ಈ ಮೂಲಕ 2006ರ ದೋಹಾ ಏಷ್ಯಾಡ್ನಲ್ಲಿ ದಿಗ್ಗಜ ಜಸ್ಪಾಲ್ ರಾಣಾ ಸಾಧನೆಯಿಂದ ಗರಿಷ್ಠ 14 ಪದಕ ಗೆದ್ದಿದ್ದ ದಾಖಲೆಯನ್ನು ಶೂಟರ್ಗಳು ಸುಧಾರಿಸಿಕೊಂಡಿದ್ದಾರೆ.