ಆರ್‌ಸಿಬಿ ಪರ ದಿನೇಶ್ ಕಾರ್ತಿಕ್ ಶೈನಿಂಗ್; ಸ್ಕ್ವಾಷ್‌ನಲ್ಲಿ ಪತ್ನಿ ದೀಪಿಕಾ ಭರ್ಜರಿ ಯಶಸ್ಸು!

karthik deepika web
Published on

ನವದೆಹಲಿ: ಐಪಿಎಲ್ 15ನೇ ಆವೃತ್ತಿಯಲ್ಲಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಆರ್‌ಸಿಬಿ ತಂಡದ ಪರ ಫಿನಿಷರ್ ಪಾತ್ರದಲ್ಲಿ ಭರ್ಜರಿ ನಿರ್ವಹಣೆ ತೋರುತ್ತಿರುವ ನಡುವೆ ಅತ್ತ ಅವರ ಪತ್ನಿ ದೀಪಿಕಾ ಪಲ್ಲಿಕಲ್ ಕೂಡ ವಿಶ್ವ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದಾರೆ. ತಾಯ್ತನದ ಬಿಡುವಿನ ಬಳಿಕ ಮರಳಿ ಕಣಕ್ಕಿಳಿದಿರುವ 30 ವರ್ಷದ ದೀಪಿಕಾ ಪಲ್ಲಿಕಲ್ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ವಿಶ್ವ ಸ್ಕ್ವಾಷ್‌ನಲ್ಲಿ ಅವಳಿ ಸ್ವರ್ಣ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಸೌರವ್ ಘೋಷಾಲ್ ಜತೆಗೂಡಿ ಮಿಶ್ರ ಡಬಲ್ಸ್ ಮತ್ತು ಗೆಳತಿ ಜೋಶ್ನಾ ಚಿನ್ನಪ್ಪ ಜತೆಗೂಡಿ ಮಹಿಳಾ ಡಬಲ್ಸ್ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ. ದೀಪಿಕಾ-ಸೌರವ್ ಜೋಡಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಅಲಿಸನ್ ವಾಟರ್ಸ್‌-ಆಂಡ್ರಿಯನ್ ವಾಲ್ಲರ್ ವಿರುದ್ಧ 11-6, 11-8ರಿಂದ ಗೆಲುವು ದಾಖಲಿಸಿತು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವಳಿ ಗಂಡು ಮಕ್ಕಳ ತಾಯಿಯಾಗಿದ್ದ ದೀಪಿಕಾ, ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಸಾರಾ ಜೇನ್ ಪೆರ‌್ರಿ ಮತ್ತು ಅಲಿಸನ್ ವಾಟರ್ಸ್‌ ಜೋಡಿಯನ್ನು ಮಣಿಸಿದರು. 4 ವರ್ಷಗಳ ಬಿಡುವಿನ ಬಳಿಕ ಸ್ಕ್ವಾಷ್ ಸ್ಪರ್ಧೆಯಲ್ಲಿ ಕಾಣಿಸಿಕೊಂಡಿರುವ ದೀಪಿಕಾ ಯಶಸ್ವಿ ಪುನರಾಗಮನವನ್ನೂ ಕಂಡಿದ್ದು, ಮುಂಬರುವ ಏಷ್ಯನ್-ಕಾಮನ್ವೆಲ್ತ್ ಗೇಮ್ಸ್‌ಗೂ ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net