

Rohit Sharma and Virat Kohli : ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಪಂದ್ಯದಲ್ಲಿ ಭಾರತದ ಹಿರಿಯ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಸೋತಿದ್ದಾರೆ. ರೋಹಿತ್ ಮತ್ತು ಕೊಹ್ಲಿಯ ಸತತ ವೈಫಲ್ಯದ ಹಿನ್ನೆಲೆಯಲ್ಲಿ ಭಾರತ ತಂಡದಲ್ಲಿ ಅವರ ಸ್ಥಾನ ಇದೀಗ ಪ್ರಶ್ನಾರ್ಹವಾಗಿದೆ. ಅಭಿಮಾನಿಗಳು, ಮಾಜಿ ಆಟಗಾರರು ಮತ್ತು ವಿಶ್ಲೇಷಕರು ಕೊಹ್ಲಿ ಮತ್ತು ರೋಹಿತ್ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕೊಹ್ಲಿಗಿಂತ ರೋಹಿತ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಬ್ಯಾಟಿಂಗ್‌ನಲ್ಲಿನ ವೈಫಲ್ಯಗಳ ಜೊತೆಗೆ ರೋಹಿತ್ ಅವರು ನಾಯಕತ್ವ ವಿಚಾರದಲ್ಲಿಯೂ ಹೆಣಗಾಡುತ್ತಿದ್ದಾರೆ. ಕಳೆದ ಆರು ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಐದರಲ್ಲಿ ಸೋತಿದೆ. ಮೈದಾನದ ಒಳಗೆ ಮತ್ತು ಹೊರಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ರೋಹಿತ್ ಹೆಣಗಾಡುತ್ತಿರುವಂತೆ ಕಾಣುತ್ತಿದೆ. ರೋಹಿತ್ ಮೈದಾನದಲ್ಲಿ ತನ್ನ ಸಹ ಆಟಗಾರರ ಮೇಲೆ ಕೂಗಾಡುವುದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ ಎಂಬ ಅಪವಾದ ಇದೆ.
ಇನ್ನು ಕೊಹ್ಲಿ ಬಗ್ಗೆ ಹೇಳುವುದಾದರೆ, ಅವರು ಈ ಸರಣಿಯಲ್ಲಿ ಮತ್ತೆ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತಿದ್ದಾರೆ. ಆ ತಪ್ಪುಗಳು ಯಾವುದೆಂದರೆ, ಆಫ್‌ಸೈಡ್ ಬಾಲ್‌ಗಳನ್ನು ಆಡುವಲ್ಲಿ ಎಡವುತ್ತಿದ್ದಾರೆ. ಅವರು ಆಡಿದ ಏಳು ಇನ್ನಿಂಗ್ಸ್‌ಗಳಲ್ಲಿ ಆರರಲ್ಲಿ ಆಫ್‌ಸೈಡ್ ಬಾಲ್‌ಗಳನ್ನು ಆಡಿ ವಿಕೆಟ್ ನೀಡಿದ್ದಾರೆ.
ಈ ಸರಣಿಯಲ್ಲಿ ರೋಹಿತ್ ಮತ್ತು ವಿರಾಟ್ ಅಂಕಿಅಂಶಗಳನ್ನು ನೋಡಿದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ತುಂಬಾ ಬೇಸರ ತರಿಸುತ್ತದೆ. ರೋಹಿತ್ ಅವರು 5 ಇನ್ನಿಂಗ್ಸ್‌ಗಳಲ್ಲಿ 6.2 ಸರಾಸರಿಯಲ್ಲಿ 31 ರನ್ ಗಳಿಸಿದರೆ, ವಿರಾಟ್ 7 ಇನ್ನಿಂಗ್ಸ್‌ಗಳಲ್ಲಿ 27.8 ಸರಾಸರಿಯಲ್ಲಿ 167 ರನ್ ಗಳಿಸಿದರು. ಈ ಸರಣಿಯಲ್ಲಿ ವಿರಾಟ್ ಕನಿಷ್ಠ ಒಂದು ಅರ್ಧಶತಕ ಗಳಿಸಿದರು. ಆದರೆ, ರೋಹಿತ್ ಎರಡಂಕಿ ದಾಟಲು ಪರದಾಡಿದ್ದಾರೆ. ತಮ್ಮ ವಿರುದ್ಧ ಹೆಚ್ಚುತ್ತಿರುವ ಟೀಕೆಗಳ ಹಿನ್ನೆಲೆಯಲ್ಲಿ ರೋಹಿತ್ ಮತ್ತು ವಿರಾಟ್ ತಮ್ಮ ಅಸಮರ್ಥತೆಯನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದಾರೆ.
ಬಿಸಿಸಿಐ ಮತ್ತು ಭಾರತದ ಆಯ್ಕೆ ಸಮಿತಿ ಸದಸ್ಯರು ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ, ರೋಹಿತ್ ಮತ್ತು ಕೊಹ್ಲಿ ಐದನೇ ಟೆಸ್ಟ್ ಆಡಲಿದ್ದಾರೆ. ಅಂತಿಮ ಟೆಸ್ಟ್‌ನಲ್ಲಿ ಇವರಿಬ್ಬರು ತಂಡದಲ್ಲಿದ್ದರೆ ಟೀಮ್ ಇಂಡಿಯಾ ನಷ್ಟ ಅನುಭವಿಸುವ ಸಾಧ್ಯತೆಯೂ ಇದೆ. ನಾವು ತಂಡಕ್ಕೆ ಹೊರೆಯಾಗಿದ್ದೇವೆ ಎಂದು ಹೇಳಿ ಸ್ವಇಚ್ಛೆಯಿಂದ ನಿರ್ಗಮಿಸಿದರೆ ಉತ್ತಮ. ಇಲ್ಲವಾದಲ್ಲಿ ಟೀಮ್ ಇಂಡಿಯಾ ಅಂತಿಮ ಟೆಸ್ಟ್ ಹಾಗೂ ಸರಣಿಯನ್ನೂ ಹೀನಾಯವಾಗಿ ಸೋಲಬೇಕಾಗುತ್ತದೆ. (ಏಜೆನ್ಸೀಸ್)