

ಸೌಥಾಂಪ್ಟನ್: ಕರೊನಾ ಕಾಲದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ನಿರಾಸೆ ಅನುಭವಿಸಿದ್ದರೆ, ಆತಿಥೇಯ ಇಂಗ್ಲೆಂಡ್ ತಂಡ ಗೆಲುವಿನ ಓಟ ಮುಂದುವರಿಸಿದೆ. ರೋಸ್ ಬೌಲ್ ಮೈದಾನದ ಬಯೋ-ಬಬಲ್‌ನಲ್ಲಿ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಡೇವಿಡ್ ಮಲಾನ್ (66 ರನ್, 43 ಎಸೆತ, 5 ಬೌಂಡರಿ, 3 ಸಿಕ್ಸರ್) ಉಪಯುಕ್ತ ಕೊಡುಗೆಯ ನೆರವಿನಿಂದ ಆಸ್ಟ್ರೇಲಿಯಾ ತಂಡವನ್ನು 2 ರನ್‌ಗಳಿಂದ ರೋಚಕವಾಗಿ ಮಣಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡ 7 ವಿಕೆಟ್‌ಗೆ 162 ರನ್ ಗಳಿಸಿತು. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ 6 ವಿಕೆಟ್‌ಗೆ 160 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೊನೇ ಓವರ್‌ನಲ್ಲಿ ಆಸೀಸ್ ಗೆಲುವಿಗೆ 15 ರನ್ ಬೇಕಾಗಿತ್ತು. ಆದರೆ ಟಾಮ್ ಕರ‌್ರನ್ ಎಸೆದ ಕೊನೇ ಓವರ್‌ನಲ್ಲಿ ಆಸೀಸ್ 12 ರನ್ ಕಸಿಯಲಷ್ಟೇ ಶಕ್ತವಾಯಿತು. ಇದಕ್ಕೆ ಮುನ್ನ ಕೊನೇ 2 ಓವರ್‌ಗಳಲ್ಲಿ 19 ರನ್ ಬೇಕಾಗಿದ್ದಾಗ ಕ್ರಿಸ್ ಜೋರ್ಡನ್ ಕೇವಲ 4 ರನ್ ಬಿಟ್ಟುಕೊಟ್ಟು 1 ವಿಕೆಟ್ ಕೂಡ ಕಬಳಿಸುವ ಮೂಲಕ ಆಸೀಸ್‌ಗೆ ಆಘಾತ ನೀಡಿದ್ದರು.
ಆರಂಭಿಕರಾದ ಎಡಗೈ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (58 ರನ್, 47 ಎಸೆತ, 4 ಬೌಂಡರಿ) ಮತ್ತು ನಾಯಕ ಆರನ್ ಫಿಂಚ್ (46 ರನ್, 32 ಎಸೆತ, 7 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್‌ಗೆ 11 ಓವರ್‌ಗಳಲ್ಲಿ 98 ರನ್ ಕೂಡಿಹಾಕುವ ಮೂಲಕ ಹಾಕಿಕೊಟ್ಟ ಭದ್ರ ಬುನಾದಿಯ ನೆರವಿನಿಂದ ಆಸೀಸ್ ಗೆಲುವಿನತ್ತ ಮುನ್ನಡೆದಿತ್ತು. ಆದರೆ ಬಳಿಕ 14 ರನ್‌ಗಳ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡ ಆಸೀಸ್ ಕೊನೇ 3 ಓವರ್‌ಗಳಲ್ಲಿ 26 ರನ್ ಕಸಿಯುವ ಸವಾಲು ಎದುರಿಸಿತು. ಆಗ ಮಾರ್ನಸ್ ಸ್ಟೋಯಿನಿಸ್‌ಗೆ (23*) ಆಸೀಸ್ ಬಾಲಂಗೋಚಿಗಳಿಂದ ಉತ್ತಮ ಸಾಥ್ ಸಿಗಲಿಲ್ಲ. ಮತ್ತೊಂದೆಡೆ ಇಂಗ್ಲೆಂಡ್ ವೇಗಿಗಳು ಬಿಗಿ ದಾಳಿಯ ಮೂಲಕ ಆಸೀಸ್‌ಗೆ ಕಡಿವಾಣ ಹಾಕಿದರು.
