ನೀವಿಲ್ಲದೆ ಐಪಿಎಲ್ ಮೊದಲಿನಂತಿರಲ್ಲ, ಇದೊಂದು ಯುಗದ ಅಂತ್ಯ: ಧೋನಿ ನಿವೃತ್ತಿಗೆ ಭಾವುಕರಾದ ದಿಗ್ಗಜರು ಪಟ್ಟಿ ಹೀಗಿದೆ! | MS Dhoni Retirement

ಧೋನಿ ನಿವೃತ್ತಿಗೆ ಭಾವುಕರಾದ ದಿಗ್ಗಜರು ಪಟ್ಟಿ ಹೀಗಿದೆ!
ಧೋನಿ ನಿವೃತ್ತಿಗೆ ಭಾವುಕರಾದ ದಿಗ್ಗಜರು ಪಟ್ಟಿ ಹೀಗಿದೆ!
Published on: 

MS Dhoni Retirement: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಧಾರಸ್ತಂಭದಂತಿದ್ದ ಮಹೇಂದ್ರ ಸಿಂಗ್ ಧೋನಿ ಅವರು ಆಟಗಾರನಾಗಿ ಐಪಿಎಲ್‌ಗೆ ವಿದಾಯ ಹೇಳಿರುವುದು ಕ್ರಿಕೆಟ್ ಲೋಕವನ್ನು ಭಾವುಕಗೊಳಿಸಿದೆ. ಧೋನಿ ಅವರ ಈ ನಿರ್ಧಾರ ಹೊರಬಿದ್ದ ಬೆನ್ನಲ್ಲೇ, ಮಾಜಿ ಹಾಗೂ ಹಾಲಿ ಕ್ರಿಕೆಟಿಗರು, ಕ್ರಿಕೆಟ್ ವಿಶ್ಲೇಷಕರು ಸಾಮಾಜಿಕ ಜಾಲತಾಣಗಳ ಮೂಲಕ ತಲಾ ಜೊತೆಗಿನ ತಮ್ಮ ನೆನಪುಗಳನ್ನು ಮೆಲುಕು ಹಾಕುತ್ತಾ, ಅವರ ಮುಂದಿನ ಮೆಂಟರ್ ಪಯಣಕ್ಕೆ ಶುಭ ಹಾರೈಸಿದ್ದಾರೆ.

ಒಂದು ಯುಗದ ಅಂತ್ಯ: ಹರ್ಷ ಭೋಗ್ಲೆ ಮತ್ತು ಆಕಾಶ್ ಚೋಪ್ರಾ ಭಾವುಕ ನುಡಿ

ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಕಾರ ಹರ್ಷ ಭೋಗ್ಲೆ ಅವರು ಧೋನಿ ನಿವೃತ್ತಿಯನ್ನು ನಿಜವಾದ ಅರ್ಥದಲ್ಲಿ ಒಂದು ಯುಗದ ಅಂತ್ಯ ಎಂದು ಬಣ್ಣಿಸಿದ್ದಾರೆ. ಎಂಎಸ್‌ಡಿ ಮತ್ತು ಸಿಎಸ್‌ಕೆ ಒಂದಕ್ಕೊಂದು ಪೂರಕವಾಗಿದ್ದವು. ಐಪಿಎಲ್ ಪ್ರತಿ ವರ್ಷ ದೊಡ್ಡದಾಗಿ ಬೆಳೆಯುತ್ತಿರಬಹುದು, ಆದರೆ ಇಂದು ಅದು ದುಃಖಕರವಾಗಿದೆ ಮತ್ತು ಚಿಕ್ಕದಾದಂತೆ ಭಾಸವಾಗುತ್ತಿದೆ. ಈ ದಿನ ಬರಲೇಬೇಕಿತ್ತು, ಆದರೆ ಅದು ಅಭಿಮಾನಿಗಳ ಭಾವನೆಗಳನ್ನು ಕಡಿಮೆ ಮಾಡುವುದಿಲ್ಲ. ಚೆನ್ನೈಗೆ ಹೋದಾಗ ಅಭಿಮಾನಿಗಳು ಮತ್ತು ಅವರ ನಾಯಕನ ನಡುವಿನ ಆ ಅವಿನಾಭಾವ ಸಂಬಂಧವನ್ನು ನೋಡುವುದೇ ಐಪಿಎಲ್‌ನ ಪ್ರಮುಖ ಆಕರ್ಷಣೆಯಾಗಿತ್ತು ಎಂದು ಭೋಗ್ಲೆ ಭಾವುಕರಾಗಿ ಬರೆದುಕೊಂಡಿದ್ದಾರೆ.

