ಐಪಿಎಲ್​ ಹೊಸ ತಾರೆ ರೋಬಾಟ್​ ಡಾಗ್​! ಕ್ಯಾಮರಾ ಕೆಲಸದೊಂದಿಗೆ ಕ್ರಿಕೆಟಿಗರ ಮನ ಗೆಲ್ಲುತ್ತಿದೆ ಚಂಪಕ್​!

web dog champak
Published on

ಬೆಂಗಳೂರು: ಐಪಿಎಲ್​ ಯಾವಾಗಲೂ ಹೊಸ ಹೊಸ ತಾರೆಯರ ಉದಯ ಸ್ಥಾನ. ಈ ಸಲವೂ ಐಪಿಎಲ್​ನಲ್ಲಿ ಹೊಸ ತಾರೆಯೊಂದು ಉದಯಿಸಿದೆ. ಇದು ಈಗಾಗಲೆ ಟೂರ್ನಿಯಲ್ಲಿ ಆಡುತ್ತಿರುವ ಎಲ್ಲ ಆಟಗಾರರ ಗಮನಸೆಳೆದಿದೆ ಮತ್ತು ತಂಡಬೇಧವಿಲ್ಲದೆ ಎಲ್ಲರ ಮನಗೆದ್ದಿದೆ. ಅದುವೇ ರೋಬಾಟಿಕ್​ ಕ್ಯಾಮರಾ ಡಾಗ್​. ಟೂರ್ನಿಯ ನೇರಪ್ರಸಾರ ವಾಹಿನಿಗೆ ಮೈದಾನದಲ್ಲಿ ಆಟಗಾರರ ಚಲನೆಯ ಚಿತ್ರಣವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸೆರೆ ಹಿಡಿಯುವಲ್ಲಿ ನೆರವಾಗುತ್ತಿರುವ ಈ ರೋಬಾಟ್​, ಶ್ವಾನದಂತೆಯೇ 4 ಕಾಲುಗಳಲ್ಲಿ ಚಲಿಸುವ ವಿಶೇಷತೆ ಮತ್ತು ತನ್ನ ತುಂಟತನಗಳಿಂದ ಎಲ್ಲರನ್ನು ಆಕರ್ಷಿಸುತ್ತಿದೆ.

ಈ ರೋಬಾಟಿಕ್​ ಡಾಗ್​ ನಡೆದಾಡಬಲ್ಲುದು. ಓಡಬಲ್ಲುದು ಮತ್ತು ಹಸ್ತಲಾವ ನೀಡಿ ಶುಭಾಶಯ ತಿಳಿಸಬಲ್ಲುದು. ಸಾಕು ಪ್ರಾಣಿಯಂತೆ ಆತ್ಮೀಯತೆಯಿಂದ ವರ್ತಿಸುವುದು. ಜತೆಗೆ ಮೈದಾನದೆಲ್ಲೆಡೆ ಆಟಗಾರರ ಚಲನೆ ಮತ್ತು ಆಟಕ್ಕೆ ಅಡ್ಡಿಯಾಗದಂತೆ ಓಡಾಡುತ್ತ ಅಪೂರ್ವವಾದ ದೃಶ್ಯಗಳನ್ನು ಸೆರೆಹಿಡಿಯಲ್ಲುದು. ಏಪ್ರಿಲ್​ 13ರಂದು ಮುಂಬೈ ಇಂಡಿಯನ್ಸ್​-ಡೆಲ್ಲಿ ಕ್ಯಾಪಿಟಲ್ಸ್​ ಪಂದ್ಯದೊಂದಿಗೆ ಇದು ಐಪಿಎಲ್​ಗೆ ಪದಾರ್ಪಣೆ ಮಾಡಿತ್ತು. ನ್ಯೂಜಿಲೆಂಡ್​ ಮೂಲದ ವೀಕ್ಷಕವಿವರಣೆಕಾರ ಡ್ಯಾನಿ ಮೋರಿಸನ್​ ಇದನ್ನು ಐಪಿಎಲ್​ಗೆ ಪರಿಚಯಿಸಿದ್ದರು.

