ವಿಮಾನ ಪ್ರಯಾಣ ವೇಳೆ ಪವರ್​ಬ್ಯಾಂಕ್ ಬ್ಯಾನ್: ಡಿಜಿಸಿಎನಿಂದ ಮಾರ್ಗಸೂಚಿ! Power Banks

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ವಿಮಾನಗಳಲ್ಲಿ ಪವರ್ ಬ್ಯಾಂಕ್​ಗಳು ಹಾಗೂ ಲಿಥಿಯಂ ಬ್ಯಾಟರಿ ಹೊಂದಿರುವ ವಸ್ತುಗಳು ಬ್ಯಾನ್​
  • ಪ್ರಯಾಣಿಕರಿಗೆ ಮಹತ್ವದ ನಿರ್ದೇಶನ ನೀಡಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ
  • ‘ಪವರ್ ಬ್ಯಾಂಕ್​ಗಳು ಹಾಗೂ ಸ್ಪೇರ್ ಬ್ಯಾಟರಿಗಳನ್ನು ಹ್ಯಾಂಡ್ ಲಗ್ಗೇಜ್​ನಲ್ಲಿ ಮಾತ್ರ ಒಯ್ಯಲು ಅವಕಾಶವಿದೆ
ನವದೆಹಲಿ: ವಿಮಾನಗಳಲ್ಲಿ ಪವರ್ ಬ್ಯಾಂಕ್​ಗಳು ( Power Banks ) ಹಾಗೂ ಲಿಥಿಯಂ ಬ್ಯಾಟರಿ ಹೊಂದಿರುವ ಇತರ ಸಾಧನಗಳನ್ನು ಬಳಕೆ ಮಾಡುವಂತಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಿರ್ದೇಶನ ನೀಡಿದೆ.
ಮೊಬೈಲ್​ಫೋನ್ ಹಾಗೂ ಇತರ ಗ್ಯಾಡ್ಜೆಟ್​ಗಳನ್ನು ಚಾರ್ಜ್ ಮಾಡಲು ಬಳಸುವ ಪವರ್ ಬ್ಯಾಂಕ್​ಗಳನ್ನು ವಿಮಾನದ ಸೀಟ್ ಪವರ್ ಔಟ್​ಲೆಟ್ ಸೇರಿದಂತೆ ವಿಮಾನಗಳಲ್ಲಿ ಬಳಸುವುದನ್ನು ಡಿಜಿಸಿಎ ನಿಷೇಧಿಸಿದೆ. ಲಿಥಿಯಂ ಬ್ಯಾಟರಿಗಳು ಅತಿಯಾಗಿ ಬಿಸಿಯಾಗುವುದು ಅಥವಾ ಬೆಂಕಿ ಹೊತ್ತಿಕೊಳ್ಳುವ ಪ್ರಕರಣಗಳು ಜಗತ್ತಿನಾದ್ಯಂತ ನಡೆದಿರುವುದರಿಂದ ಈ ನಿಷೇಧ ಹೇರಲಾಗಿದೆ.
‘ಪವರ್ ಬ್ಯಾಂಕ್​ಗಳು ಹಾಗೂ ಸ್ಪೇರ್ ಬ್ಯಾಟರಿಗಳನ್ನು ಹ್ಯಾಂಡ್ ಲಗ್ಗೇಜ್​ನಲ್ಲಿ ಮಾತ್ರ ಒಯ್ಯಲು ಅವಕಾಶವಿದೆ. ಆದರೆ ಮೇಲಿನ ಕಂಪಾರ್ಟ್ ಮೆಂಟ್​ಗಳಲ್ಲಿ ಇರಿಸಲು ಅಥವಾ ಚೆಕ್​ಇನ್ ಲಗೇಜ್​ನಲ್ಲಿ ಒಯ್ಯಲು ಅವಕಾಶವಿಲ್ಲ, ಅಂಥ ಜಾಗಗಳಲ್ಲಿ ಬೆಂಕಿ ಉಂಟಾದರೆ ತಕ್ಷಣ ಪತ್ತೆ ಹಾಗೂ ನಿಯಂತ್ರಣ ಅಸಾಧ್ಯ’ ಎಂದು ಡಿಜಿಸಿಎ ನವೆಂಬರ್​ನಲ್ಲಿ ಬಿಡುಗಡೆ ಮಾಡಿದ್ದ ‘ಅಪಾಯಕಾರಿ ಸರಕು ಸಲಹಾ ಸುತ್ತೋಲೆ’ಯಲ್ಲಿ ತಿಳಿಸಿದೆ. ಹೀಗಾಗಿ ಹಲವಾರು ವಿಮಾನಯಾನ ಸಂಸ್ಥೆಗಳು ಇದನ್ನೀಗ ಜಾರಿಗೆ ತರಲು ಮುಂದಾಗಿವೆ ಎಂಬುದು ವರದಿಯಾಗಿದೆ.
ಲಿಥಿಯಂ ಬ್ಯಾಟರಿಯಿಂದ ಉಂಟಾದ ಬೆಂಕಿ ಶಕ್ತಿಶಾಲಿ ಹಾಗೂ ಅದು ಸುಲಭದಲ್ಲಿ ನಿಯಂತ್ರಣಕ್ಕೆ ಸಿಗುವಂಥದ್ದಲ್ಲವಾದ್ದರಿಂದ ಅವು ಅಪಾಯಕಾರಿ ಎನಿಸಿಕೊಂಡಿವೆ. ಇತ್ತೀಚೆಗೆ ರಿಚಾರ್ಜ್ ಮಾಡುವಂಥ ಸಾಧನಗಳಲ್ಲಿ ಲಿಥಿಯಂ ಬ್ಯಾಟರಿಗಳ ಬಳಕೆ ಸಾಮಾನ್ಯವಾಗಿದ್ದು, ವಿಮಾನಗಳಲ್ಲಿ ಲಿಥಿಯಂ ಬ್ಯಾಟರಿಗಳ ಸಾಗಾಟ ಹೆಚ್ಚಾಗಿದೆ. ಪವರ್ ಬ್ಯಾಂಕ್, ಪೋರ್ಟೆಬಲ್ ಚಾರ್ಜರ್ ಮತ್ತು ಅಂಥ ಇತರ ಸಾಧಗಳಲ್ಲಿ ಲಿಥಿಯಂ ಬ್ಯಾಟರಿಗಳು ಇರುವುದರಿಂದ ಡಿಜಿಸಿಎ ಈ ನಿರ್ದೇಶನ ನೀಡಿದೆ.
ಪ್ರಯಾಣಿಕರು ಒಯ್ಯುವ ಲಿಥಿಯಂ ಬ್ಯಾಟರಿಗಳಿಗೆ ಸಂಬಂಧಿಸಿ ಅಸ್ತಿತ್ವದಲ್ಲಿರುವ ಸುರಕ್ಷತಾ ಅಪಾಯದ ಮೌಲ್ಯಮಾಪನಗಳನ್ನು ಪರಿಶೀಲಿಸುವಂತೆಯೂ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ನಿರ್ದೇಶನ ನೀಡಿದೆ. ಅತಿಯಾದ ಬಿಸಿ, ಇಲೆಕ್ಟ್ರಾನಿಕ್ ಸಾಧನಗಳಿಂದ ಹೊಗೆ-ಜ್ವಾಲೆಯಂಥವುಗಳ ಸುಳಿವು ಪತ್ತೆಗೆ ಸಿಬ್ಬಂದಿಗೆ ಅಗತ್ಯ ತರಬೇತಿ ಇರಬೇಕೆಂದೂ ಡಿಜಿಸಿಎ ಹೇಳಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net