ಮುಂಬೈ: ಸ್ಫೋಟಕ ಬ್ಯಾಟರ್‌ಗಳು ಮತ್ತು ಬಲಿಷ್ಠ ಬೌಲಿಂಗ್ ವಿಭಾಗವನ್ನು ಒಳಗೊಂಡಿರುವ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಐಪಿಎಲ್-15ರಲ್ಲಿ ಗುರುವಾರ ಮುಖಾಮುಖಿ ಆಗಲಿವೆ. ಉಭಯ ತಂಡಗಳೂ ಇದುವರೆಗೆ ಆಡಿದ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 1ರಲ್ಲಿ ಸೋತಿದ್ದು, ರನ್‌ರೇಟ್ ಲೆಕ್ಕಾಚಾರದಲ್ಲಿ ಮಾತ್ರ ವ್ಯತ್ಯಾಸ ಹೊಂದಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಲಿದೆ.
ಆರ್‌ಸಿಬಿ ವಿರುದ್ಧ ಸೋತ ಬಳಿಕ ಕಳೆದ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್ ವಿರುದ್ಧ ರಾಜಸ್ಥಾನ ತಂಡ ಗೆಲುವಿನ ಲಯಕ್ಕೆ ಮರಳಿತ್ತು. ಮತ್ತೊಂದೆಡೆ ಗುಜರಾತ್ ತಂಡ ಹ್ಯಾಟ್ರಿಕ್ ಗೆಲುವಿನ ಬಳಿಕ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ಧ ಆಘಾತ ಎದುರಿಸಿತ್ತು. ವೇಗ ಮತ್ತು ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಉಭಯ ತಂಡಗಳು ಬಲಿಷ್ಠವಾಗಿದ್ದು, ಈ ಪಂದ್ಯದಲ್ಲಿ ಆಟಗಾರರ ನಡುವೆ ಕುತೂಹಲಕಾರಿ ಮುಖಾಮುಖಿಗಳು ಏರ್ಪಡಲಿವೆ.
ಗುಜರಾತ್‌ಗೆ ಬ್ಯಾಟಿಂಗ್ ಕಳವಳ
ಗುಜರಾತ್ ಬೌಲಿಂಗ್ ವಿಭಾಗ ರಾಜಸ್ಥಾನಕ್ಕಿಂತ ಕಡಿಮೆ ಏನೂ ಇಲ್ಲ. ರಶೀದ್ ಖಾನ್, ಮೊಹಮದ್ ಶಮಿ, ಲಾಕಿ ರ್ಗ್ಯುಸನ್ ಜತೆಗೆ ಹಾರ್ದಿಕ್ ಪಾಂಡ್ಯರಂಥ ಸ್ಟಾರ್ ಬೌಲರ್‌ಗಳಿದ್ದಾರೆ. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಶುಭಮಾನ್ ಗಿಲ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಹೊರತಾಗಿ ಇತರ ಬ್ಯಾಟರ್‌ಗಳಿಂದಲೂ ಸ್ಥಿರ ನಿರ್ವಹಣೆಯ ಅಗತ್ಯವಿದೆ. ಗಿಲ್ ಬೇಗನೆ ಔಟಾದಾಗ ಇತರರು ತಂಡಕ್ಕೆ ಆಸರೆ ಆಗಬೇಕಿದೆ. ಸನ್‌ರೈಸರ್ಸ್ ವಿರುದ್ಧ ಒಂದೆಡೆ ಹಾರ್ದಿಕ್ ಪಾಂಡ್ಯ ಕ್ರೀಸ್‌ಗೆ ಅಂಟಿಕೊಂಡಿದ್ದರೂ ನಿರೀಕ್ಷಿತ ವೇಗದಲ್ಲಿ ರನ್ ಹರಿದಿರಲಿಲ್ಲ. ಡೇವಿಡ್ ಮಿಲ್ಲರ್‌ರಿಂದ ತಂಡ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದೆ.
