ಮಾಸಾಂತ್ಯಕ್ಕೆ ಐಪಿಎಲ್​ ರಿಟೇನ್​ ನಿಯಮಾವಳಿ ಪ್ರಕಟ; ಧೋನಿ, ಸುನೀಲ್​ ನಾರಾಯಣ್​ಗೆ ಶುಭಸುದ್ದಿ!?

web ipl
Published on

ಮುಂಬೈ: ಐಪಿಎಲ್​ 18ನೇ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಆಟಗಾರರ ರಿಟೇನ್​ ನಿಯಮಾವಳಿಯನ್ನು ಬಿಸಿಸಿಐ ಮಾಸಾಂತ್ಯದಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ. ಎಲ್ಲ 10 ತಂಡಗಳು ಆಟಗಾರರ ರಿಟೇನ್​ ಪಟ್ಟಿ ಪ್ರಕಟಿಸಲು ನವೆಂಬರ್​ 15ರವರೆಗೆ ಸಮಯಾವಕಾಶ ಕಲ್ಪಿಸುವ ಸಾಧ್ಯತೆ ಇದ್ದು, ಡಿಸೆಂಬರ್​ನಲ್ಲಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ರೈಟ್​ ಟು ಮ್ಯಾಚ್​ (ಆರ್​ಟಿಎಂ) ಕಾರ್ಡ್​ ಬಳಕೆಗೂ ಅವಕಾಶ ಕಲ್ಪಿಸಲಾಗುವುದು ಎನ್ನಲಾಗಿದೆ.

ಈ ಹಿಂದಿನ ಯೋಜನೆಯ ಅನ್ವಯ ಆಗಸ್ಟ್​ ಅಂತ್ಯದಲ್ಲೇ ಆಟಗಾರರ ರಿಟೇನ್​ ನಿಯಮಾವಳಿ ಪ್ರಕಟಗೊಳ್ಳಬೇಕಾಗಿತ್ತು. ಆದರೆ ಈ ನಿಯಮಾವಳಿ ಅಂತಿಮಗೊಳಿಸುವ ಪ್ರಕ್ರಿಯೆ ವಿಳಂಬವಾಗಿದ್ದು, ಇನ್ನೂ ಎರಡು ವಾರ ಬೇಕಾಗಬಹುದು. ಹೀಗಾಗಿ ಸೆಪ್ಟೆಂಬರ್​ 29ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯ ಸಮಯದಲ್ಲೇ ರಿಟೇನ್​ ನಿಯಮಾವಳಿ ಪ್ರಕಟವಾಗುವ ಸಾಧ್ಯತೆ ಇದೆ.

ಬಿಸಿಸಿಐ ಪ್ರತಿ ತಂಡಕ್ಕೆ ಗರಿಷ್ಠ 4 ಆಟಗಾರರ ರಿಟೇನ್​ಗೆ ಅವಕಾಶ ನೀಡಬಹುದು ಎನ್ನಲಾಗಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿ 5 ವರ್ಷ ಕಳೆದಿರುವ ಆಟಗಾರರನ್ನು "ಅನ್​ಕ್ಯಾಪ್ಡ್​' (ಅಂತಾರಾಷ್ಟ್ರೀಯ ಪಂದ್ಯ ಆಡದ ಆಟಗಾರರು) ಎಂದು ಪರಿಗಣಿಸಿ, ಕಡಿಮೆ ಮೊತ್ತಕ್ಕೆ ರಿಟೇನ್​ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಇದು ಚೆನ್ನೈ ಸೂಪರ್​ಕಿಂಗ್ಸ್​ಗೆ ಎಂಎಸ್​ ಧೋನಿ ಮತ್ತು ಹಾಲಿ ಚಾಂಪಿಯನ್​ ಕೋಲ್ಕತ ನೈಟ್​ರೈಡರ್ಸ್​ಗೆ ಸುನೀಲ್​ ನಾರಾಯಣ್​ರನ್ನು ರಿಟೇನ್​ ಮಾಡಿಕೊಳ್ಳಲು ನೆರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net