ಒಂದೇ ಮಾತಿನಲ್ಲಿ 19 ವರ್ಷಗಳ ಐಪಿಎಲ್ ಪಯಣಕ್ಕೆ ತೆರೆ ಎಳೆದ ಧೋನಿ: ಸಿಎಸ್‌ಕೆಗೆ ನಿವೃತ್ತಿ ಸುದ್ದಿ ತಿಳಿಸಿದ ಆ ಭಾವುಕ ಕ್ಷಣದ ಬಗ್ಗೆ ಮಾಲೀಕರು ಹೇಳಿದ್ದೇನು? | MS Dhoni

ಸಿಎಸ್‌ಕೆಗೆ ನಿವೃತ್ತಿ ಸುದ್ದಿ ತಿಳಿಸಿದ ಆ ಭಾವುಕ ಕ್ಷಣದ ಬಗ್ಗೆ ಮಾಲೀಕರು ಹೇಳಿದ್ದೇನು?
ಸಿಎಸ್‌ಕೆಗೆ ನಿವೃತ್ತಿ ಸುದ್ದಿ ತಿಳಿಸಿದ ಆ ಭಾವುಕ ಕ್ಷಣದ ಬಗ್ಗೆ ಮಾಲೀಕರು ಹೇಳಿದ್ದೇನು?
Published on: 

ಚೆನ್ನೈ: ಭಾರತೀಯ ಕ್ರಿಕೆಟ್ ಲೋಕದ ದಿಗ್ಗಜ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಧಾರಸ್ತಂಭವಾಗಿದ್ದ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ಐಪಿಎಲ್‌ಗೆ ಆಟಗಾರನಾಗಿ ನಿವೃತ್ತಿ ಘೋಷಿಸುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ದೊಡ್ಡ ಶಾಕ್​ ನೀಡಿದ್ದಾರೆ. ಆದರೆ, 2027ರ ಐಪಿಎಲ್ ಆವೃತ್ತಿಯಲ್ಲೂ ಧೋನಿ ಸಿಎಸ್‌ಕೆ ತಂಡದೊಂದಿಗಿನ ತಮ್ಮ ನಂಟನ್ನು ಮುಂದುವರಿಸಲಿದ್ದು, ಮೆಂಟರ್ ಆಗಿ ಸೆಕೆಂಡ್​ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಈ ವಿಷಯವಾಗಿ ಸದ್ಯ ಮಾತನಾಡಿರುವ ಸಿಎಸ್‌ಕೆ ಮಾಲೀಕರಾದ ರೂಪಾ ಗುರುನಾಥ್, ಕಳೆದ ಶನಿವಾರ ನಡೆದ ವಿಡಿಯೋ ಕಾಲ್ ಸಭೆಯಲ್ಲಿ ಧೋನಿ ತಮ್ಮ ನಿವೃತ್ತಿಯ ನಿರ್ಧಾರವನ್ನು ಅತ್ಯಂತ ಸರಳವಾಗಿ ತಿಳಿಸಿದ ಬಗೆಯನ್ನು ಹಂಚಿಕೊಂಡಿದ್ದಾರೆ.

ವಿಡಿಯೋ ಕಾಲ್‌ನಲ್ಲಿ ಧೋನಿ ಆಡಿದ ಆ ಒಂದು ಮಾತು!

2027ರ ಐಪಿಎಲ್ ಹರಾಜು ಮತ್ತು ತಂಡದಿಂದ ಬಿಡುಗಡೆಗೊಳಿಸಬೇಕಾದ ಆಟಗಾರರ ಪಟ್ಟಿಯ ಕುರಿತು ಶನಿವಾರ ಸಿಎಸ್‌ಕೆ ಆಡಳಿತ ಮಂಡಳಿ ವಿಡಿಯೋ ಕಾಲ್ ಮೂಲಕ ಸುದೀರ್ಘ ಚರ್ಚೆ ನಡೆಸುತ್ತಿತ್ತು. ಸಭೆಯ ಅಂತ್ಯದಲ್ಲಿ ಸಿಇಒ ಕಾಶಿ ವಿಶ್ವನಾಥನ್ ಅವರು ಬಿಡುಗಡೆ ಮಾಡಬೇಕಾದ ಆಟಗಾರರ ಪಟ್ಟಿಯನ್ನು ಓದುತ್ತಿದ್ದಾಗ, ಮಧ್ಯಪ್ರವೇಶಿಸಿದ ಧೋನಿ ಅತ್ಯಂತ ಶಾಂತವಾಗಿ, ಬಹುಶಃ ಆ ಪಟ್ಟಿಗೆ ನನ್ನ ಹೆಸರನ್ನೂ ಸೇರಿಸಿಕೊಳ್ಳಿ ಎಂದು ಭಾವುಕರಾಗಿ ನುಡಿದರು.

