ಜೈವಿಕ ಸುರಕ್ಷೆಯಲ್ಲಿ ಕ್ರಿಕೆಟ್ ಸುರಕ್ಷಿತವೇ? ಇಂಗ್ಲೆಂಡ್-ವಿಂಡೀಸ್ ಟೆಸ್ಟ್​ಗೆ ಹೊಸ ವೇದಿಕೆ

Sport 1
Published on

ಬೆಂಗಳೂರು: ಕರೊನಾ ಮಹಾಮಾರಿಯ ಅಬ್ಬರ ಜಗತ್ತಿನ ಎಲ್ಲೆಡೆ ಮುಂದುವರಿದಿರುವ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭಕ್ಕೆ ಕ್ರಿಕೆಟ್ ಜನಕರ ನಾಡಿನಲ್ಲಿ ಸಿದ್ಧತೆಗಳು ನಡೆದಿವೆ. ಜುಲೈ 8ರಿಂದ 3 ಪಂದ್ಯಗಳ ಟೆಸ್ಟ್ ಸರಣಿ ಆಡಲು ಆತಿಥೇಯ ಇಂಗ್ಲೆಂಡ್ ಹಾಗೂ ಪ್ರವಾಸಿ ವೆಸ್ಟ್ ಇಂಡೀಸ್ ತಂಡಗಳು ಸಿದ್ಧವಾಗುತ್ತಿವೆ. ಕರೊನಾ ಭೀತಿಯ ನಡುವೆಯೂ ಈ ಕ್ರಿಕೆಟ್ ಸರಣಿ ನಡೆಸಲು ವಿಶ್ವಾಸ ತುಂಬಿರುವುದು ಜೈವಿಕ ಸುರಕ್ಷಾ ವಾತಾವರಣ ಅಥವಾ ಬಯೋ-ಬಬಲ್. ಹಾಗಾದರೆ ಏನಿದು ಜೈವಿಕ ಸುರಕ್ಷಾ (ಬಯೋ- ಸೆಕ್ಯುರ್) ವಾತಾವರಣ? ಕ್ರಿಕೆಟ್ ಆಡಲು ಇದು ಅಷ್ಟೊಂದು ಸುರಕ್ಷಿತವಾದ ಕಾರ್ಯತಂತ್ರವೇ? ನಿಜಕ್ಕೂ ಇದು ಫಲಪ್ರದವಾಗುವುದೇ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಈ ಅನುಮಾನಗಳಿಗೆ ಸಂಕ್ಷಿಪ್ತ ಉತ್ತರಗಳು ಇಲ್ಲಿವೆ.

ಏನಿದು ಜೈವಿಕ-ಸುರಕ್ಷಾ ವಾತಾವರಣ?: ಕರೊನಾದಂಥ ಸೋಂಕು ಅಂಟಿಕೊಳ್ಳುವುದು ಅಥವಾ ಹರಡುವುದನ್ನು ತಡೆಗಟ್ಟಲು ಕೈಗೊಳ್ಳುವ ಸೂಕ್ತ ಕ್ರಮವೇ ಜೈವಿಕ-ಸುರಕ್ಷೆ. ಜನರಿಂದ ಜನರಿಗೆ ಸೋಂಕು ಹರಡುವ ಅಪಾಯವನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡುವುದೇ ಇದರ ಉದ್ದೇಶ. ಇದು ಯಶಸ್ಸು ಕಾಣಬೇಕಾದರೆ ಟೆಸ್ಟ್ ಸರಣಿಗೆ ಸಂಬಂಧಿತ ಎಲ್ಲ ವ್ಯಕ್ತಿಗಳೂ ಒಂದು ನಿರ್ದಿಷ್ಟ ಸ್ಥಳದಲ್ಲಿ ನಿರ್ಬಂಧಿಸಲ್ಪಟ್ಟಿರಬೇಕು. ಆರಂಭಿಕ ಪರೀಕ್ಷೆಗಳನ್ನು ಮುಗಿಸಿ ಒಳಗೆ ಬಂದವರು ಯಾರೂ ಪಂದ್ಯ-ಸರಣಿ ಮುಗಿಯುವವರೆಗೂ ಹೊರಹೋಗಬಾರದು, ಹೊರಗಿನಿಂದ ಯಾರೂ ಒಳಬರುವಂತಿಲ್ಲ. ಎಲ್ಲರ ಚಟುವಟಿಕೆಗಳೂ ಬಹುತೇಕ ನಿರ್ಬಂಧಿಸಲ್ಪಟ್ಟಿರುತ್ತದೆ. ಪಂದ್ಯಕ್ಕೆ ಅಗತ್ಯವಾಗಿರುವವರು ಮಾತ್ರ ಈ ಜೈವಿಕ-ಸುರಕ್ಷಾ ವಾತಾವರಣದಲ್ಲಿರುತ್ತಾರೆ.

