ಡ್ರೆಸಿಂಗ್​ ರೂಮ್​ನಲ್ಲಿ ಇ-ಸಿಗರೇಟ್ ಸೇದಿದ ರಾಜಸ್ಥಾನ್ ನಾಯಕ: ಟೂರ್ನಿಯಿಂದ ರಿಯಾನ್​ ಪರಾಗ್​ ಹೊರಕ್ಕೆ​? Riyan Parag Viral Video

ಡ್ರೆಸಿಂಗ್​ ರೂಮ್​ನಲ್ಲಿ ವೇಪ್​ ಸೇದಿದ ರಿಯಾನ್​ ಪರಾಗ್​
ಡ್ರೆಸಿಂಗ್​ ರೂಮ್​ನಲ್ಲಿ ವೇಪ್​ ಸೇದಿದ ರಿಯಾನ್​ ಪರಾಗ್​
Published on

ಪ್ರಮುಖ ಮುಖ್ಯಾಂಶಗಳು

  • ರಾಜಸ್ಥಾನ್​​ ರಾಯಲ್ಸ್​ ನಾಯಕನಿಗೆ ಸಂಕಷ್ಟ
  • ಡ್ರೆಸಿಂಗ್​ ರೂಮ್​ನಲ್ಲಿ ವೇಪ್​ ಸೇದಿದ ರಿಯಾನ್​ ಪರಾಗ್​
  • ಭಾರತದಲ್ಲಿ ನಿಷೇಧವಾಗಿರುವ ಇ-ಸಿಗರೇಟ್​
  • ಪಂಜಾಬ್​ ವಿರುದ್ಧ ರಾಜಸ್ಥಾನ್​ಗೆ ಜಯ
ಪಂಜಾಬ್​: ನಿನ್ನೆ (ಮಂಗಳವಾರ,ಏ 28) ಪಂಜಾಬ್​ನ ಪಿಸಿಎ ಕ್ರೀಡಾಂಗಣದಲ್ಲಿ ನಡೆದ 19 ನೇ ಸಾಲಿನ ಐಪಿಎಲ್​ನ 40 ನೇ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡ, ಪಂಜಾಬ್​ ಕಿಂಗ್ಸ್​ ತಂಡವನ್ನು ಸೋಲಿಸುವ ಮೂಲಕ ಪಂಜಾಬ್​ನ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಿತು.
ಆದರೆ ಇದೇ ಪಂದ್ಯಾವಳಿಯ ಸಂದರ್ಭದಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡದ ನಾಯಕ ರಿಯಾನ್​ ಪರಾಗ್​ ಡ್ರೆಸಿಂಗ್​ ರೂಮ್​ನಲ್ಲಿ ವೇಪ್​ (ಇಲೆಕ್ಟ್ರಾನಿಕ್​ ಸಿಗರೇಟ್​) ಸೇದುತ್ತಿರುವ ದೃಶ್ಯವೊಂದು ಕ್ಯಾಮರಾದ ಕಣ್ಣಿನಲ್ಲಿ ಸೆರೆಯಾಗಿದ್ದು, ಈಗ ಈ ವಿಡಿಯೋ (Riyan Parag Viral Video) ಸೋಷಿಯಲ್​ ಮೀಡಿಯಾನಲ್ಲಿ ದೊಡ್ಡ ಚರ್ಚೆಗೆ ವೇದಿಕೆಯಾಗಿದೆ.

ವಿಡಿಯೋನಲ್ಲೇನಿದೆ?

ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ರಾಜಸ್ಥಾನ ತಂಡ ಬ್ಯಾಟಿಂಗ್​ ಮಾಡುತ್ತಿದ್ದ ಸಂದರ್ಭದಲ್ಲಿ ಭಾರತದಲ್ಲಿ ಬ್ಯಾನ್​ ಮಾಡಲಾಗಿರುವ ವೇಪ್​ ಅನ್ನು ಸೇದುತ್ತಾ ಹೊಗೆ ಬಿಡುವುದನ್ನು ನೋಡಬಹುದಾಗಿದೆ.
ಭಾರತದಲ್ಲಿ ಇ-ಸಿಗರೇಟ್​ ಮೇಲೆ ನಿರ್ಬಂಧ!
ಭಾರತ ಸರ್ಕಾರವು 2019ರಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (PECA - Prohibition of Electronic Cigarettes Act) ಅಡಿಯಲ್ಲಿ ಇ-ಸಿಗರೇಟ್ ಮತ್ತು ವೇಪ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಈ ಕಾಯ್ದೆಯ ಪ್ರಕಾರ, ಇ-ಸಿಗರೇಟ್ ಮತ್ತು ವೇಪ್‌ಗಳ ಉತ್ಪಾದನೆ ಮತ್ತು ತಯಾರಿಕೆ, ಆಮದು ಮತ್ತು ರಫ್ತು, ಸಂಗ್ರಹಣೆ ಮತ್ತು ಮಾರಾಟ ಅಂತೆಯೇ ಯಾವುದೇ ರೀತಿಯ ಜಾಹೀರಾತನ್ನು ಮಾಡುವಂತಿಲ್ಲ ಎಂಬ ನಿಯಮವಿದೆ.
ಮೊದಲ ಬಾರಿಗೆ ಈ ನಿಯಮಗಳನ್ನು ಮೀರಿದರೆ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂಪಾಯಿವರೆಗೆ ದಂಡ, ಎರಡಕ್ಕಿಂತ ಹೆಚ್ಚು ಬಾರಿ ಉಲ್ಲಂಘಿಸಿದರೆ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಹಾಗೆಯೇ ಇ-ಸಿಗರೇಟ್ ಮತ್ತು ವೇಪ್‌ಗಳ ಸಂಗ್ರಹಣೆಯನ್ನು ಮಾಡಿದಲ್ಲಿ, 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 50,000 ರೂಪಾಯಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. 

