ಡೆಕಾಕಾರ್ನ್​ ಸಾಧನೆ ಮಾಡಿದ ಐಪಿಎಲ್​ ಬ್ರಾಂಡ್​ ಮೌಲ್ಯ! ಏನಿದು ಡೆಕಾಕಾರ್ನ್​?

ipl web
Published on

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿ ಎನಿಸಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ನ (ಐಪಿಎಲ್​) ಬ್ರಾಂಡ್​ ಮೌಲ್ಯ 10 ಬಿಲಿಯನ್​ ಡಾಲರ್​ ಮೈಲಿಗಲ್ಲು ದಾಟುವುದರೊಂದಿಗೆ "ಡೆಕಾಕಾರ್ನ್​' ಮಾನ್ಯತೆ ಪಡೆದುಕೊಂಡಿದೆ. 2023ರಲ್ಲಿ ಐಪಿಎಲ್​ ಬ್ರಾಂಡ್​ ಮೌಲ್ಯ ಶೇ. 28 ಪ್ರಗತಿ ಕಂಡಿದ್ದು, 89,263 ಕೋಟಿ ರೂಪಾಯಿ (10.7 ಬಿಲಿಯನ್​ ಡಾಲರ್​) ಬ್ರಾಂಡ್​ ಮೌಲ್ಯ ಪಡೆದುಕೊಂಡಿದೆ.

ಬ್ರಾಂಡ್​ ಮೌಲ್ಯಮಾಪನ ಸಲಹಾ ಸಂಸ್ಥೆಯಾಗಿರುವ "ಬ್ರಾಂಡ್​ ಫಿನಾನ್ಸ್​ ರಿವೀಲ್ಸ್​' ಸಿದ್ಧಪಡಿಸಿರುವ ವರದಿಯ ಪ್ರಕಾರ, ಐಪಿಎಲ್​ ಬ್ರಾಂಡ್​ ಮೌಲ್ಯ 2008ರ ಆರಂಭಿಕ ವರ್ಷದಿಂದ ಈಗ ಶೇ. 433ರಷ್ಟು ಪ್ರಗತಿ ಕಂಡಿದೆ. 2022ರಲ್ಲಿ ಐಪಿಎಲ್​ 70,070 ಕೋಟಿ ರೂ. (8.4 ಬಿಲಿಯನ್​ ಡಾಲರ್​) ಬ್ರಾಂಡ್​ ಮೌಲ್ಯ ಹೊಂದಿತ್ತು. ನಂತರದಲ್ಲಿ 48,390 ಕೋಟಿ ರೂ. ಮೊತ್ತದ ಪ್ರಸಾರ ಹಕ್ಕು ಒಪ್ಪಂದ ಪಡೆದುಕೊಂಡಿರುವುದರಿಂದ, ಎರಡು ಹೊಸ ತಂಡಗಳ ಸೇರ್ಪಡೆಯಿಂದ ಮತ್ತು ಕೋವಿಡ್​-19 ಭೀತಿ ಕಳೆದು ಕ್ರೀಡಾಂಗಣಕ್ಕೆ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರು ಪ್ರವೇಶ ಪಡೆದಿರುವುದರಿಂದ ಐಪಿಎಲ್​ ಬ್ರಾಂಡ್​ ಮೌಲ್ಯ ಭಾರಿ ಏರಿಕೆ ಕಂಡಿದೆ.

ಏನಿದು ಡೆಕಾಕಾರ್ನ್​?

10 ಶತಕೋಟಿ ಡಾಲರ್​ಗಿಂತ ಹೆಚ್ಚಿನ ಬ್ರಾಂಡ್​ ಮೌಲ್ಯ ಹೊಂದಿರುವ ಖಾಸಗಿ ಕಂಪನಿಯನ್ನು ಡೆಕಾಕಾರ್ನ್​ ಎಂದು ಬಣ್ಣಿಸಲಾಗುತ್ತದೆ. ಐಪಿಎಲ್​ ಕೂಡ ಈಗ ಉದ್ಯಮ ವಲಯದ ಈ ಮೌಲ್ಯವನ್ನು ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net