ನಿಜಕ್ಕೂ ಇದು ಕರೊನಾಮುಕ್ತವೇ?: ಕೃಷಿಯಲ್ಲಿ ಬೆಳೆ ರಕ್ಷಣೆಗಾಗಿ ಮತ್ತು ಪ್ರಯೋಗಾಲಯಗಳಲ್ಲಿ ಜೈವಿಕ ಸುರಕ್ಷಾ ವಾತಾವರಣವನ್ನು ನಿರ್ವಿುಸಿಕೊಳ್ಳುವ ವಾಡಿಕೆ ಇದೆ. ಆದರೆ ಕ್ರಿಕೆಟ್​ನಲ್ಲಿ, ಅದರಲ್ಲೂ ಕ್ರೀಡೆಯಲ್ಲಿ ಇದೇ ಮೊದಲ ಬಾರಿಗೆ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಆಡಲಾಗುತ್ತಿದೆ. ಹೀಗಾಗಿ ಕ್ರೀಡೆಯಲ್ಲಿ ಇದೇ ಮೊದಲ ಬಾರಿಗೆ ಇದನ್ನು ಪ್ರಯೋಗಿಸಲಾಗುತ್ತಿರುವುದರಿಂದ ಇದರಲ್ಲಿನ ಲೋಪದೋಷಗಳು ಮತ್ತು ಯಶಸ್ಸಿನ ಬಗ್ಗೆ ಭವಿಷ್ಯ ನುಡಿಯುವುದು ಕಷ್ಟ. 5 ದಿನಗಳ ಕಾಲ ನಡೆಯುವ ಟೆಸ್ಟ್ ಪಂದ್ಯದಲ್ಲಿ 22 ಆಟಗಾರರು ಮಾತ್ರವಲ್ಲ ನೂರಾರು ಮಂದಿ ಒಳಗೊಂಡಿರುತ್ತಾರೆ. ಅವರೆಲ್ಲರೂ ಮಿಲಿಟರಿ ಮಾದರಿಯಲ್ಲಿ ಶಿಸ್ತುಬದ್ಧವಾಗಿ ನಡೆದುಕೊಳ್ಳುವರೇ? ಯಾರಾದರೂ ಒಬ್ಬ ಪಾಸಿಟಿವ್ ಆದರೂ ಏನಾಗುತ್ತದೆ ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರಿಸುವುದು ಕಷ್ಟ.

