ಮುಂಬೈ ಇಂಡಿಯನ್ಸ್​​ಗೆ ಹಾರ್ದಿಕ್ ಪಾಂಡ್ಯ​ ವಾಪಸ್​? ಗುಜರಾತ್​ ಟೈಟಾನ್ಸ್​ಗೆ ಹೊಸ ನಾಯಕ...

hardik mumbai web
Published on

ಮುಂಬೈ: ಐಪಿಎಲ್​ ತಂಡಗಳ ನಡುವೆ ಆಟಗಾರರ ವರ್ಗಾವಣೆ ಮಾತುಕತೆ ನಡೆಯುತ್ತಿರುವ ನಡುವೆ, ಸ್ಟಾರ್​ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​ ತಂಡಕ್ಕೆ ಮರಳಲಿದ್ದಾರೆ ಎಂಬ ಬಲುದೊಡ್ಡ ಸುದ್ದಿಯೊಂದು ಹರಡಿದೆ. ಮುಂಬೈ ತಂಡದಲ್ಲಿ ನಾಯಕರಾಗಿಯೂ ರೋಹಿತ್​ ಶರ್ಮ ಸ್ಥಾನವನ್ನು ಅವರು ತುಂಬಲಿದ್ದಾರೆ. ಗುಜರಾತ್​ ಟೈಟಾನ್ಸ್​ ತಂಡಕ್ಕೆ ಶುಭಮಾನ್​ ಗಿಲ್​ ಹೊಸ ನಾಯಕರಾಗಲಿದ್ದಾರೆ ಎಂದೂ ವರದಿಯಾಗಿದೆ.

ಗುಜರಾತ್​ ಟೈಟಾನ್ಸ್​ ತಂಡ ಈಗಾಗಲೆ ಮುಂದಿನ ನಾಯಕರಾಗಬಲ್ಲ ಶುಭಮಾನ್​ ಗಿಲ್​ರಂಥ ಆಟಗಾರರನ್ನು ಹೊಂದಿದೆ. ಆದರೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಂಥ ಆಟಗಾರರು ಕಾಣಿಸುತ್ತಿಲ್ಲ. ಹೀಗಾಗಿ ಹಾರ್ದಿಕ್​ ಪಾಂಡ್ಯ ಮೇಲೆ ಮುಂಬೈ ಇಂಡಿಯನ್ಸ್ ಒಲವು ತೋರಿದೆ. ಇದಲ್ಲದೆ, ಗುಜರಾತ್ ಟೈಟಾನ್ಸ್ ತಂಡದ ಮ್ಯಾನೇಜ್​ಮೆಂಟ್​ ಮೇಲೆ ಹಾರ್ದಿಕ್​ ಪಾಂಡ್ಯ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಅವರೂ ತಮ್ಮ ಮೂಲ ತಂಡವಾದ ಮುಂಬೈಗೆ ಮರಳಲು ಆಸಕ್ತಿ ತೋರಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಂದು ತಿಳಿದುಕೊಳ್ಳಲು, ಆಟಗಾರರ ರಿಟೇನ್​ ಪಟ್ಟಿ ಅಂತಿಮಗೊಳ್ಳುವ ಭಾನುವಾರದ ಗಡುವಿನವರೆಗೆ ಕಾಯಬೇಕಾಗಿದೆ. ಒಂದು ವೇಳೆ ಇದು ನಿಜವಾದರೆ ಐಪಿಎಲ್​ ಇತಿಹಾಸದಲ್ಲೇ ಅತಿದೊಡ್ಡ ವರ್ಗಾವಣೆ ಎನಿಸಲಿದೆ.

ಮಾರ್ಚ್​ನಲ್ಲೇ ಐಪಿಎಲ್​ ಶುರು?

ಐಪಿಎಲ್​ 17ನೇ ಆವೃತ್ತಿ 2024ರ ಮಾರ್ಚ್​ ಮಧ್ಯಭಾಗದಲ್ಲೇ ಶುರುವಾಗುವ ಸಾಧ್ಯತೆಗಳಿವೆ. ಭಾರತ&ಇಂಗ್ಲೆಂಡ್​ ನಡುವಿನ 5 ಪಂದ್ಯಗಳ ಟೆಸ್ಟ್​ ಸರಣಿ ಮಾರ್ಚ್​ 11ರಂದು ಮುಕ್ತಾಯಗೊಳ್ಳಲಿದ್ದು, ಅದರ ಬೆನ್ನಲ್ಲೇ ಐಪಿಎಲ್​ ಶುರುವಾಗಲಿದ್ದು, ಮೇ 3ನೇ ವಾರದಲ್ಲೇ ಫೈನಲ್​ ನಡೆಯುವ ಸಾಧ್ಯತೆಗಳಿವೆ. ಯಾಕೆಂದರೆ ಜೂನ್​ 4ರಿಂದ ಅಮೆರಿಕ-ವೆಸ್ಟ್​ ಇಂಡೀಸ್​ನಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ.

ಡಿ.9ಕ್ಕೆ ಡಬ್ಲ್ಯುಪಿಎಲ್​ ಹರಾಜು

"ಮಹಿಳಾ ಐಪಿಎಲ್​' ಖ್ಯಾತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ 2ನೇ ಆವೃತ್ತಿಯ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಡಿಸೆಂಬರ್​ 9ರಂದು ಮುಂಬೈನಲ್ಲಿ ನಿಗದಿಯಾಗಿದೆ. ಈ ಬಾರಿ ಹರಾಜಿಗೆ ತಂಡಗಳ ಬಜೆಟ್​ ಮಿತಿಯನ್ನು ತಲಾ 13.5 ಕೋಟಿ ರೂ.ಗೆ ಏರಿಸಲಾಗಿದೆ. ಡಬ್ಲ್ಯುಪಿಎಲ್​ 2ನೇ ಆವೃತ್ತಿ 2024ರ ಫೆಬ್ರವರಿ-ಮಾರ್ಚ್​ನಲ್ಲಿ ನಡೆಯುವ ನಿರೀಕ್ಷೆ ಇದೆ. 5 ತಂಡಗಳು 21 ವಿದೇಶಿಯರ ಸಹಿತ ಒಟ್ಟು 60 ಆಟಗಾರ್ತಿಯರನ್ನು ರಿಟೇನ್​ ಮಾಡಿಕೊಂಡಿದ್ದು, 29 ಆಟಗಾರ್ತಿಯರು ರಿಲೀಸ್​ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net