ಇದಕ್ಕೆ ಮುನ್ನ ಇಂಗ್ಲೆಂಡ್ ತಂಡಕ್ಕೆ ಡೇವಿಡ್ ಮಲಾನ್ ಜತೆಗೆ ಆರಂಭಿಕ ಜೋಸ್ ಬಟ್ಲರ್ (44) ಉತ್ತಮ ಬೆಂಬಲ ಒದಗಿಸಿದ್ದರು. ಆದರೆ ತಂಡದ ಮಧ್ಯಮ ಕ್ರಮಾಂಕದಲ್ಲಿ ಟಾಮ್ ಬಾಂಟನ್ (8), ನಾಯಕ ಇವೊಯಿನ್ ಮಾರ್ಗನ್ (5) ಮತ್ತು ಮೊಯಿನ್ ಅಲಿ (2) ವೈಲ್ಯ ಕಂಡರು. ಆಸೀಸ್ ಪರ ಸ್ಪಿನ್ನರ್‌ಗಳಾದ ಆಶ್ಟನ್ ಅಗರ್ (32ಕ್ಕೆ 2), ಗ್ಲೆನ್ ಮ್ಯಾಕ್ಸ್‌ವೆಲ್ (14ಕ್ಕೆ 2) ಮತ್ತು ವೇಗಿ ಕೇನ್ ರಿಚರ್ಡ್‌ಸನ್ (13ಕ್ಕೆ 2) ಆಂಗ್ಲರಿಗೆ ಕಡಿವಾಣ ಹಾಕಿದರು.
ಸರಣಿಯ 2ನೇ ಪಂದ್ಯ ಭಾನುವಾರ ನಡೆಯಲಿದ್ದು, ಭಾರತೀಯ ಕಾಲಮಾನ ಪ್ರಕಾರ ಸಂಜೆ 6.45ಕ್ಕೆ ಆರಂಭಗೊಳ್ಳಲಿದೆ. ಸೋನಿ ಸಿಕ್ಸ್‌ನಲ್ಲಿ ನೇರಪ್ರಸಾರ ಕಾಣಲಿದೆ.
ಇಂಗ್ಲೆಂಡ್: 7 ವಿಕೆಟ್‌ಗೆ 162 (ಬಟ್ಲರ್ 44, ಬೇರ್‌ಸ್ಟೋ 8, ಮಲಾನ್ 66, ಬ್ಯಾಂಟನ್ 8, ಮಾರ್ಗನ್ 5, ಮೊಯಿನ್ ಅಲಿ 2, ಟಾಮ್ ಕರ‌್ರನ್ 6, ಜೋರ್ಡನ್ 14*, ಮ್ಯಾಕ್ಸ್‌ವೆಲ್ 14ಕ್ಕೆ 2, ಕೇನ್ ರಿಚರ್ಡ್‌ಸನ್ 13ಕ್ಕೆ 2, ಅಗರ್ 32ಕ್ಕೆ 2, ಕಮ್ಮಿನ್ಸ್ 24ಕ್ಕೆ 1), ಆಸ್ಟ್ರೇಲಿಯಾ: 6 ವಿಕೆಟ್‌ಗೆ 160 (ವಾರ್ನರ್ 58, ಫಿಂಚ್ 46, ಸ್ಮಿತ್ 18, ಮ್ಯಾಕ್ಸ್‌ವೆಲ್ 1, ಸ್ಟೋಯಿನಿಸ್ 23*, ಕ್ಯಾರಿ 1, ಅಗರ್ 4, ಆರ್ಚರ್ 33ಕ್ಕೆ 2, ಆದಿಲ್ ರಶೀ 29ಕ್ಕೆ 2, ಮಾರ್ಕ್ ವುಡ್ 31ಕ್ಕೆ 1). ಪಂದ್ಯಶ್ರೇಷ್ಠ: ಡೇವಿಡ್ ಮಲಾನ್.