ಇಸಿಬಿ ಯೋಜನೆಗಳೇನು?: ಜೈವಿಕ ಸುರಕ್ಷಾ ವಾತಾವರಣ ನಿರ್ವಿುಸಿಕೊಳ್ಳುವ ಸಲುವಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) 3 ಪಂದ್ಯಗಳ ಟೆಸ್ಟ್ ಸರಣಿಯನ್ನು 2 ಕ್ರೀಡಾಂಗಣಗಳಿಗೆ ಸೀಮಿತಗೊಳಿಸಿದೆ. ಮೊದಲ ಟೆಸ್ಟ್ ಪಂದ್ಯ ಸೌಥಾಂಪ್ಟನ್​ನ ಏಜಿಯಸ್ ಬೌಲ್​ನಲ್ಲಿ ನಡೆಯಲಿದ್ದರೆ, ಮತ್ತೆರಡು ಪಂದ್ಯಗಳು ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫೋರ್ಡ್ ನಲ್ಲಿ ನಿಗದಿಯಾಗಿವೆ. ಇವೆರಡೂ ಕ್ರೀಡಾಂಗಣಗಳ ಆವರಣದಲ್ಲೇ ಆಟಗಾರರು ಮತ್ತು ಪಂದ್ಯಕ್ಕೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಉಳಿದುಕೊಳ್ಳಲು ಹೋಟೆಲ್ ವ್ಯವಸ್ಥೆ ಇದೆ. ಇದರಿಂದಾಗಿ ಆಟಗಾರರು ಪ್ರತಿ ದಿನದಾಟ ಮುಗಿದ ಬಳಿಕ ಹೋಟೆಲ್​ಗೆ ಮರಳಲು ಬಸ್ ಹತ್ತಬೇಕಾಗಿಲ್ಲ. ಆ ಕಾರಣಕ್ಕಾಗಿಯೇ ಪಂದ್ಯ ನಡೆಸಲು ಇವೆರಡು ಕ್ರೀಡಾಂಗಣಗಳನ್ನು ಆಯ್ಕೆ ಮಾಡಲಾಗಿದೆ. ವೆಸ್ಟ್ ಇಂಡೀಸ್ ಅಟಗಾರರು ಜೂನ್ 9ರಂದೇ ಇಂಗ್ಲೆಂಡ್​ಗೆ ಬಂದಿಳಿದಿದ್ದು, ಮೊದಲ 2 ವಾರ ಕ್ವಾರಂಟೈನ್​ನಲ್ಲಿರಲಿದ್ದಾರೆ. 3ನೇ ವಾರ ಕ್ವಾರಂಟೈನ್​ನಲ್ಲಿರುವ ಜತೆಗೆ ಅಭ್ಯಾಸವನ್ನೂ ನಡೆಸಲಿದ್ದಾರೆ. ಜತೆಗೆ ಪಂದ್ಯ ಪೂರ್ವದಲ್ಲಿ ಮತ್ತು ಪಂದ್ಯದ ವೇಳೆ ಇಸಿಬಿ ನೀಡುವ ಮಾರ್ಗಸೂಚಿಗಳನ್ನು ಅಂಪೈರ್, ರೆಫ್ರಿ ಸಹಿತ ಪಂದ್ಯದ ಅಧಿಕಾರಿಗಳು, ಇತರ ಸಹಾಯಕರು, ಕ್ರೀಡಾಂಗಣದ ಸಿಬ್ಬಂದಿ, ನೇರಪ್ರಸಾರ ವಾಹಿನಿ ಸಿಬ್ಬಂದಿ ಮತ್ತು ಪತ್ರಕರ್ತರು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರೇಕ್ಷಕರಿಗೆ ಪ್ರವೇಶ ನಿಷೇಧಿಸಲಾಗಿರುತ್ತದೆ.

ಐಪಿಎಲ್​ಗೆ ಈ ತಂತ್ರ ಕಷ್ಟ: ದ್ವಿಪಕ್ಷೀಯ ಸರಣಿಗಳಿಗೆ ಜೈವಿಕ-ಸುರಕ್ಷಾ ವಾತಾವರಣ ನಿರ್ವಿುಸುವುದು ಕಾರ್ಯ ಸಾಧ್ಯವಾದರೂ, ಐಪಿಎಲ್​ನಂಥ ಬೃಹತ್ ಟೂರ್ನಿಗೆ ಇದನ್ನೇ ಅನುಸರಿಸುವುದು ಕಷ್ಟಕರ. 8 ತಂಡಗಳು, ಅದರಲ್ಲೂ ಹಲವಾರು ದೇಶಗಳ ಆಟಗಾರರು ಒಳಗೊಂಡಿರುವ ಐಪಿಎಲ್​ನಂಥ ಟೂರ್ನಿಗೆ ಜೈವಿಕ- ಸುರಕ್ಷಾ ವಾತಾವರಣ ನಿರ್ವಿುಸುವುದು ಕಠಿಣ ಸವಾಲು. ಅಲ್ಲದೆ ಟೂರ್ನಿಯ 60 ಪಂದ್ಯಗಳನ್ನು 2-3 ಕ್ರೀಡಾಂಗಣಗಳಿಗೆ ಸೀಮಿತಗೊಳಿಸುವುದು ಸುಲಭವಲ್ಲ. ಪ್ರೇಕ್ಷಕರಿಲ್ಲದಿದ್ದರೂ, ಐಪಿಎಲ್​ನಂಥ ಪಂದ್ಯಗಳಿಗೆ ನೂರಾರು ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳುವುದು ಅಗತ್ಯ. ಇವರೆಲ್ಲರನ್ನೂ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಕಾಪಾಡಿಕೊಳ್ಳುವುದು ಅಸಾಧ್ಯದ ಮಾತು.

