

ನ್ಯೂಯಾರ್ಕ್: ಪ್ರಸಕ್ತ ಟಿ20 ವಿಶ್ವಕಪ್ 2024ರ ಸೂಪರ್ 8 ಹಂತದಲ್ಲಿ ಈಗಾಗಲೇ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಟೀಂ ಇಂಡಿಯಾ ಮುಂದಿನ ಪಂದ್ಯಗಳಲ್ಲಿಯೂ ಗೆದ್ದು, ಫೈನಲ್ ಪ್ರವೇಶಿಸುವ ಕಾತರದಲ್ಲಿದೆ. ಕಳೆದ ಪಂದ್ಯಗಳಲ್ಲಿ ಐರ್ಲೆಂಡ್, ಪಾಕಿಸ್ತಾನ ಮತ್ತು ಯುನೈಟೆಡ್ ಸ್ಟೇಟ್ಸ್ ತಂಡಗಳನ್ನು ಮಣಿಸಿ, ಗೆಲುವಿನ ಕೇಕೆ ಹಾಕಿರುವ ಭಾರತ ಸದ್ಯ ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ಟೀಂ ಇಂಡಿಯಾದ ಪರವಾಗಿ ಮೈದಾನಕ್ಕಿಳಿಯುತ್ತಿರುವ ಸ್ಟಾರ್ ಆಟಗಾರರ ಪೈಕಿ ರಿಷಭ್ ಪಂತ್ ಎಲ್ಲರ ಗಮನಸೆಳೆದಿದ್ದು, ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಮೂಲಕ ದೊಡ್ಡ ಕಮ್ಬ್ಯಾಕ್ ಮಾಡಿರುವ ರಿಷಭ್, 2024ರ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಇದೀಗ ಟಿ20 ವಿಶ್ವಕಪ್ ಪಂದ್ಯಾವಳಿಗಳಲ್ಲಿಯೂ ಆಡುವ ಮೂಲಕ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ.
ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿರುವ ರಿಷಭ್ ಪಂತ್ರನ್ನು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಹಾಗೂ ಸಂಜಯ್ ಮಂಜ್ರೇಕರ್ ಶ್ಲಾಘಿಸಿದ್ದಾರೆ. "ಎಂತಹ ಕಮ್ಬ್ಯಾಕ್ ಮಾಡಿದ್ದಾರೆ ರಿಷಭ್! ಇದು ನಿಜಕ್ಕೂ ಮರೆಯಲಾರದಂತದ್ದು. ಪ್ರತಿಯೊಬ್ಬರಿಗೂ ಈತ ಸ್ಪೂರ್ತಿಯಾಗಿದ್ದಾರೆ. ಪಂತ್ ಒಬ್ಬ ಚಾಂಪಿಯನ್ ಕ್ರಿಕೆಟರ್" ಎಂದು ಪಠಾಣ್ ಗುಣಗಾನ ಮಾಡಿದ್ದಾರೆ,(ಏಜೆನ್ಸೀಸ್).