ಐಪಿಎಲ್​ ಮಿನಿ ಹರಾಜು: KKR​ ಪಾಲಾದ ಗ್ರೀನ್, ಐಪಿಎಲ್​ನ ಅತ್ಯಂತ ದುಬಾರಿ ವಿದೇಶಿ ಆಟಗಾರನೆಂಬ ಹೆಗ್ಗಳಿಕೆ! Cameron Green

ಆಸ್ಟ್ರೇಲಿಯಾದ ಆಲ್​ರೌಂಡರ್​​ ಹಾಗೂ ಆರ್​ಸಿಬಿ ಮಾಜಿ ಆಟಗಾರ ಕ್ಯಾಮರೋನ್​ ಗ್ರೀನ್
ಆಸ್ಟ್ರೇಲಿಯಾದ ಆಲ್​ರೌಂಡರ್​​ ಹಾಗೂ ಆರ್​ಸಿಬಿ ಮಾಜಿ ಆಟಗಾರ ಕ್ಯಾಮರೋನ್​ ಗ್ರೀನ್
Published on

ಪ್ರಮುಖ ಮುಖ್ಯಾಂಶಗಳು

  • ಬಹುನಿರೀಕ್ಷಿತ ಐಪಿಎಲ್​ ಮಿನಿ ಹರಾಜು ಅಬುಧಾಬಿಯಲ್ಲಿ ಆರಂಭ
  • ಆಸ್ಟ್ರೇಲಿಯಾದ ಆಲ್​ರೌಂಡರ್​​ ಕ್ಯಾಮರೋನ್​ ಗ್ರೀನ್ ಕೆಕೆಆರ್​ ಪಾಲು
  • 25.20 ಕೋಟಿ ರೂ.ಗೆ ಕೋಲ್ಕತ ನೈಟ್​ ರೈಡರ್ಸ್​ ತಂಡಕ್ಕೆ ಬಿಕರಿ
  • ಐಪಿಎಲ್​ನ ಅತ್ಯಂತ ದುಬಾರಿ ವಿದೇಶಿ ಆಟಗಾರನೆಂಬ ಹೆಗ್ಗಳಿಕೆ ಗ್ರೀನ್​ ಪಾತ್ರ
IPL 2026 Auction : ಕ್ರಿಕೆಟ್ ಅಭಿಮಾನಿಗಳು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದ ಬಹುನಿರೀಕ್ಷಿತ ಐಪಿಎಲ್​ ಮಿನಿ ಹರಾಜು ಕೆಲವೇ ಕ್ಷಣಗಳ ಹಿಂದೆ ಆರಂಭವಾಗಿದೆ. ಅಬುಧಾಬಿಯಲ್ಲಿ ನಡೆಯುತ್ತಿರುವ ಈ ಮೆಗಾ ಈವೆಂಟ್​ನಲ್ಲಿ ಆಟಗಾರರ ಖರೀದಿ ಭರಾಟೆ ಜೋರಾಗಿದೆ. ಆಸ್ಟ್ರೇಲಿಯಾದ ಆಲ್​ರೌಂಡರ್​​ ಹಾಗೂ ಆರ್​ಸಿಬಿ ಮಾಜಿ ಆಟಗಾರ ಕ್ಯಾಮರೋನ್​ ಗ್ರೀನ್ ( Cameron Green )​ ಅವರು ಬರೋಬ್ಬರಿ 25.20 ಕೋಟಿ ರೂ.ಗೆ ಕೋಲ್ಕತ ನೈಟ್​ ರೈಡರ್ಸ್​ ತಂಡಕ್ಕೆ ಬಿಕರಿಯಾದರು. ಐಪಿಎಲ್​ ಇತಿಹಾಸದಲ್ಲೇ ದಾಖಲೆ ಬೆಲೆಗೆ ಮಾರಾಟವಾದ ವಿದೇಶಿ ಆಟಗಾರನೆಂಬ ಹೆಗ್ಗಳಿಕೆಗೆ ಗ್ರೀನ್​ ಪಾತ್ರರಾಗಿದ್ದಾರೆ.
ಗ್ರೀನ್​ಗಾಗಿ ಮುಂಬೈ ಇಂಡಿಯನ್ಸ್ ತಂಡವು 2 ಕೋಟಿ ರೂಪಾಯಿಗಳಿಂದ ಬಿಡ್ಡಿಂಗ್ ಆರಂಭಿಸಿತು. ತಮಾಷೆಯ ಸಂಗತಿ ಏನೆಂದರೆ, ಮುಂಬೈ ಇಂಡಿಯನ್ಸ್​ ತಂಡದ ಪರ್ಸ್​ನಲ್ಲಿ ಕೇವಲ 2.75 ಕೋಟಿ ರೂಪಾಯಿ ಮಾತ್ರ ಇತ್ತು. ಹೀಗಾಗಿ ಗ್ರೀನ್​, ಮುಂಬೈ ಇಂಡಿಯನ್ಸ್​ ತೆಕ್ಕೆಯಿಂದ ಜಾರಿದರು. ಬಳಿಕ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್ ತಂಡಗಳು ಬಿಡ್ಡಿಂಗ್ ಪೈಪೋಟಿ ನಡೆಸಿದವು. ಈ ಹಂತದಲ್ಲಿ ಈ ಎರಡು ತಂಡಗಳನ್ನು ಬಿಟ್ಟರೆ ಬೇರೆ ಯಾವ ತಂಡವು ಗ್ರೀನ್​ ಬಗ್ಗೆ ಆಸಕ್ತಿ ತೊರಲಿಲ್ಲ. 2 ಕೋಟಿಯಿಂದ ತಕ್ಷಣ 7 ಕೋಟಿ ಬಿಡ್ಡಿಂಗ್​ ಮೊತ್ತ ಏರಿತು. ಅಲ್ಲದೆ, ಈ ಹರಾಜಿನಲ್ಲಿ 10+ ಕೋಟಿ ಮೊತ್ತ ದಾಟಿದ ಮೊದಲ ಆಟಗಾರ ಎನಿಸಿಕೊಂಡರು.
ತಮ್ಮ ಬಳಿ ಇದ್ದ 16 ಕೋಟಿ ರೂ. ಪರ್ಸ್‌ನಲ್ಲಿ 13.40 ಕೋಟಿ ರೂ.ಗಳವರೆಗೆ ಗ್ರೀನ್​ಗೆ ನೀಡಲು ಆರ್​ಆರ್​ ತಂಡ ಸಿದ್ಧವಿತ್ತು. ಆದರೆ, ಬಿಡ್ಡಿಂಗ್​ ಮುಂದುವರಿದಿದ್ದರಿಂದ ಆರ್​ಆರ್​ ಹಿಂದೆ ಸರಿಯಿತು. ಈ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 13.80 ಕೋಟಿ ರೂ.ಗೆ ಬಿಡ್ಡಿಂಗ್ ಯುದ್ಧಕ್ಕೆ ಪ್ರವೇಶಿಸಿತು. ಇದೇ ವೇಳೆ ಕೆಕೆಆರ್ ಬಿಡ್ಡಿಂಗ್​ ಮೊತ್ತವನ್ನು 18 ಕೋಟಿ ರೂ.ಗೆ ಏರಿಸಿತು. ಈ ಹಂತದಲ್ಲಿ ಬಿಡ್ಡಿಂಗ್ ಕೊಂಚ ನಿಧಾನವಾಯಿತು. ಆದರೆ, ಎರಡೂ ತಂಡದಲ್ಲಿ ಯಾವುದೇ ತಂಡ ಹಿಂದೆ ಸರಿಯಲಿಲ್ಲ. ಬಳಿಕ ಸಿಎಸ್‌ಕೆ ಮತ್ತು ಕೆಕೆಆರ್ ಬಿಡ್‌ಗಳು 20 ಕೋಟಿ ದಾಟಿತು. ಬಳಿಕ ಮತ್ತೊಮ್ಮೆ 21.60 ಕೋಟಿ ರೂ.ಗೆ ಏರಿತು. ಅಂತಿಮವಾಗಿ ಗ್ರೀನ್​ ಅವರು 25.20 ಕೋಟಿ ರೂ.ಗೆ ಕೆಕೆಆರ್​ ತಂಡದ ಪಾಲಾದರು. ಆದರೆ, ಐಪಿಎಲ್​ ನಿಯಮಗಳ ಪ್ರಕಾರ ಎಷ್ಟೇ ಬಿಡ್​ ಆದರೂ ಕೊನೆಯಲ್ಲಿ ಆಟಗಾರರಿಗೆ ಸಿಗುವುದು ಮಾತ್ರ 18 ಕೋಟಿ ರೂಪಾಯಿ.

