PHOTO | ಐಪಿಎಲ್ ವೇಳಾಪಟ್ಟಿಗೆ ಕಾದು ಕಾದು ಸುಸ್ತಾದ ಕ್ರಿಕೆಟ್ ಪ್ರೇಮಿಗಳಿಂದ ಟ್ರೋಲ್!

ipl schedule troll
Published on

ನವದೆಹಲಿ: ಬಹುನಿರೀಕ್ಷಿತ ಐಪಿಎಲ್ 13ನೇ ಆವೃತ್ತಿಗಾಗಿ ಈಗಾಗಲೆ ಎಲ್ಲ ತಂಡಗಳು ಯುಎಇಗೆ ತೆರಳಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದು, ಟೂರ್ನಿಗೆ 2 ವಾರಗಳ ಅಂತರವಷ್ಟೇ ಬಾಕಿ ಉಳಿದಿದ್ದರೂ ವೇಳಾಪಟ್ಟಿ ಮಾತ್ರ ಇನ್ನೂ ಪ್ರಕಟಗೊಂಡಿಲ್ಲ. ಕೊನೆಗೂ ಶುಕ್ರವಾರ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ ತಿಳಿಸಿದ್ದರು. ಆದರೆ ಕ್ರಿಕೆಟ್ ಪ್ರೇಮಿಗಳು ಶುಕ್ರವಾರ ಐಪಿಎಲ್ ವೇಳಾಪಟ್ಟಿಗಾಗಿ ದಿನವಿಡೀ ಕಾದರೂ, ವೇಳಾಪಟ್ಟಿ ಬಿಡುಗಡೆಯಾಗದೆ ನಿರಾಸೆ ಅನುಭವಿಸಿದ್ದರು. ಈ ನಡುವೆ ವೇಳಾಪಟ್ಟಿಗಾಗಿ ಕಾದು ಕಾದು ಸುಸ್ತಾದ ಕ್ರಿಕೆಟ್ ಪ್ರೇಮಿಗಳು, ವಿವಿಧ ಮೀಮ್ಸ್‌ಗಳ ಮೂಲಕ ಟ್ರೋಲ್ ಮಾಡಿ ಗಮನ ಸೆಳೆದಿದ್ದಾರೆ.

ಶುಕ್ರವಾರವಿಡೀ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ವೇಳಾಪಟ್ಟಿ ಈಗ ಬಿಡುಗಡೆಯಾಗಲಿದೆ, ಮತ್ತೆ ಬಿಡುಗಡೆಯಾಗಲಿದೆ ಎಂದು ಕಾದಿದ್ದೇ ಕಾದಿದ್ದು. ಸಾಮಾಜಿಕ ಜಾಲತಾಣ, ಅಂತರ್ಜಾಲಗಳಲ್ಲಿ ಪದೇ ಪದೇ ಹುಡುಕಾಡಿದರೂ, ವೇಳಾಪಟ್ಟಿ ಸಿಗದೆ ನಿರಾಸೆ ಅನುಭವಿಸಿದರು. ಇದೇ ವೇಳೆ ಕೆಲ ನಕಲಿ ವೇಳಾಪಟ್ಟಿಗಳು ಕೂಡ ಕ್ರಿಕೆಟ್ ಪ್ರೇಮಿಗಳಲ್ಲಿ ಗೊಂದಲ ಮೂಡಿಸಿದವು.

ಐಪಿಎಲ್ ವೇಳಾಪಟ್ಟಿಗೆ ಕಾದು ನಿರಾಸೆ ಅನುಭವಿಸಿದ ಕ್ರಿಕೆಟ್ ಪ್ರೇಮಿಗಳು, ಮಿಸ್ಟರ್ ಬೀನ್ ಮತ್ತು ಸಲ್ಮಾನ್ ಖಾನ್ ಸಿನಿಮಾದ ದೃಶ್ಯಗಳ ಚಿತ್ರದೊಂದಿಗೆ ಟ್ರೋಲ್ ಮಾಡಿದ್ದಾರೆ. ಇದೀಗ ಭಾನುವಾರ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಶನಿವಾರ ತಿಳಿಸಿದ್ದಾರೆ. ಈ ಬಾರಿಯಾದರೂ, ನಿರಾಸೆಗೊಳಿಸದೆ ಭಾನುವಾರವೇ ವೇಳಾಪಟ್ಟಿ ಪ್ರಕಟಗೊಳ್ಳಲಿ ಎಂದು ಕ್ರಿಕೆಟ್ ಪ್ರೇಮಿಗಳು ಪ್ರಾರ್ಥಿಸುವಂತಾಗಿದೆ.

ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ಟೂರ್ನಿ ನಿಗದಿಯಾಗಿದ್ದು, ಈ ಹಿಂದೆ ನಿಶ್ಚಯಿಸಿದ್ದಂತೆಯೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳ ನಡುವೆಯೇ ಉದ್ಘಾಟನಾ ಪಂದ್ಯ ನಡೆಯುವ ನಿರೀಕ್ಷೆ ಇದೆ. ಈ ಮುನ್ನ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಬದಲಿಗೆ ಆರ್‌ಸಿಬಿ ತಂಡ ಕಣಕ್ಕಿಳಿಯಲಿದೆ ಎಂದು ವರದಿಯಾಗಿತ್ತು. ಸಿಎಸ್‌ಕೆ ತಂಡದ 13 ಸದಸ್ಯರಿಗೆ ಕರೊನಾ ಸೋಂಕು ದೃಢಪಟ್ಟಿದ್ದು ಇದಕ್ಕೆ ಕಾರಣ.

ಇನ್ನು ಅಬುಧಾಬಿ ನಗರ ಪ್ರವೇಶಕ್ಕೆ ಕೋವಿಡ್-19 ಪರೀಕ್ಷೆ ಕಡ್ಡಾಯ ಮಾಡಿದ್ದ ಕಾರಣದಿಂದಲೂ ವೇಳಾಪಟ್ಟಿ ಅಂತಿಮಗೊಳಿಸಲು ಹಿನ್ನಡೆಯಾಗಿತ್ತು. ಆದರೆ ಇದೀಗ ಅಬುಧಾಬಿ ಸರ್ಕಾರ ಐಪಿಎಲ್‌ಗೆ ವಿನಾಯಿತಿ ನೀಡಿದ್ದು, ಟೂರ್ನಿ ಯೋಜನೆಯಂತೆಯೇ ಅರಬ್ ರಾಷ್ಟ್ರದ 3 ತಾಣಗಳಲ್ಲಿ ನಡೆಯಲಿದೆ.

53 ದಿನಗಳ ಟೂರ್ನಿಯಲ್ಲಿ 60 ಪಂದ್ಯಗಳು ಶಾರ್ಜಾ, ಅಬುಧಾಬಿ ಮತ್ತು ದುಬೈನಲ್ಲಿ ನಡೆಯಲಿವೆ. ಎಂದಿನಂತೆ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಅಗ್ರ 4 ತಂಡಗಳು ಪ್ಲೇಆಫ್​ ಹಂತಕ್ಕೇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net