ಭಾರತದಲ್ಲಿ ಸಾಧ್ಯವೇ?: ಇಂಗ್ಲೆಂಡ್​ನ ಜೈವಿಕ-ಸುರಕ್ಷಾ ಮಾದರಿಯನ್ನು ಇತರ ಕ್ರಿಕೆಟ್ ರಾಷ್ಟ್ರಗಳು ಕೂಡ ಅನುಸರಿಸುವುದು ಸುಲಭವಲ್ಲ. ಅದರಲ್ಲೂ ಭಾರತದಲ್ಲಿ ಯಾವುದೇ ಪ್ರಮುಖ ಕ್ರೀಡಾಂಗಣದಲ್ಲೂ ಅದರ ಆವರಣದಲ್ಲೇ ಸುಸಜ್ಜಿತ ಹೋಟೆಲ್ ವ್ಯವಸ್ಥೆಗಳಿಲ್ಲ. ಆದರೆ ಕೆಲ ಕ್ರೀಡಾಂಗಣದ ಆಸುಪಾಸಿನಲ್ಲೇ ಪಂಚತಾರಾ ಹೋಟೆಲ್ ವ್ಯವಸ್ಥೆಗಳಿವೆ. ಉದಾ ಹರಣೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಒಂದೆರಡು ಕಿಲೋಮೀಟರ್ ದೂರದಲ್ಲೇ ಸುಸಜ್ಜಿತ ಹೋಟೆಲ್​ಗಳಿವೆ. ಆದರೆ ಪಂದ್ಯ ಏರ್ಪಡಿಸುವಾಗ ಕ್ರೀಡಾಂಗಣದ ಜತೆಗೆ ಹೋಟೆಲ್​ಗಳಿಗೂ ಹೊರಗಿನವರು ಪ್ರವೇಶಿಸದಂತೆ ನೋಡಿಕೊಳ್ಳಲು ಸಾಧ್ಯವಾಗುವುದೇ ಎಂದು ಹೇಳುವುದು ಕಷ್ಟ.

ಕರೊನಾ ಜತೆಜತೆಯಲ್ಲೇ ಕ್ರಿಕೆಟ್ ಆಟ!: ಜೈವಿಕ-ಸುರಕ್ಷಿತ ವಾತಾವರಣ ನಿರ್ವಿುಸಿಕೊಂಡ ಕೂಡಲೇ ಯಾವ ಸೋಂಕು ಕೂಡ ಬರುವುದು ಸಾಧ್ಯವೇ ಇಲ್ಲ ಎನ್ನುವುದು ಅತಿವಿಶ್ವಾಸವೆನಿಸಬಹುದು. ಆದರೆ ಹಾಲಿ ಪರಿಸ್ಥಿತಿಯಲ್ಲಿ ಕ್ರಿಕೆಟ್ ಪುನರಾರಂಭಕ್ಕೆ ಇದೊಂದೇ ಭರವಸೆಯ ಹಾದಿ. ಕರೊನಾ ಭೀತಿಯ ನಡುವೆಯೂ ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಈಗಾಗಲೆ ಲಾಕ್​ಡೌನ್ ಸಡಿಲ ಮಾಡಲಾಗುತ್ತಿದ್ದು, ಕರೊನಾ ಜತೆಜತೆಯಲ್ಲೇ ಬದುಕು ನಡೆಸಲಾಗುತ್ತಿದೆ. ಹೀಗಾಗಿ ಕ್ರೀಡೆ-ಕ್ರಿಕೆಟ್ ಕೂಡ ಇದನ್ನೇ ಅನುಸರಿಸಬೇಕಾಗಿದೆ. ಇಲ್ಲದಿದ್ದರೆ ಕರೊನಾ ವೈರಸ್​ಗೆ ಲಸಿಕೆ ಕಂಡುಹಿಡಿಯುವವರೆಗೆ ಕಾಯಬೇಕಷ್ಟೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net