Also Read
ಒಂದೇ ಮಾತಿನಲ್ಲಿ 19 ವರ್ಷಗಳ ಐಪಿಎಲ್ ಪಯಣಕ್ಕೆ ತೆರೆ ಎಳೆದ ಧೋನಿ: ಸಿಎಸ್‌ಕೆಗೆ ನಿವೃತ್ತಿ ಸುದ್ದಿ ತಿಳಿಸಿದ ಆ ಭಾವುಕ ಕ್ಷಣದ ಬಗ್ಗೆ ಮಾಲೀಕರು ಹೇಳಿದ್ದೇನು? | MS Dhoni
ಧೋನಿ ನಿವೃತ್ತಿಗೆ ಭಾವುಕರಾದ ದಿಗ್ಗಜರು ಪಟ್ಟಿ ಹೀಗಿದೆ!

ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಪ್ರತಿಕ್ರಿಯಿಸಿದ್ದು, ಒಂದು ಯುಗದ ಅಂತ್ಯ. ಮಾಹಿ ಇಲ್ಲದೆ ಐಪಿಎಲ್ ಮೊದಲಿನಂತಿರಲು ಸಾಧ್ಯವೇ ಇಲ್ಲ ಎಂದು ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.

ಕ್ಯಾಪ್ ನೀಡಿದ್ದನ್ನು ಎಂದಿಗೂ ಮರೆಯಲಾರೆ: ಯುಜುವೇಂದ್ರ ಚಾಹಲ್

ಧೋನಿ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ನೀವು ನನಗೆ ಟೀಮ್ ಇಂಡಿಯಾದ ಚೊಚ್ಚಲ ಕ್ಯಾಪ್ ನೀಡಿದ ಆ ಕ್ಷಣವನ್ನು ನಾನು ಜೀವನಪರ್ಯಂತ ಸ್ಮರಿಸುತ್ತೇನೆ. ನಿಮ್ಮ ಮಾರ್ಗದರ್ಶನ ಮತ್ತು ಅಚಲ ನಂಬಿಕೆ ನನ್ನ ವೃತ್ತಿಜೀವನವನ್ನು ರೂಪಿಸುವಲ್ಲಿ ಅಮೂಲ್ಯ ಪಾತ್ರ ವಹಿಸಿದೆ. ಧನ್ಯವಾದಗಳು ಮಾಹಿ ಭಾಯ್. ನಿಮ್ಮ ಪರಂಪರೆ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ. ಸಿಎಸ್‌ಕೆ ಜೊತೆಗಿನ ಈ ಹೊಸ ಅಧ್ಯಾಯಕ್ಕೆ ಶುಭಾಶಯಗಳು ಎಂದು ಚಾಹಲ್ ತಿಳಿಸಿದ್ದಾರೆ.

