ಗ್ರೀನ್ಗಾಗಿ ಮುಂಬೈ ಇಂಡಿಯನ್ಸ್ ತಂಡವು 2 ಕೋಟಿ ರೂಪಾಯಿಗಳಿಂದ ಬಿಡ್ಡಿಂಗ್ ಆರಂಭಿಸಿತು. ತಮಾಷೆಯ ಸಂಗತಿ ಏನೆಂದರೆ, ಮುಂಬೈ ಇಂಡಿಯನ್ಸ್ ತಂಡದ ಪರ್ಸ್‌ನಲ್ಲಿ ಕೇವಲ 2.75 ಕೋಟಿ ರೂಪಾಯಿ ಮಾತ್ರ ಇತ್ತು. ಹೀಗಾಗಿ ಗ್ರೀನ್, ಮುಂಬೈ ಇಂಡಿಯನ್ಸ್ ತೆಕ್ಕೆಯಿಂದ ಜಾರಿದರು. ಬಳಿಕ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್ ತಂಡಗಳು ಬಿಡ್ಡಿಂಗ್ ಪೈಪೋಟಿ ನಡೆಸಿದವು. ಈ ಹಂತದಲ್ಲಿ ಈ ಎರಡು ತಂಡಗಳನ್ನು ಬಿಟ್ಟರೆ ಬೇರೆ ಯಾವ ತಂಡವು ಗ್ರೀನ್ ಬಗ್ಗೆ ಆಸಕ್ತಿ ತೊರಲಿಲ್ಲ. 2 ಕೋಟಿಯಿಂದ ತಕ್ಷಣ 7 ಕೋಟಿ ಬಿಡ್ಡಿಂಗ್ ಮೊತ್ತ ಏರಿತು. ಅಲ್ಲದೆ, ಈ ಹರಾಜಿನಲ್ಲಿ 10+ ಕೋಟಿ ಮೊತ್ತ ದಾಟಿದ ಮೊದಲ ಆಟಗಾರ ಎನಿಸಿಕೊಂಡರು. ತಮ್ಮ ಬಳಿ ಇದ್ದ 16 ಕೋಟಿ ರೂ. ಪರ್ಸ್‌ನಲ್ಲಿ 13.40 ಕೋಟಿ ರೂ.ಗಳವರೆಗೆ ಗ್ರೀನ್ಗೆ ನೀಡಲು ಆರ್ಆರ್ ತಂಡ ಸಿದ್ಧವಿತ್ತು. ಆದರೆ, ಬಿಡ್ಡಿಂಗ್ ಮುಂದುವರಿದಿದ್ದರಿಂದ ಆರ್ಆರ್ ಹಿಂದೆ ಸರಿಯಿತು. ಈ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 13.80 ಕೋಟಿ ರೂ.ಗೆ ಬಿಡ್ಡಿಂಗ್ ಯುದ್ಧಕ್ಕೆ ಪ್ರವೇಶಿಸಿತು. ಇದೇ ವೇಳೆ ಕೆಕೆಆರ್ ಬಿಡ್ಡಿಂಗ್ ಮೊತ್ತವನ್ನು 18 ಕೋಟಿ ರೂ.ಗೆ ಏರಿಸಿತು. ಈ ಹಂತದಲ್ಲಿ ಬಿಡ್ಡಿಂಗ್ ಕೊಂಚ ನಿಧಾನವಾಯಿತು. ಆದರೆ, ಎರಡೂ ತಂಡದಲ್ಲಿ ಯಾವುದೇ ತಂಡ ಹಿಂದೆ ಸರಿಯಲಿಲ್ಲ. ಬಳಿಕ ಸಿಎಸ್‌ಕೆ ಮತ್ತು ಕೆಕೆಆರ್ ಬಿಡ್‌ಗಳು 20 ಕೋಟಿ ದಾಟಿತು. ಬಳಿಕ ಮತ್ತೊಮ್ಮೆ 21.60 ಕೋಟಿ ರೂ.ಗೆ ಏರಿತು. ಅಂತಿಮವಾಗಿ ಗ್ರೀನ್ ಅವರು 25.20 ಕೋಟಿ ರೂ.ಗೆ ಕೆಕೆಆರ್ ತಂಡದ ಪಾಲಾದರು.