

ನವದೆಹಲಿ: ಬಹುನಿರೀಕ್ಷಿತ ಐಪಿಎಲ್ 13ನೇ ಆವೃತ್ತಿಯ ವೇಳಾಪಟ್ಟಿ ಬಿಡುಗಡೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿರುವ ಟೂರ್ನಿಗೆ ಇನ್ನು ಕೇವಲ 2 ವಾರ ಬಾಕಿ ಇರುವ ನಡುವೆ, ಟೂರ್ನಿಯ ವೇಳಾಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಲಾಗುವುದು ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಶನಿವಾರ ಖಚಿತಪಡಿಸಿದ್ದಾರೆ.
ಈ ಮುನ್ನ ಟೂರ್ನಿಯ ವೇಳಾಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು. ಆದರೆ ನಾನಾ ಕಾರಣಗಳಿಂದಾಗಿ ಶುಕ್ರವಾರ ವೇಳಾಪಟ್ಟಿ ಬಿಡುಗಡೆ ಆಗಿರಲಿಲ್ಲ. ಇದರಿಂದಾಗಿ ಅಭಿಮಾನಿಗಳು ತೀವ್ರ ನಿರಾಸೆ ಅನುಭವಿಸಿದ್ದರು.
ಆದರೆ ಭಾನುವಾರ ಖಂಡಿತವಾಗಿಯೂ ವೇಳಾಪಟ್ಟಿ ಬಿಡುಗಡೆ ಆಗಲಿದೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ಟೂರ್ನಿಯಲ್ಲಿ ಆಡಲಿರುವ ಎಲ್ಲ ತಂಡಗಳು ಈಗಾಗಲೆ ಯುಎಇ ತಲುಪಿದ್ದು, ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿವೆ. ಕರೊನಾ ಆಘಾತ ಎದುರಿಸಿದ್ದ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಕೊನೆಯದಾಗಿ ಶುಕ್ರವಾರವಷ್ಟೇ ಅಭ್ಯಾಸ ಆರಂಭಿಸಿದೆ.
ಈ ಮುನ್ನ ಅಬುಧಾಬಿಯ ಕರೊನಾ ಪ್ರಕರಣಗಳ ಏರಿಕೆಯಿಂದಾಗಿ ಐಪಿಎಲ್ ವೇಳಾಪಟ್ಟಿ ಅಂತಿಮಗೊಳಿಸಲು ಹಿನ್ನಡೆಯಾಗಿತ್ತು. ಬಳಿಕ ಸ್ಥಳೀಯ ಸರ್ಕಾರದಿಂದ ಹಸಿರು ನಿಶಾನೆ ದೊರೆತ ಬಳಿಕ ಸಿಎಸ್‌ಕೆ ತಂಡದ ಕರೊನಾ ಪ್ರಕರಣಗಳಿಂದಲೂ ಹಿನ್ನಡೆಯಾಗಿತ್ತು. ಅಲ್ಲದೆ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಆಡುವ ಬಗ್ಗೆಯೂ ಅನುಮಾನ ಎದ್ದಿತ್ತು. ಆದರೆ ಇದೀಗ ಕೊನೆಯದಾಗಿ ಅಭ್ಯಾಸ ಆರಂಭಿಸಿರುವ ನಡುವೆಯೂ ಸಿಎಸ್‌ಕೆ ತಂಡ ಉದ್ಘಾಟನಾ ಪಂದ್ಯದಲ್ಲಿ ಆಡಲು ಸಿದ್ಧವಾಗಿದೆ.
53 ದಿನಗಳ ಟೂರ್ನಿಯಲ್ಲಿ 60 ಪಂದ್ಯಗಳು ಶಾರ್ಜಾ, ಅಬುಧಾಬಿ ಮತ್ತು ದುಬೈನಲ್ಲಿ ನಡೆಯಲಿವೆ. ಎಂದಿನಂತೆ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಅಗ್ರ 4 ತಂಡಗಳು ಪ್ಲೇಆಫ್ ಹಂತಕ್ಕೇರಲಿವೆ.