Matt Henry: ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ಶುಕ್ರವಾರ (ನವೆಂಬರ್ 13) ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಮಾರಕ ಬೌಲಿಂಗ್ ದಾಳಿಯ ಮೂಲಕ ಟೀಮ್ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದಾರೆ. 334 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಆಘಾತ ನೀಡಿದ ಹೆನ್ರಿ, ಒಂದೇ ಓವರ್ನಲ್ಲಿ ರನ್ ನೀಡದೆ ಮೂರು ವಿಕೆಟ್ (ಟ್ರಿಪಲ್-ವಿಕೆಟ್ ಮೇಡನ್) ಕಬಳಿಸಿ ಪಂದ್ಯದ ದಿಕ್ಕನ್ನೇ ಬದಲಿಸಿದರು.
ಟೀಮ್ ಇಂಡಿಯಾದ ಘಟಾನುಘಟಿ ಬ್ಯಾಟರ್ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ರನ್ನು ಶೂನ್ಯಕ್ಕೆ ಔಟ್ ಮಾಡಿದ ಹೆನ್ರಿ, ತಮ್ಮ ಈ ಅಮೋಘ ಪ್ರದರ್ಶನದ ಹಿಂದಿನ ತಂತ್ರಗಾರಿಕೆಯನ್ನು ಪಂದ್ಯದ ಬಳಿಕ ಬಹಿರಂಗಪಡಿಸಿದ್ದಾರೆ.
ಈ ಪಂದ್ಯದಲ್ಲಿ 9.4 ಓವರ್ಗಳನ್ನು ಎಸೆದ ಮ್ಯಾಟ್ ಹೆನ್ರಿ, ಎರಡು ಮೇಡನ್ ಸಹಿತ ಕೇವಲ 27 ರನ್ ನೀಡಿ 6 ವಿಕೆಟ್ ಕಬಳಿಸಿದರು. ಇವರ ಈ ಶ್ರೇಷ್ಠ ಬೌಲಿಂಗ್ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ತಂಡವು ಭಾರತದ ವಿರುದ್ಧ 244 ರನ್ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆನ್ರಿ, ತಮ್ಮ ಬೌಲಿಂಗ್ ಯೋಜನೆಯನ್ನು ಸರಳವಾಗಿಟ್ಟುಕೊಂಡಿದ್ದು ಮತ್ತು ನಿಖರತೆಯೊಂದಿಗೆ ವಿಕೆಟ್ ಗುರಿಯಾಗಿಸಿಕೊಂಡು ಬೌಲಿಂಗ್ ಮಾಡಿದ್ದು ತಮಗೆ ಯಶಸ್ಸು ತಂದುಕೊಟ್ಟಿತು ಎಂದು ತಿಳಿಸಿದರು.
ಪಂದ್ಯದ ಪರಿಸ್ಥಿತಿಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡ ಬಗ್ಗೆ ವಿವರಿಸಿದ ಹೆನ್ರಿ, ಚೆಂಡು ಈ ರೀತಿ ಸ್ವಿಂಗ್ ಆಗುತ್ತಿರುವಾಗ ಬೌಲರ್ಗಳಿಗೆ ನೆರವಾಗುತ್ತದೆ. ಆದರೆ, ಇಂತಹ ಸಂದರ್ಭದಲ್ಲಿ ಕೇವಲ ಸ್ಟಂಪ್ಗಳನ್ನು ಗುರಿಯಾಗಿಸಿಕೊಂಡು ಬೌಲಿಂಗ್ ಮಾಡುವುದು ಮುಖ್ಯವಾಗುತ್ತದೆ. ನಮ್ಮ ಯೋಜನೆಗಳನ್ನು ಅತ್ಯಂತ ಸರಳವಾಗಿಟ್ಟುಕೊಳ್ಳಬೇಕು. ಗಾಳಿಗೆ ಎದುರಾಗಿ ಬೌಲಿಂಗ್ ಮಾಡಿದ್ದು ನನ್ನ ಯೋಜನೆಯನ್ನು ಮತ್ತಷ್ಟು ಸುಲಭಗೊಳಿಸಿತು ಎಂದು ಅವರು ಹೇಳಿದರು.