ಐಪಿಎಲ್​ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರರು

* ರಿಷಭ್ ಪಂತ್ - 27 ಕೋಟಿ (LSG)
* ಶ್ರೇಯಸ್ ಅಯ್ಯರ್ - 26.75 ಕೋಟಿ (PBKS)
* ಕ್ಯಾಮರೂನ್ ಗ್ರೀನ್ - 25.20 ಕೋಟಿ (KKR)
* ಮಿಚೆಲ್ ಸ್ಟಾರ್ಕ್ - 24.75 ಕೋಟಿ (KKR)
* ವೆಂಕಟೇಶ್ ಅಯ್ಯರ್ - 23.75 ಕೋಟಿ (KKR)
ಅಬುಧಾಬಿಯಲ್ಲಿ ಮಧ್ಯಾಹ್ನ 2.30 ಕ್ಕೆ ಪ್ರಾರಂಭವಾದ ಮಿನಿ ಹರಾಜು ಪ್ರಮುಖ ಆಟಗಾರರಿಗೆ ಅನಿರೀಕ್ಷಿತ ಹೊಡೆತ ನೀಡಿತು. ಬಹುತೇಕ ಆಟಗಾರರು ಮಾರಾಟವಾಗದೆ ಉಳಿದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪೃಥ್ವಿ ಶಾ, ಜ್ಯಾಕ್ ಪ್ರೆಸ್ಸರ್ ಮತ್ತು ಡೆವೊನ್ ಕಾನ್ವೇ ಮಾರಾಟವಾಗದೆ ಉಳಿದರು. ಈ ಮೂವರು ಆಟಗಾರರು ಹರಾಜಿನಲ್ಲಿ ಮೊದಲು ಬಂದರು ಆದರೆ, ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಲು ಮುಂದೆ ಬರಲಿಲ್ಲ. ಇದು ಪೃಥ್ವಿ ಶಾ ಸೇರಿದಂತೆ ಮೂವರು ಆಟಗಾರರನ್ನು ಆಘಾತಗೊಳಿಸಿತು. ನಂತರ ಡೇವಿಡ್ ಮಿಲ್ಲರ್ ಎರಡು ಕೋಟಿ ಬಿಡ್​ನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದರು. ಮಿಲ್ಲರ್​ ಈ ಹಿಂದೆ ಗುಜರಾತ್ ಟೈಟಾನ್ಸ್ ಪರ ಆಡಿದ್ದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net