ಮುಂದೇನು?

ಈ ವರ್ಷದ ಐಪಿಎಲ್​ನಲ್ಲಿ ರಾಜಸ್ಥಾನ ತಂಡದ ನಾಯಕನಾಗಿರುವ ರಿಯಾನ್​ ಪರಾಗ್​ ಹೇಳಿಕೊಳ್ಳುವಂತ ಆಟವನ್ನೇನು ಆಡುತ್ತಿಲ್ಲ. ನಿನ್ನೆ ಪಂಜಾಬ್​ ವಿರುದ್ಧ ರಾಜಸ್ಥಾನ ಗೆದಿದ್ದರೂ ತಂಡದ ನಾಯಕನಾಗಿ ಪರಾಗ್​ 16 ಎಸೆತಗಳಲ್ಲಿ ಕೇವಲ 29 ರನ್​ ಮಾತ್ರ ಗಳಿಸಿದ್ದರು.
ಹಾಗೆಯೇ, ಡ್ರೆಸಿಂಗ್​ ರೂಮ್​ನಲ್ಲಿ ತಂಬಾಕು ಪದಾರ್ಥಗಳ ಸೇವನೆಯನ್ನು ಕೂಡ ನಿಷೇಧಿಸಲಾಗಿದೆ ಮತ್ತು ಭಾರತದಲ್ಲಿ ಬ್ಯಾನ್​ ಮಾಡಲಾಗಿರುವ ವೇಪ್​ನ್ನು ಸೇದಿರುವ ಕಾರಣ ಪರಾಗ್​ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಬಹುದು.

ರಾಜಸ್ಥಾನ Vs ಪಂಜಾಬ್​

ನಿನ್ನೆ (ಏ.28) ಪಂಜಾಬ್​ನ ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ ಪಂಜಾಬ್​ ತಂಡದ ಪರವಾಗಿ ಓಪನರ್​ ಪ್ರತ್​ಸಿಮ್ರನ್​ ಸಿಂಗ್​ 44 ಎಸೆತಗಳಲ್ಲಿ 59, ಕೂಪರ್​ ಕೊನ್ಲಿ 14 ಎಸೆತಗಳಲ್ಲಿ 30, ನಾಯಕ ಶ್ರೇಯಸ್​ ಅಯ್ಯರ್​ 27 ಎಸೆತಗಲ್ಲಿ 30 ಹಾಗೂ ಮಾರ್ಕಸ್ ಸ್ಟೋಯಿನಿಸ್ 22 ಎಸೆತಗಳಲ್ಲಿ 62 ರನ್​ ಗಳಿಸುವ ಮೂಲಕ ನಿಯಮಿತ ಓವರ್​ಗಳಲ್ಲಿ 222 ರನ್​ ಗಳಿಸಿದರು.
223 ರನ್​ ಗುರಿ ಬೆನ್ನತ್ತಿದ್ದ ರಾಯಸ್ಥಾನ್​ ತಂಡದ ಪರ ಓಪನರ್​ಗಳಾದ ಯಶಸ್ವಿ ಜೈಸ್ವಾಲ್​ 27 ಎಸೆತಗಳಲ್ಲಿ 51 ಹಾಗೂ ವೈಭವ್​ ಸೂರ್ಯವಂಶಿ 16 ಎಸೆಗಳಲ್ಲಿ 44 ರನ್​ಗಳಿಸುವ ಮೂಲಕ ಉತ್ತಮ ಓಪನಿಂಗ್​ ನೀಡಿದರು. ನಂತರ ಡೊನಾವನ್​ ಫರೇರಾ 26 ಎಸೆತಗಳಲ್ಲಿ 52 ಹಾಗೂ ಶುಭಂ ದುಬೆ 12 ಎಸೆತಗಳಲ್ಲಿ 31 ರನ್​ ಗಳಿಸುವ ಮೂಲಕ 19.2 ಓವರ್​ಗಳಲ್ಲಿ ಗುರಿಯನ್ನು ತಲುಪಿದರು. ಈ ಮೂಲಕ ಐಪಿಎಲ್​ನಲ್ಲಿ ಒಂದೇ ಒಂದು ಸೋಲನ್ನು ಕಾಣದೆ ಅಶ್ವಮೇಧದ ಕುದುರೆಯಂತೆ ಓಡುತ್ತಿದ್ದ ಪಂಜಾಬ್​ ಕಿಂಗ್ಸ್​ನ ಓಟಕ್ಕೆ ರಾಜಸ್ಥಾನ್​ ತಂಡ ಬ್ರೇಕ್​ ಹಾಕಿತು, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net