ರಾಯಲ್ಸ್‌ಗೆ ಬೌಲಿಂಗ್ ದೊಡ್ಡ ಅಸ
ರಾಜಸ್ಥಾನ ತಂಡದ ಬೌಲಿಂಗ್ ವಿಭಾಗದ ಟೂರ್ನಿಯ ಉಳಿದೆಲ್ಲ ತಂಡಗಳಿಗಿಂತ ಬಲಿಷ್ಠ ಮತ್ತು ಅನುಭವಿಯಾಗಿದೆ. ವೇಗಿ ಟ್ರೆಂಟ್ ಬೌಲ್ಟ್, ಸ್ಪಿನ್ನರ್‌ಗಳಾದ ಆರ್. ಅಶ್ವಿನ್, ಯಜುವೇಂದ್ರ ಚಾಹಲ್‌ಗೆ ಯುವ ವೇಗಿಗಳಾದ ಪ್ರಸಿದ್ಧಕೃಷ್ಣ ಮತ್ತು ಕುಲದೀಪ್ ಸೇನ್ ಸಮರ್ಥ ಸಾಥ್ ನೀಡುತ್ತಿದ್ದಾರೆ. ನವದೀಪ್ ಸೈನಿ ಬದಲಿಗೆ ಅವಕಾಶ ಪಡೆದ ಕುಲದೀಪ್ ಸೇನ್ ಕಳೆದ ಪಂದ್ಯದ ಕೊನೇ ಓವರ್‌ನಲ್ಲಿ 15 ರನ್ ರಕ್ಷಿಸಿಕೊಳ್ಳುವ ಮೂಲಕ ಮಿಂಚಿದ್ದರು. ಬ್ಯಾಟಿಂಗ್‌ನಲ್ಲಿ ಬಟ್ಲರ್, ಹೆಟ್ಮೆಯರ್ ಬಲ ತುಂಬಿದ್ದು, ಅವರಿಗೆ ನಾಯಕ ಸಂಜು ಸ್ಯಾಮ್ಸನ್, ದೇವದತ್ ಪಡಿಕಲ್‌ರಿಂದ ಇನ್ನಷ್ಟು ಬೆಂಬಲದ ಅಗತ್ಯವಿದೆ.
ಟೀಮ್ ನ್ಯೂಸ್:
ರಾಜಸ್ಥಾನ ರಾಯಲ್ಸ್: ಗೆಲುವಿನ ಲಯದಲ್ಲಿರುವ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಆದರೂ ಸಿಕ್ಕ ಅವಕಾಶ ಬಳಸಿಕೊಳ್ಳದ ರಸೀ ವಾನ್ ಡರ್ ಡುಸೆನ್ ಬದಲಿಗೆ ಜೇಮ್ಸ್ ನೀಶಾಮ್ ಅಥವಾ ಡೆರಿಲ್ ಮಿಚೆಲ್ ಆಡಿದರೂ ಅಚ್ಚರಿ ಇಲ್ಲ.
ಗುಜರಾತ್ ಟೈಟಾನ್ಸ್: ಮ್ಯಾಥ್ಯೂ ವೇಡ್ ಆರಂಭಿಕರಾಗಿ ನಿರೀಕ್ಷೆ ತಕ್ಕ ನಿರ್ವಹಣೆ ತೋರುತ್ತಿಲ್ಲ. ಹೀಗಾಗಿ ಅವರ ಬದಲು ಭಾರತೀಯ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಕಣಕ್ಕಿಳಿಯಬಹುದು. ಆರಂಭಿಕರಾಗಿಯೂ ಅವರು ಶುಭಮಾನ್ ಗಿಲ್‌ಗೆ ಜೋಡಿಯಾಗಬಹುದು. ಕಳೆದ ಪಂದ್ಯದಲ್ಲಿ ದುಬಾರಿಯಾದ ವೇಗಿ ಲಾಕಿ ಫರ್ಗ್ಯುಸನ್ ಬದಲಿಗೆ ಅಲ್ಜಾರಿ ಜೋಸೆಫ್ ಆಡಬಹುದು.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
1: ರಶೀದ್ ಖಾನ್ ಇನ್ನೊಂದು ವಿಕೆಟ್ ಕಬಳಿಸಿದರೆ ಐಪಿಎಲ್‌ನಲ್ಲಿ 100 ವಿಕೆಟ್ ಪೂರೈಸಿದ 4ನೇ ವಿದೇಶಿ ಬೌಲರ್ ಎನಿಸಲಿದ್ದಾರೆ. ಡ್ವೆನ್ ಬ್ರಾವೊ (174), ಲಸಿತ್ ಮಾಲಿಂಗ (170), ಸುನೀಲ್ ನಾರಾಯಣ್ (147) ಹಿಂದಿನ ಸಾಧಕರು.