ಸಾಮಾನ್ಯವಾಗಿ ವಿಕೆಟ್ ಪಡೆಯಲು ಆಕ್ರಮಣಕಾರಿ ತಂತ್ರ ಅನುಸರಿಸಲಾಗುತ್ತದೆ. ಆದರೆ ಈ ಪಂದ್ಯದಲ್ಲಿ ಅತಿಯಾದ ಆಕ್ರಮಣಕಾರಿ ಆಟಕ್ಕಿಂತ ಸರಳತೆ ಮತ್ತು ನಿಖರತೆಗೆ ಒತ್ತು ನೀಡಿದ್ದು ಹೆಚ್ಚು ಪರಿಣಾಮಕಾರಿಯಾಯಿತು ಎಂದು ಹೆನ್ರಿ ಅಭಿಪ್ರಾಯಪಟ್ಟರು. ಚೆಂಡು ತೀಕ್ಷ್ಣವಾಗಿ ಚಲಿಸುತ್ತಿರುವಾಗ, ಅದರಲ್ಲೂ ಮೊದಲ ಎಸೆತವನ್ನು ಎದುರಿಸುವಾಗ ಬ್ಯಾಟರ್ಗಳಿಗೆ ಆಡುವುದು ಖಂಡಿತ ಸುಲಭವಲ್ಲ ಎಂದು ಹೆನ್ರಿ ವಿವರಿಸಿದ್ದಾರೆ.
ಈ ಗೆಲುವಿನಿಂದ ನಾನು ಅತಿಯಾಗಿ ಬೀಗುವುದಿಲ್ಲ. ಭಾರತ ತಂಡವು ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿದೆ. ಹೀಗಾಗಿ ಇಲ್ಲಿ ಯಾವುದೇ ಅತಿಯಾದ ಮಾತುಗಳನ್ನು ಆಡಲು ನಾನು ಬಯಸುವುದಿಲ್ಲ ಎಂದಿರುವ ಕಿವೀಸ್ ವೇಗಿ, ಮುಂಬರುವ ಟೆಸ್ಟ್ ಸರಣಿಯು ಅತ್ಯಂತ ರೋಚಕವಾಗಿರಲಿದೆ ಮತ್ತು ನಾವು ಅದನ್ನು ಎದುರು ನೋಡುತ್ತಿದ್ದೇವೆ, ಆದರೆ ಅದಕ್ಕೂ ಮುನ್ನ ಇಲ್ಲಿ ಇನ್ನೊಂದು ಏಕದಿನ ಪಂದ್ಯ ಬಾಕಿಯಿದೆ. ಈ ಏಕದಿನ ಸರಣಿ ನಮಗೆ ಬಹಳ ಮುಖ್ಯವಾಗಿದ್ದು, ಕೊನೆಯ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸಲು ಪ್ರಯತ್ನಿಸುತ್ತೇವೆ. ಆ ನಂತರವಷ್ಟೇ ಟೆಸ್ಟ್ ಸರಣಿಯತ್ತ ಗಮನ ಹರಿಸುತ್ತೇವೆ ಎಂದು ಹೆನ್ರಿ ತಮ್ಮ ತಂಡದ ಮುಂದಿನ ಗುರಿಯನ್ನು ವಿವರಿಸಿದರು.
ಐದು ಪಂದ್ಯಗಳ ಏಕದಿನ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯವು ಭಾನುವಾರ ನಡೆಯಲಿದೆ. ಇದಾದ ಬಳಿಕ ನವೆಂಬರ್ 19ರಿಂದ ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದೆ(ಏಜೆನ್ಸೀಸ್).