ನಂಬರ್ 7 ಜರ್ಸಿಗೆ ಶಾಶ್ವತ ವಿದಾಯ? ಈ ಹಿಂದೆ ಯಾವೆಲ್ಲ ದಂತಕಥೆಗಳ ಜರ್ಸಿಗಳು ನಿವೃತ್ತಿಯಾಗಿವೆ ಮತ್ತು ಧೋನಿಗೆ 7 ಏಕೆ ಇಷ್ಟ? | Number 7 Jersey Retirement

ಧೋನಿಗೆ 7 ಏಕೆ ಇಷ್ಟ?
ಧೋನಿಗೆ 7 ಏಕೆ ಇಷ್ಟ?
Published on: 

Number 7 Jersey Retirement: ಭಾರತೀಯ ಕ್ರಿಕೆಟ್‌ನ ದಿಗ್ಗಜ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ವೃತ್ತಿಜೀವನಕ್ಕೆ ಅಧಿಕೃತವಾಗಿ ವಿದಾಯ ಘೋಷಿಸಿದ್ದು, ಅವರ ಐತಿಹಾಸಿಕ ನಂಬರ್ 7 ಜರ್ಸಿಗೆ ಗೌರವಾರ್ಪಣೆಯಾಗಿ ಸಿಎಸ್‌ಕೆ ಫ್ರಾಂಚೈಸಿಯು ಈ ಸಂಖ್ಯೆಯ ಜರ್ಸಿಯನ್ನು ಅಧಿಕೃತವಾಗಿ ನಿವೃತ್ತಿಗೊಳಿಸಲು ನಿರ್ಧರಿಸಿದೆ ಎಂದು ದಿ ಟೆಲಿಗ್ರಾಫ್ ಇಂಡಿಯಾ ವರದಿ ಮಾಡಿದೆ.

2008ರಲ್ಲಿ ಐಪಿಎಲ್ ಆರಂಭವಾದಾಗ ಸಿಎಸ್‌ಕೆಯ ಮೊದಲ ಆಯ್ಕೆಯಾಗಿದ್ದ ಧೋನಿ, ಕಳೆದ 17 ವರ್ಷಗಳ ಕಾಲ ಫ್ರಾಂಚೈಸಿಯ ಪರವಾಗಿ ಅದ್ಭುತವಾಗಿ ಆಡಿದ್ದಾರೆ. ಅಲ್ಲದೆ, ಧೋನಿ ಸಿಎಸ್‌ಕೆ ನಿಷೇಧಗೊಂಡಿದ್ದ ವೇಳೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಪರ ಆಡಿದ ಎರಡು ವರ್ಷಗಳಲ್ಲೂ ಇದೇ ಸಂಖ್ಯೆಯ ಜರ್ಸಿಯನ್ನು ಧರಿಸಿದ್ದರು. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 5 ಬಾರಿ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಧೋನಿ ತಂಡದ ಪರ ಗರಿಷ್ಠ ರನ್ ಗಳಿಸಿದ ಆಟಗಾರರಾಗಿಯೂ ಹೊರಹೊಮ್ಮಿದ್ದಾರೆ.

ತಲಾ ಮತ್ತು ನಂಬರ್ 7 ದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವದಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದವರು ಧೋನಿ. ಈಗ ಸಿಎಸ್‌ಕೆ ಫ್ರಾಂಚೈಸಿಯು ಭವಿಷ್ಯದಲ್ಲಿ ಯಾವುದೇ ಆಟಗಾರನು ಈ ಸಂಖ್ಯೆಯ ಜರ್ಸಿಯನ್ನು ಬಳಸದಂತೆ ನಿರ್ಬಂಧಿಸಿದೆ. ಬಿಸಿಸಿಐ ಈಗಾಗಲೇ 2020ರಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಭಾರತೀಯ ಪುರುಷರ ಕ್ರಿಕೆಟ್ ತಂಡದಲ್ಲೂ ನಂಬರ್ 7 ಜರ್ಸಿಯನ್ನು ನಿವೃತ್ತಿಗೊಳಿಸಿತ್ತು.

Also Read
ನೀವಿಲ್ಲದೆ ಐಪಿಎಲ್ ಮೊದಲಿನಂತಿರಲ್ಲ, ಇದೊಂದು ಯುಗದ ಅಂತ್ಯ: ಧೋನಿ ನಿವೃತ್ತಿಗೆ ಭಾವುಕರಾದ ದಿಗ್ಗಜರು ಪಟ್ಟಿ ಹೀಗಿದೆ! | MS Dhoni Retirement
ಧೋನಿಗೆ 7 ಏಕೆ ಇಷ್ಟ?

