ಮತ್ತೊಂದು ಬಿಗ್​ ಟ್ರೇಡ್​ಗೆ ವೇದಿಕೆ ಸಜ್ಜು: ಶಮಿ ಸೇರ್ಪಡೆಗೆ ರಾಜಸ್ತಾನ್​​ ಕಸರತ್ತು! ಸ್ಟಾರ್ ಓಪನರ್ ತಂಡದಿಂದ ಹೊರಕ್ಕೆ? | IPL 2027 Trades

ಶಮಿ ಸೇರ್ಪಡೆಗೆ ರಾಜಸ್ತಾನ್​​ ಕಸರತ್ತು! ಸ್ಟಾರ್ ಓಪನರ್ ತಂಡದಿಂದ ಹೊರಕ್ಕೆ?
ಶಮಿ ಸೇರ್ಪಡೆಗೆ ರಾಜಸ್ತಾನ್​​ ಕಸರತ್ತು! ಸ್ಟಾರ್ ಓಪನರ್ ತಂಡದಿಂದ ಹೊರಕ್ಕೆ?
Published on: 

IPL 2027 Trades: ಮುಂಬರುವ ಐಪಿಎಲ್ ಆವೃತ್ತಿಗೂ ಮುನ್ನ ಆಟಗಾರರ ಟ್ರೇಡ್ ಭರಾಟೆ ಜೋರಾಗಿ ನಡೆಯುತ್ತಿದ್ದು, ಇದೀಗ ರಾಜಸ್ಥಾನ್ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳ ನಡುವೆ ಬಹು-ಆಟಗಾರರ (Multi-player) ಬೃಹತ್ ಟ್ರೇಡ್ ಕುರಿತು ಗಂಭೀರ ಮಾತುಕತೆ ನಡೆಯುತ್ತಿದೆ ಎಂಬ ವರದಿ ಹೊರಬಿದ್ದಿದೆ. ಕ್ರಿಕ್‌ಬಜ್ ಮೂಲಗಳ ಪ್ರಕಾರ, ಲಖನೌ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ ಮತ್ತು ರಾಜಸ್ಥಾನ್ ತಂಡದ ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ಒಳಗೊಂಡ ಈ ಪ್ರಸ್ತಾವನೆಯಲ್ಲಿ ಎಲ್​ಎಎಸ್​ಜಿ ತಂಡದ ಎಡಗೈ ಸ್ಪಿನ್ನರ್ ಮಣಿಮಾರನ್ ಸಿದ್ಧಾರ್ಥ್ ಕೂಡ ಭಾಗಿಯಾಗುವ ಸಾಧ್ಯತೆಯಿದೆ.

ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಬಂಧಪಟ್ಟ ಆಟಗಾರರಿಗೆ ಮಾಹಿತಿ ನೀಡಲಾಗಿದ್ದು, ಕಾಗದಪತ್ರಗಳ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ. ಇದೇ ವೇಳೆ, ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್​ ಆಟಗಾರ ಯಶಸ್ವಿ ಜೈಸ್ವಾಲ್ ಕುರಿತಾಗಿಯೂ ಎರಡೂ ಫ್ರಾಂಚೈಸಿಗಳು ಚರ್ಚೆ ನಡೆಸಿವೆ ಎನ್ನಲಾಗಿದೆ. ಜೈಸ್ವಾಲ್ ಬದಲಿಗೆ ಲಖನೌ ತಂಡದಿಂದ ಮತ್ತೊಬ್ಬ ವೇಗದ ಬೌಲರ್ ಅನ್ನು ರಾಜಸ್ಥಾನ್ ಬಯಸಿತ್ತು. ಆದರೆ, ಈ ವಿಷಯದಲ್ಲಿ ಇನ್ನೂ ಯಾವುದೇ ಅಂತಿಮ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

