ಐಪಿಎಲ್ ಪ್ರಾಯೋಜಕತ್ವ ಇಂದು ಅಂತಿಮ, ರೇಸ್‌ನಲ್ಲಿವೆ ಟಾಟಾ, ಅನ್‌ಅಕಾಡೆಮಿ, ಡ್ರೀಮ್​11

ipl bcci
Published on

ನವದೆಹಲಿ: ಚೀನಾ ಮೂಲದ ಮೊಬೈಲ್ ಕಂಪನಿ ವಿವೋ ಜತೆಗಿನ ಒಪ್ಪಂದ ಮುರಿದುಕೊಂಡ ಬಳಿಕ ಖಾಲಿ ಉಳಿದಿರುವ ಐಪಿಎಲ್ 13ನೇ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಹೊಸ ಪ್ರಾಯೋಜಕರ ಹೆಸರನ್ನು ಬಿಸಿಸಿಐ ಮಂಗಳವಾರ ಅಂತಿಮಗೊಳಿಸಲಿದೆ. ಹಾಲಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಬಿಸಿಸಿಐ ಕನಿಷ್ಠ 300 ಕೋಟಿ ರೂಪಾಯಿಯಿಂದ 350 ಕೋಟಿ ರೂಪಾಯಿ ಮೊತ್ತದ ಒಪ್ಪಂದವನ್ನು ನಿರೀಕ್ಷಿಸುತ್ತಿದೆ.

ದೇಶದ ಪ್ರತಿಷ್ಠಿತ ಟಾಟಾ ಗ್ರೂಪ್, ಶೇ. 100 ಭಾರತೀಯ ಹೂಡಿಕೆ ಹೊಂದಿರುವ ಬೆಂಗಳೂರು ಮೂಲದ ಆನ್‌ಲೈನ್ ಶಿಕ್ಷಣ ಸಂಸ್ಥೆ ಅನ್‌ಅಕಾಡೆಮಿ ಮತ್ತು ಚೀನಾ ಕಂಪನಿಯ ಹೂಡಿಕೆಯನ್ನೂ ಹೊಂದಿರುವ ಭಾರತದ ಫ್ಯಾಂಟಸಿ ಸ್ಪೋರ್ಟ್ಸ್ ಆ್ಯಪ್ ಡ್ರೀಮ್ 11 ಈಗಾಗಲೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐಗೆ ಪ್ರಾಥಮಿಕ ಬಿಡ್ ಸಲ್ಲಿಸಿವೆ. ಚೀನಾ ಹೂಡಿಕೆಯನ್ನು ಹೊಂದಿರುವ ಮತ್ತು ಈಗಾಗಲೆ ಟೀಮ್ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವ ಹೊಂದಿರುವ ಬೆಂಗಳೂರು ಮೂಲದ ಬೈಜುಸ್ ಆನ್‌ಲೈನ್ ಶಿಕ್ಷಣ ಸಂಸ್ಥೆ ಕೂಡ ರೇಸ್‌ನಲ್ಲಿದೆ ಎಂದು ಹೇಳಲಾಗುತ್ತಿದೆ. ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಂತಿಮ ಹಂತದ ಬಿಡ್ ಪ್ರಕ್ರಿಯೆ ನಡೆಯಲಿದೆ.

ಲಡಾಖ್ ಗಡಿ ಗಲಾಟೆಯ ಬಳಿಕ ಚೀನಾ ವಿರುದ್ಧ ಜನಾಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಚೀನಾ ಮೂಲದ ಮೊಬೈಲ್ ಕಂಪನಿ ವಿವೋ, ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ತ್ಯಜಿಸಿತ್ತು. ಅದು ಬಿಸಿಸಿಐಗೆ ವಾರ್ಷಿಕ 440 ಕೋಟಿ ರೂ. ಮೊತ್ತ ಪಾವತಿಸುತ್ತಿತ್ತು. ಐಪಿಎಲ್ 13ನೇ ಆವೃತ್ತಿ ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ.

