ಮೊಟ್ಟಮೊದಲ ಟೆಸ್ಟ್​ ಪಂದ್ಯ ಗೆದ್ದು ಇತಿಹಾಸ ಬರೆದ ಐರ್ಲೆಂಡ್; 4ನೇ ಅತಿವೇಗದ ಗೆಲುವಿನ ಸಾಧನೆ ​

ireland web
Published on

ಅಬುಧಾಬಿ: ವೇಗಿಗಳ ಭರ್ಜರಿ ನಿರ್ವಹಣೆಯ ಬಲದಿಂದ ಐರ್ಲೆಂಡ್​ ತಂಡ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯದಲ್ಲಿ ಮೂರೇ ದಿನಗಳಲ್ಲಿ 6 ವಿಕೆಟ್​ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಟೆಸ್ಟ್​ ಮಾನ್ಯತೆ ಪಡೆದ 6 ವರ್ಷಗಳಲ್ಲಿ ಸತತ 7 ಪಂದ್ಯಗಳಲ್ಲಿ ಸೋತ ಬಳಿಕ ಕೊನೆಗೂ ಚೊಚ್ಚಲ ಗೆಲುವಿನ ಸಂಭ್ರಮ ಕಂಡಿದೆ.

ಶುಕ್ರವಾರ ಅಫ್ಘಾನಿಸ್ತಾನ ತಂಡದ 2ನೇ ಇನಿಂಗ್ಸ್​ಅನ್ನು 218 ರನ್​ಗಳಿಗೆ ನಿಯಂತ್ರಿಸಿದ ಐರ್ಲೆಂಡ್​, 111 ರನ್​ ಗುರಿ ಪಡೆಯಿತು. ನಾಯಕ ಆಂಡಿ ಬಲ್ಬಿರ್ನಿ (58*) ಅರ್ಧಶತಕದಾಸರೆಯಲ್ಲಿ ಐರ್ಲೆಂಡ್​ 31.3 ಓವರ್​ಗಳಲ್ಲಿ 4 ವಿಕೆಟ್​ ನಷ್ಟದಲ್ಲಿ ಗೆಲುವಿನ ದಡ ಸೇರಿತು. ಇದರೊಂದಿಗೆ ಟೆಸ್ಟ್​ ಮಾನ್ಯತೆ ಹೊಂದಿರುವ ಎಲ್ಲ 12 ತಂಡಗಳೂ ಗೆಲುವಿನ ರುಚಿ ಕಂಡಂತಾಗಿದೆ.

ಐರ್ಲೆಂಡ್​ ತಾನಾಡಿದ 8ನೇ ಟೆಸ್ಟ್​ನಲ್ಲಿ ಗೆಲುವಿನ ಖಾತೆ ತೆರೆದಿದ್ದು, ಇದು 4ನೇ ಅತಿವೇಗದ ಸಾಧನೆ ಎನಿಸಿದೆ. ಆಸ್ಟ್ರೆಲಿಯಾ ಮೊಟ್ಟಮೊದಲ ಟೆಸ್ಟ್​ನಲ್ಲೇ ಗೆದ್ದಿದ್ದರೆ, ಇಂಗ್ಲೆಂಡ್​, ಪಾಕಿಸ್ತಾನ, ಅಫ್ಘಾನಿಸ್ತಾನ 2ನೇ ಟೆಸ್ಟ್​ನಲ್ಲಿ ಗೆದ್ದಿದ್ದವು. ವೆಸ್ಟ್​ ಇಂಡೀಸ್​ ತನ್ನ 6ನೇ ಟೆಸ್ಟ್​ನಲ್ಲಿ ಗೆದ್ದಿತ್ತು. ಭಾರತ ತಂಡ ಮೊದಲ ಟೆಸ್ಟ್​ ಗೆಲುವಿಗೆ 25ನೇ ಟೆಸ್ಟ್​ ಪಂದ್ಯದವರೆಗೆ ಕಾದಿತ್ತು. ನ್ಯೂಜಿಲೆಂಡ್​ ಮೊದಲ ಗೆಲುವಿಗಾಗಿ ಸರ್ವಾಧಿಕ 45ನೇ ಟೆಸ್ಟ್​ವರೆಗೆ ಕಾದಿತ್ತು.

ಅಫ್ಘಾನಿಸ್ತಾನ: 155 ಮತ್ತು 218, ಐರ್ಲೆಂಡ್​: 263 ಮತ್ತು 4 ವಿಕೆಟ್​ಗೆ 111.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net