Also Read
ಅದೇ ನನ್ನ ಮುಖ್ಯ ಗುರಿಯಾಗಿತ್ತು! ಟೀಮ್ ಇಂಡಿಯಾ ದಿಗ್ಗಜರನ್ನು ಕಟ್ಟಿಹಾಕಿದ ರಹಸ್ಯ ಬಿಚ್ಚಿಟ್ಟ ಕಿವೀಸ್​ ವೇಗಿ | Matt Henry
ಶಮಿ ಸೇರ್ಪಡೆಗೆ ರಾಜಸ್ತಾನ್​​ ಕಸರತ್ತು! ಸ್ಟಾರ್ ಓಪನರ್ ತಂಡದಿಂದ ಹೊರಕ್ಕೆ?

ಶಮಿ-ಕರನ್ ಡೀಲ್ ಕುತೂಹಲ ಕೆರಳಿಸಿದ್ದೇಕೆ..?

ಲಖನೌ ಸೂಪರ್ ಜೈಂಟ್ಸ್ ತಂಡದಿಂದ ಮೊಹಮ್ಮದ್ ಶಮಿ ಮತ್ತು ಮಣಿಮಾರನ್ ಸಿದ್ಧಾರ್ಥ್ ರಾಜಸ್ಥಾನ್ ರಾಯಲ್ಸ್ ಪಾಲಾಗಿ, ಪ್ರತಿಯಾಗಿ ಸ್ಯಾಮ್ ಕರನ್ ಎಲ್​ಎಸ್​ಜಿ ತಂಡ ಸೇರುವುದು ಈ ಬಾರಿಯ ಟ್ರೇಡ್​​ನ ಅತ್ಯಂತ ಆಸಕ್ತಿದಾಯಕ ಬೆಳವಣಿಗೆಯಾಗಿದೆ. ರಾಜಸ್ಥಾನ್ ತಂಡದಲ್ಲಿ ಈಗಾಗಲೇ ಜೋಫ್ರಾ ಆರ್ಚರ್, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ, ಕ್ವೇನಾ ಮಫಕಾ ಮತ್ತು ನಾಂಡ್ರೆ ಬರ್ಗರ್ ಅವರಂತಹ ಬಲಿಷ್ಠ ವೇಗಿಗಳಿದ್ದಾರೆ. ಆದರೂ ಶಮಿ ಅವರನ್ನು ತಂಡಕ್ಕೆ ಕರೆತರಲು ರಾಜಸ್ಥಾನ್ ಮುಂದಾಗಿರುವುದರ ಹಿಂದೆ ಸ್ಪಷ್ಟ ತಂತ್ರಗಾರಿಕೆಯಿದೆ.

ಆಡುವ ಹನ್ನೊಂದರ ಬಳಗದಲ್ಲಿ ಜೋಫ್ರಾ ಆರ್ಚರ್ ಅವರನ್ನು ಮಾತ್ರ ವಿದೇಶಿ ವೇಗಿಯಾಗಿ ಬಳಸಿಕೊಂಡು, ಉಳಿದ ವಿದೇಶಿ ಆಟಗಾರರ ಸ್ಥಾನಗಳನ್ನು ಬ್ಯಾಟಿಂಗ್ ಮತ್ತು ಆಲ್‌ರೌಂಡರ್ ವಿಭಾಗಕ್ಕೆ ಮೀಸಲಿಡುವುದು ರಾಜಸ್ಥಾನ್ ಲೆಕ್ಕಾಚಾರವಾಗಿದೆ ಎಂದು ವರದಿಗಳು ತಿಳಿಸಿವೆ. ಮತ್ತೊಂದೆಡೆ, 40ರ ಸನಿಹದಲ್ಲಿದ್ದರೂ ಮೊಹಮ್ಮದ್ ಶಮಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಲಖನೌ ತಂಡವು ಭಾರತೀಯ ವೇಗಿಗಳ ಬಲಿಷ್ಠ ಪಡೆಯನ್ನು ಹೊಂದಿರುವುದರಿಂದ ಮತ್ತು ತಂಡಕ್ಕೆ ಉತ್ತಮ ಆಲ್‌ರೌಂಡರ್‌ಗಳ ಅಗತ್ಯವಿರುವುದರಿಂದ, ಸ್ಯಾಮ್ ಕರನ್​ರನ್ನು ಪಡೆಯುವುದು ಲಾಭದಾಯಕ ಒಪ್ಪಂದವಾಗಿದೆ.