ಒಪ್ಪಂದದ ಅವಧಿ: 4 ತಿಂಗಳು, 13 ದಿನ (2020 ಆಗಸ್ಟ್ 18ರಿಂದ ಡಿಸೆಂಬರ್ 31)

ಗರಿಷ್ಠ ಬಿಡ್‌ಗೆ ಹಕ್ಕು ಖಾತ್ರಿಯಲ್ಲ

ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಗರಿಷ್ಠ ಮೊತ್ತದ ಬಿಡ್ ಸಲ್ಲಿಸಿದವರಿಗೇ ಹಕ್ಕು ಒಲಿಯುವುದು ಖಾತ್ರಿಯಲ್ಲ ಎಂದು ಬಿಸಿಸಿಐ ಈಗಾಗಲೆ ಸ್ಪಷ್ಟಪಡಿಸಿದೆ. ಬಿಡ್ ಸಲ್ಲಿಸಿದ ಕಂಪನಿಯ ಬಗ್ಗೆ ಬಿಸಿಸಿಐಗೆ ಸಮಾಧಾನವಾಗದಿದ್ದರೆ ಅದು ಹಕ್ಕು ನೀಡದಿರುವ ಅಧಿಕಾರವನ್ನೂ ಉಳಿಸಿಕೊಂಡಿದೆ. ಬಿಡ್ ಸಲ್ಲಿಸಿದ ಕಂಪನಿಯ ಹಿನ್ನೆಲೆಯನ್ನೂ ಬಿಸಿಸಿಐ ಪರಿಶೀಲಿಸಲಿದ್ದು, ಭಾರತದ ಕಂಪನಿಗೆ ಹೆಚ್ಚಿನ ಆದ್ಯತೆ ನೀಡಲಿದೆ. ಮತ್ತೆ ಚೀನಾ ಕಂಪನಿ ಜತೆಗೆ ಒಪ್ಪಂದ ಮಾಡಿಕೊಂಡರೆ, ವಿವೋ ಕಂಪನಿಯನ್ನು ಕೈಬಿಟ್ಟ ನಿರ್ಧಾರ ಅಸಂಬದ್ಧವೆನಿಸಲಿದೆ ಎಂಬುದು ಬಿಸಿಸಿಐ ವಾದವಾಗಿದೆ. ಮಧ್ಯವರ್ತಿಗಳಿಗೆ ಬಿಡ್ ಸಲ್ಲಿಸಲು ಅವಕಾಶವಿಲ್ಲ ಎಂದೂ ತಿಳಿಸಿದೆ. ಇದಲ್ಲದೆ ಬಿಡ್ ಸಲ್ಲಿಸುವ ಕಂಪನಿ, ವಾರ್ಷಿಕ 300 ಕೋಟಿ ರೂ. ವಹಿವಾಟು ಹೊಂದಿರಬೇಕು ಎಂಬ ಷರತ್ತನ್ನೂ ಬಿಸಿಸಿಐ ವಿಧಿಸಿದೆ.

ಶೀರ್ಷಿಕೆ ಪ್ರಾಯೋಜಕತ್ವದಲ್ಲಿ ಏನೇನಿದೆ?

ಐಪಿಎಲ್‌ನ ಇತರ ಪ್ರಾಯೋಜಕತ್ವಕ್ಕಿಂತ ಶೀರ್ಷಿಕೆ ಪ್ರಾಯೋಜಕತ್ವ ಭಿನ್ನವಾದುದು. ಈ ಹಕ್ಕು ಪಡೆದುಕೊಳ್ಳುವ ಕಂಪನಿಯ ಹೆಸರು ‘ಐಪಿಎಲ್’ ಹೆಸರಿನ ಜತೆಗೆ ಬರಲಿದೆ. ಈ ಹಿಂದೆ ‘ಡಿಎಲ್‌ಎ್ ಐಪಿಎಲ್, ಪೆಪ್ಸಿ ಐಪಿಎಲ್, ವಿವೋ ಐಪಿಎಲ್’ ಎಂದು ಕರೆಸಿಕೊಂಡಂತೆ ಈ ವರ್ಷ ಹೊಸ ಕಂಪನಿಯ ಹೆಸರು ಐಪಿಎಲ್ ಜತೆ ಸೇರಲಿದೆ. ಇನ್ನು ಶೀರ್ಷಿಕೆ ಪ್ರಾಯೋಜಕತ್ವ ಪಡೆಯುವ ಕಂಪನಿಯ ಲಾಂಛನ ಪ್ರತಿ ತಂಡಗಳ ಜೆರ್ಸಿಯಲ್ಲೂ ಮುದ್ರಣಗೊಳ್ಳಲಿದೆ. ಅಲ್ಲದೆ ಪಂದ್ಯದ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದ ಹಿನ್ನೆಲೆಯಲ್ಲಿ ಶೀರ್ಷಿಕೆ ಪ್ರಾಯೋಜಕತ್ವ ಕಂಪನಿಯ ಲಾಂಛನ ಪ್ರಮುಖವಾಗಿ ಕಾಣಿಸಲಿದೆ. ಟೂರ್ನಿಯ ವೇಳೆ ವಿವಿಧ ಬ್ರಾಂಡಿಂಗ್ ಅವಕಾಶವೂ ಲಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net