ಸಹ ಆಟಗಾರರಾದ ಧವನ್, ಪಠಾಣ್ ಮತ್ತು ಬದ್ರಿನಾಥ್ ಮೆಚ್ಚುಗೆ

ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಟ್ವೀಟ್ ಮಾಡಿ, ಎಂ.ಎಸ್. ಧೋನಿ ಭಾಯ್, ಅದೊಂದು ಅದ್ಭುತ ಪಯಣ, ನಿಮ್ಮ ನಾಯಕತ್ವ, ಶಾಂತ ಸ್ವಭಾವ ಮತ್ತು ಆಟದ ಮೇಲಿನ ಪ್ರಭಾವ ಹಲವು ಪೀಳಿಗೆಗಳಿಗೆ ಸ್ಫೂರ್ತಿ ನೀಡಿದೆ. ಆಟಗಾರನಾಗಿ ನೀವು ಹಿಂದೆ ಸರಿದಿರಬಹುದು, ಆದರೆ ಕ್ರಿಕೆಟ್ ಮೇಲಿನ ನಿಮ್ಮ ಪ್ರಭಾವ ಮುಂದುವರಿಯಲಿದೆ. ಸಿಎಸ್‌ಕೆ ಜೊತೆಗಿನ ಹೊಸ ಜವಾಬ್ದಾರಿಗೆ ಶುಭವಾಗಲಿ ಎಂದಿದ್ದಾರೆ.

ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಪ್ರತಿಕ್ರಿಯಿಸಿ, ಒಬ್ಬ ಶ್ರೇಷ್ಠ ನಾಯಕ, ಫಿನಿಶರ್, ಒತ್ತಡದಲ್ಲೂ ಶಾಂತವಾಗಿರುವ ವ್ಯಕ್ತಿತ್ವ ಮತ್ತು ಭಾರತೀಯ ಕ್ರಿಕೆಟ್‌ನ ಅತ್ಯಂತ ಪ್ರಭಾವಶಾಲಿ ವ್ಯಕ್ತಿ. ಧೋನಿ, ನೀವು ನಿರ್ಮಿಸಿರುವ ಪರಂಪರೆಯನ್ನು ಸರಿಗಟ್ಟುವುದು ಕಷ್ಟ. ನಿಮ್ಮ ಅಪಾರ ಅನುಭವ ಮತ್ತು ಜ್ಞಾನ ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೆ ದಾರಿದೀಪವಾಗಲಿದೆ ಎಂದು ಶ್ಲಾಘಿಸಿದ್ದಾರೆ.

ಸಿಎಸ್‌ಕೆ ತಂಡದ ಮಾಜಿ ಆಟಗಾರ ಎಸ್. ಬದ್ರಿನಾಥ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದು, ಹಳದಿ ಜೆರ್ಸಿಯಲ್ಲಿ ನಿಮ್ಮ ಶಾಂತ ನಾಯಕತ್ವ, ವಿಕೆಟ್ ಹಿಂದಿನ ಮ್ಯಾಜಿಕ್, ಮರೆಯಲಾಗದ ಫಿನಿಶಿಂಗ್ ಮತ್ತು ಚೆನ್ನೈ ತಂಡವನ್ನು ಪ್ರತಿ ವರ್ಷ ಫೈನಲ್‌ಗೆ ಕೊಂಡೊಯ್ದ ಕ್ಷಣಗಳು ಅತ್ಯಂತ ವಿಶೇಷ. ನೀವು ಸಿಎಸ್​ಕೆಗೆ ಕೇವಲ ಟ್ರೋಫಿಗಳನ್ನು ಮಾತ್ರ ನೀಡಿಲ್ಲ, ನಾವೆಂದಿಗೂ ಮರೆಯಲಾಗದ ಒಂದು ಯುಗವನ್ನೇ ನೀಡಿದ್ದೀರಿ. ಮಹೇಂದ್ರ ಸಿಂಗ್ ಧೋನಿ ಎಂದೆಂದಿಗೂ ಚೆನ್ನೈ ಸೂಪರ್ ಕಿಂಗ್ಸ್‌ನ ಹೃದಯಬಡಿತ. ಎಂದೆಂದಿಗೂ ನಮ್ಮ ಕ್ಯಾಪ್ಟನ್, ನಮ್ಮ ತಲಾ ಎಂದು ಭಾವುಕ ಸಾಲುಗಳನ್ನು ಬರೆದಿದ್ದಾರೆ(ಏಜೆನ್ಸೀಸ್​).