ಈಗಾಗಲೆ ಟೂರ್ನಿಯ ಅವಿಭಾಜ್ಯ ಅಂಗದಂತೆ ಪಂದ್ಯಗಳ ವೇಳೆ ಕಾಣಿಸಿಕೊಂಡು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದೆ.

ಎಂಎಸ್​ ಧೋನಿ, ಹಾರ್ದಿಕ್​ ಪಾಂಡ್ಯ, ಅಕ್ಷರ್​ ಪಟೇಲ್​ ಸಹಿತ ಬಹುತೇಕ ಎಲ್ಲ ಸ್ಟಾರ್​ ಆಟಗಾರರೂ ಈ ರೋಬಾಟಿಕ್​ ಕ್ಯಾಮರಾದ ಶ್ವಾನದಂಥ ಚಲನೆ, ವರ್ತನೆಗಳಿಗೆ ಫಿದಾ ಆಗಿದ್ದಾರೆ. ಧೋನಿ ಅಭ್ಯಾಸದ ವೇಳೆ ಇದರೊಂದಿಗೆ ತುಂಟಾಟವಾಡುತ್ತ ನೋಡುಗರನ್ನೂ ರಂಜಿಸಿದ್ದಾರೆ.

ರೋಬೋ ಡಾಗ್​ ಅನ್ನು ಅಮೆರಿಕದ ಮ್ಯಾಸಚೂಸೆಟ್ಸ್​ ಮೂಲದ ರೋಬಾಟಿಕ್ಸ್​ ಕಂಪನಿ ಬೋಸ್ಟನ್​ ಡೈನಾಮಿಕ್ಸ್​ ಮೊದಲಿಗೆ ವಿನ್ಯಾಸಗೊಳಿಸಿತ್ತು. ಪ್ರಮುಖವಾಗಿ ಮಾನವರಿಗೆ ಅಪಾಯಕಾರಿ ಎನಿಸಿದ ಪ್ರದೇಶಗಳಿಗೆ ಹೋಗಿ ಪರಿಶೀಲನೆ ನಡೆಸಲು ಮಿಲಿಟರಿಗೆ ನೆರವಾಗುವುದು ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಇದನ್ನು ರೂಪಿಸಲಾಗಿತ್ತು.

ಚಂಪಕ್​ ಎಂದು ನಾಮಕರಣ

ರೋಬಾಟಿಕ್​ ಕ್ಯಾಮರಾ ಡಾಗ್​ ಈಗಾಗಲೆ ಐಪಿಎಲ್​ಗೆ ಹೊಸ ಸದಸ್ಯನಾಗಿ ಸೇರ್ಪಡೆಯಾಗಿರುವ ನಡುವೆ ಅದಕ್ಕೊಂದು ವಿಶೇಷವಾದ ಹೆಸರಿಡಲು ಕ್ರಿಕೆಟ್​ ಪ್ರೇಮಿಗಳಿಗೆ ವಿಶೇಷ ಅವಕಾಶ ಕಲ್ಪಿಸಲಾಗಿತ್ತು. ರೋಬಾಟಿಕ್​ ಡಾಗ್​ಗೆ ಅತ್ಯುತ್ತಮವಾದ ಹೆಸರನ್ನು ಸೂಚಿಸಿ ಎಂದು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳನ್ನು ಕೇಳಿಕೊಂಡಿತ್ತು. ಅದರನ್ವಯ ಮುಂಬೈ-ಸಿಎಸ್​ಕೆ ನಡುವಿನ ಪಂದ್ಯದ ವೇಳೆ "ಚಂಪಕ್​' ಎಂಬ ಹೆಸರನ್ನು ಅಂತಿಮಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net