ಜರ್ಸಿ ನಂಬರ್ 7ರ ಹಿಂದಿನ ರಹಸ್ಯ

ಕಳೆದ ವರ್ಷ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಧೋನಿ ತಾನು 7 ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎಂಬುದನ್ನು ಸ್ವತಃ ಬಹಿರಂಗಪಡಿಸಿದ್ದರು. ನನ್ನ ಪಾಲಕರು ನಾನು ಭೂಮಿಗೆ ಬರುವ ದಿನ ಮತ್ತು ಸಮಯವನ್ನು ನಿರ್ಧರಿಸಿದ್ದು ಆ ದಿನವೇ. ನಾನು ಜುಲೈ 7ರಂದು ಜನಿಸಿದೆ. ಜುಲೈ ಎಂದರೆ ಏಳನೇ ತಿಂಗಳು. 81 ನನ್ನ ಜನನ ವರ್ಷವಾಗಿದ್ದು, 8ರಲ್ಲಿ 1 ಕಳೆದರೆ 7 ಬರುತ್ತದೆ. ಹೀಗಾಗಿ ನನಗೆ ಜರ್ಸಿ ನಂಬರ್ ಏನು ಎಂದು ಕೇಳಿದಾಗ ಈ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಸುಲಭವಾಯಿತು ಎಂದು ಧೋನಿ ಸ್ಮರಿಸಿಕೊಂಡಿದ್ದರು.

ಐಪಿಎಲ್‌ನಲ್ಲಿ ಜರ್ಸಿ ನಿವೃತ್ತಿಗೊಳಿಸಿದ ಇತರ ಫ್ರಾಂಚೈಸಿಗಳು

ಐಪಿಎಲ್ ಇತಿಹಾಸದಲ್ಲಿ ಧೋನಿಗೂ ಮುನ್ನ ಇತರೆ ಮೂರು ಫ್ರಾಂಚೈಸಿಗಳು ತಮ್ಮ ದಂತಕಥೆಗಳ ನಾಲ್ಕು ಜರ್ಸಿ ಸಂಖ್ಯೆಗಳನ್ನು ನಿವೃತ್ತಿಗೊಳಿಸಿವೆ. ಮುಂಬೈ ಇಂಡಿಯನ್ಸ್ ತಂಡವು 2013ರಲ್ಲಿ ಸಚಿನ್ ತೆಂಡೂಲ್ಕರ್ ಅವರ 'ನಂಬರ್ 10' ಜರ್ಸಿಯನ್ನು ಅವರ ಕೊನೆಯ ಸೀಸನ್ ಬಳಿಕ ನಿವೃತ್ತಿಗೊಳಿಸಿತ್ತು. ಸಚಿನ್ ಕೂಡ ಧೋನಿಯಂತೆ ನಂತರ ತಂಡದಲ್ಲಿ ಮಾರ್ಗದರ್ಶಕರಾಗಿ ಮುಂದುವರಿದಿದ್ದರು.

ದಶಕದ ಬಳಿಕ, 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲ್ ಆಫ್ ಫೇಮ್ ಸಮಾರಂಭದಲ್ಲಿ ಏಕಕಾಲಕ್ಕೆ ಎರಡು ಜರ್ಸಿಗಳನ್ನು ನಿವೃತ್ತಿಗೊಳಿಸಿತು. ಎಬಿ ಡಿವಿಲಿಯರ್ಸ್ ಅವರ 4,491 ರನ್‌ಗಳ ಸಾಧನೆಗೆ ಗೌರವವಾಗಿ ನಂಬರ್ 17 ಹಾಗೂ ಕ್ರಿಸ್ ಗೇಲ್ ಅವರ ಐತಿಹಾಸಿಕ 175 ರನ್‌ಗಳ ಸ್ಮರಣಾರ್ಥ ನಂಬರ್ 333 ಜರ್ಸಿಯನ್ನು ಆರ್‌ಸಿಬಿ ಅಧಿಕೃತವಾಗಿ ಹಿಂಪಡೆಯಿತು. ತದನಂತರ, 2026ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಆಂಡ್ರೆ ರಸೆಲ್ ಅವರ ದಶಕದ ಮ್ಯಾಚ್ ವಿನ್ನಿಂಗ್ ಕೊಡುಗೆಯನ್ನು ಸ್ಮರಿಸಿ ನಂಬರ್ 12 ಜರ್ಸಿಯನ್ನು ನಿವೃತ್ತಿಗೊಳಿಸಿತು.

ಎಂ ಎಸ್ ಧೋನಿ ಅವರ ನಿವೃತ್ತಿಯೊಂದಿಗೆ ಸಿಎಸ್‌ಕೆಯಲ್ಲಿ ಒಂದು ಸುವರ್ಣಯುಗ ಅಂತ್ಯಗೊಂಡಿದ್ದು, ನಂಬರ್ 7 ಜರ್ಸಿಯನ್ನು ಶಾಶ್ವತವಾಗಿ ಕಾಯ್ದಿರಿಸುವ ಮೂಲಕ ಫ್ರಾಂಚೈಸಿಯು ಕ್ರಿಕೆಟ್ ಲೋಕದ ಸಾರ್ವಕಾಲಿಕ ಶ್ರೇಷ್ಠ ನಾಯಕನಿಗೆ ಅತ್ಯುನ್ನತ ಗೌರವ ಸಲ್ಲಿಸಿದೆ(ಏಜೆನ್ಸೀಸ್​).