ಬೆಂಗಳೂರು: ಕಳೆದ 18 ವರ್ಷಗಳಿಂದ ಈ ಸಲ ಕಪ್ ನಮ್ದೆ ಅಂತಾ ಹೇಳಿ ಹೇಳಿ ಬೇಸರಗೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಅಭಿಮಾನಿಗಳಿಗೆ 2025 ಮರೆಯಲಾಗದ ವರ್ಷ. ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಖುಷಿ ಒಂದೆಡೆಯಾದರೆ, ಆ ಗೆಲುವಿನ ಸಂಭ್ರಮನ್ನು ಕಸಿದುಕೊಂಡ ಮಹಾ ದುರಂತ ಇನ್ನೊಂದೆಡೆ. ಕಪ್ ಗೆದ್ದ ಖುಷಿಯಲ್ಲಿ ಸಂಭ್ರಮಾಚರಣೆ ಮಾಡುವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು ಕಹಿ ನೆನಪಾಗಿಯೇ ನಮ್ಮ ನಡುವೆ ಉಳಿದಿದೆ. ಈ ಒಂದು ಕಾರಣಕ್ಕೆ ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸದಿರಲು ಸರ್ಕಾರ ನಿರ್ಧಾರ ಮಾಡಿತು. ಇದರಿಂದ ಅಸಂಖ್ಯಾತ ಆರ್ಸಿಬಿ ಅಭಿಮಾನಿಗಳಿಗೆ ಸಖತ್ ಬೇಜಾರಾಗಿತ್ತು. ನೆಚ್ಚಿನ ತಂಡದ ಆಟವನ್ನು ನೇರವಾಗಿ ಕಣ್ತುಂಬಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ಅಭಿಮಾನಿಗಳು ಮುಳುಗಿದ್ದರು. ಆದರೆ, ಆ ಚಿಂತೆ ಇನ್ನು ಬೇಡ.