ಜೈಸ್ವಾಲ್​ರನ್ನು ಕೈಬಿಡಲು ರಾಜಸ್ಥಾನ್ ನಿರ್ಧಾರ?

ಈ ಬಾರಿಯ ಟ್ರೇಡ್ ವಿಂಡೋ ಆರಂಭವಾದಾಗಿನಿಂದಲೂ ಪ್ರತಿ ವಾರ ಯಶಸ್ವಿ ಜೈಸ್ವಾಲ್ ಹೆಸರು ಕೇಳಿಬರುತ್ತಲೇ ಇದೆ. ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯರನ್ನು ಪಡೆಯಲು ರಾಜಸ್ಥಾನ್ ರಾಯಲ್ಸ್ ತಂಡವು ಜೈಸ್ವಾಲ್ ಮತ್ತು ರವಿ ಬಿಷ್ಣೋಯ್ ಅವರನ್ನು ನೀಡಲು ಮುಂದಾಗಿತ್ತು ಎಂಬ ವರದಿಗಳಿದ್ದವು (ನಂತರ ಹಾರ್ದಿಕ್ ಪಾಂಡ್ಯ ಅರ್ಶ್‌ದೀಪ್ ಸಿಂಗ್ ಬದಲಿಗೆ ಪಂಜಾಬ್ ಕಿಂಗ್ಸ್ ಸೇರಿದರು).

ದೇಶದ ಅತ್ಯಂತ ಪ್ರತಿಭಾವಂತ ಯುವ ಬ್ಯಾಟರ್ ಆಗಿದ್ದರೂ ಮತ್ತು ವೈಭವ್ ಸೂರ್ಯವಂಶಿ ಅವರೊಂದಿಗಿನ ಸ್ಫೋಟಕ ಆರಂಭಿಕ ಜೊತೆಯಾಟ ಮುರಿದುಬೀಳುವ ಅಪಾಯವಿದ್ದರೂ, ರಾಜಸ್ಥಾನ್ ರಾಯಲ್ಸ್ ತಂಡವು ಜೈಸ್ವಾಲ್ ಅವರಿಂದ ಮುಂದೆ ಸಾಗಲು ನಿರ್ಧರಿಸಿದಂತೆ ಕಾಣುತ್ತಿದೆ. ಐಪಿಎಲ್‌ನಲ್ಲಿ ವಿಶ್ವದರ್ಜೆಯ ಟೀಮ್​ ಇಂಡಿಯಾದ ವೇಗದ ಬೌಲರ್‌ಗಳಿಗೆ ಭಾರಿ ಬೇಡಿಕೆಯಿರುವುದರಿಂದ, ಉತ್ತಮ ವೇಗಿಯನ್ನು ಪಡೆಯುವ ಸಲುವಾಗಿ ರಾಜಸ್ಥಾನ್ ಈ ಕಠಿಣ ನಿರ್ಧಾರಕ್ಕೆ ಮುಂದಾಗಿದೆ. ಒಟ್ಟಿನಲ್ಲಿ ಈ ಮೆಗಾ ಟ್ರೇಡ್ ಅಂತಿಮಗೊಂಡರೆ ಐಪಿಎಲ್ ಸಮೀಕರಣಗಳು ಸಂಪೂರ್ಣ ಬದಲಾಗುವುದರಲ್ಲಿ ಅನುಮಾನವಿಲ್ಲ(ಏಜೆನ್ಸೀಸ್​).