ಧೋನಿ ಅವರ ಈ ಮಾತು ಕೇಳಿ ಸಭೆಯಲ್ಲಿದ್ದವರೆಲ್ಲರೂ ಒಂದು ಕ್ಷಣ ದಿಗ್ಭ್ರಮೆಗೊಂಡರು. ಅಚ್ಚರಿಯ ಸಂಗತಿಯೆಂದರೆ, ಧೋನಿ ಈ ಮಾತು ಹೇಳಿದ ಮರುಕ್ಷಣವೇ ವಿಡಿಯೋ ಕಾಲ್ ತಾಂತ್ರಿಕ ಕಾರಣದಿಂದ ಕಡಿತಗೊಂಡಿತು. ನಾನು ತಕ್ಷಣವೇ ಮತ್ತೆ ಕರೆ ಮಾಡಿ, ನೋಡಿ, ಮುಂದಿನ ಸೀಸನ್‌ನಲ್ಲಿ ನೀವು ಆಡುವುದಿಲ್ಲ ಎಂಬ ಸುದ್ದಿಯನ್ನು ಇಂಟರ್‌ನೆಟ್‌ಗೂ ತಡೆದುಕೊಳ್ಳಲು ಆಗಲಿಲ್ಲ ಎಂದು ತಮಾಷೆ ಮಾಡಿದೆ ಎಂದು ರೂಪಾ ಗುರುನಾಥ್ ಆ ಭಾವುಕ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ನೂರಕ್ಕೆ ಇನ್ನೂರು ಪ್ರತಿಶತ ನೀಡಲು ಸಾಧ್ಯವಾಗದಿದ್ದರೆ ಆಡಲ್ಲ: ರೂಪಾ

ಧೋನಿ ಅವರ ಈ ನಿರ್ಧಾರವನ್ನು ಅರಗಿಸಿಕೊಳ್ಳುವುದು ಫ್ರಾಂಚೈಸಿ ಮತ್ತು ಅಭಿಮಾನಿಗಳಿಗೆ ಅತ್ಯಂತ ಕಷ್ಟಕರವಾಗಿದೆ ಎಂದಿರುವ ರೂಪಾ, ಕೆಲವು ತಿಂಗಳ ಹಿಂದೆ ಭೇಟಿಯಾದಾಗಲೇ ಧೋನಿ ಮುಂದಿನ ಆವೃತ್ತಿಯಲ್ಲಿ ಆಡುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಧೋನಿ ತಂಡಕ್ಕೆ ಶೇ. 200ರಷ್ಟು ಶ್ರಮ ನೀಡಲು ಸಾಧ್ಯವಾಗದಿದ್ದರೆ ಮೈದಾನಕ್ಕೆ ಇಳಿಯುವ ವ್ಯಕ್ತಿಯಲ್ಲ. ತಂಡಕ್ಕೆ ತಾವು ಹೊರೆಯಾಗಬಾರದು ಎಂಬುದು ಅವರ ಸ್ಪಷ್ಟ ನಿಲುವು. ಹಳದಿ ಜೆರ್ಸಿಯಲ್ಲಿ ಅವರ ಮಿಂಚಿನ ಸ್ಟಂಪಿಂಗ್, ಹೆಲಿಕಾಪ್ಟರ್ ಶಾಟ್ ಮತ್ತು ಬೆರಳಿನ ಸನ್ನೆಯಲ್ಲೇ ಫೀಲ್ಡಿಂಗ್ ಬದಲಿಸಿ ಪಂದ್ಯದ ಗತಿಯನ್ನೇ ಬದಲಿಸುವ ಆ ದೃಶ್ಯಗಳನ್ನು ಇನ್ನು ಮೈದಾನದಲ್ಲಿ ನೋಡಲು ಸಾಧ್ಯವಿಲ್ಲ ಎಂಬುದು ನನಗೆ ತುಂಬಾ ಕಾಡುತ್ತದೆ ಎಂದು ರೂಪಾ ಭಾವುಕರಾಗಿದ್ದಾರೆ.

ಆಟಗಾರನಾಗಿ ನಿವೃತ್ತಿಯಾದರೂ, ಮುಂದಿನ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಧೋನಿ ಮೆಂಟರ್ ಆಗಿ ಮಾರ್ಗದರ್ಶನ ನೀಡಲಿದ್ದಾರೆ. ಧೋನಿ ಮೊದಲ ದಿನದಿಂದಲೂ ನಮ್ಮೊಂದಿಗಿದ್ದಾರೆ ಮತ್ತು ಎಂದೆಂದಿಗೂ ಸೂಪರ್ ಕಿಂಗ್ ಆಗಿಯೇ ಇರುತ್ತಾರೆ. ಅವರ ಅನುಭವ ನಮ್ಮ ಯುವ ತಂಡಕ್ಕೆ ದಾರಿದೀಪವಾಗಲಿದೆ ಎಂದು ರೂಪಾ ತಿಳಿಸಿದ್ದಾರೆ.

Also Read
ಐಪಿಎಲ್​ಗೂ ಮಹೇಂದ್ರ ಸಿಂಗ್ ಧೋನಿ ವಿದಾಯ: CSK ತಂಡದ ಮೆಂಟರ್ ಆಗಿ ಮುಂದುವರಿಯಲಿದ್ದಾರೆ ಮಹಿ! MS Dhoni
ಸಿಎಸ್‌ಕೆಗೆ ನಿವೃತ್ತಿ ಸುದ್ದಿ ತಿಳಿಸಿದ ಆ ಭಾವುಕ ಕ್ಷಣದ ಬಗ್ಗೆ ಮಾಲೀಕರು ಹೇಳಿದ್ದೇನು?

ಇತ್ತ ಸಿಎಸ್‌ಕೆ ಸಹ-ಮಾಲೀಕ ಎನ್. ಶ್ರೀನಿವಾಸನ್ ಅವರೂ ಧೋನಿ ಸೇವೆಯನ್ನು ಸ್ಮರಿಸಿದ್ದು, ಎಂ.ಎಸ್. ಧೋನಿ ಇಲ್ಲದೆ ಸಿಎಸ್‌ಕೆ ಇಲ್ಲ. 2008ರಲ್ಲಿ ಧೋನಿ ನಮ್ಮ ತಂಡದಲ್ಲಿರಬೇಕು ಎಂದು ನಾನು ಪಟ್ಟುಹಿಡಿದಿದ್ದೆ, ಅದು ನನ್ನ ಜೀವನದ ಅತ್ಯುತ್ತಮ ನಿರ್ಧಾರವಾಯಿತು. ಅವರ ಸಾಧನೆಗಳಿಗಿಂತ ಹೆಚ್ಚಾಗಿ ಅವರೊಬ್ಬ ಅತ್ಯುತ್ತಮ ಮನುಷ್ಯ ಎಂದು ಪ್ರಶಂಸಿಸಿದ್ದಾರೆ.

2008ರಲ್ಲಿ ಸಿಎಸ್‌ಕೆ ಸೇರಿದ ಧೋನಿ, ತಂಡವನ್ನು ಐದು ಐಪಿಎಲ್ ಟ್ರೋಫಿ ಮತ್ತು ಎರಡು ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳತ್ತ ಮುನ್ನಡೆಸಿದ್ದಾರೆ. ಐಪಿಎಲ್ ವೃತ್ತಿಜೀವನದಲ್ಲಿ 38.30ರ ಸರಾಸರಿ ಮತ್ತು 137.45ರ ಸ್ಟ್ರೈಕ್ ರೇಟ್‌ನೊಂದಿಗೆ ಒಟ್ಟು 5,439 ರನ್ ಕಲೆಹಾಕಿರುವ ಧೋನಿ, ಇದೀಗ ಚೆಪಾಕ್ ಅಂಗಳದಲ್ಲಿ ಹೊಸ ಅವತಾರದಲ್ಲಿ ಮಿಂಚಲು ಸಜ್ಜಾಗಿದ್ದಾರೆ(ಏಜೆನ್ಸೀಸ್​).