

ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಐಪಿಎಲ್ 17ನೇ ಆವೃತ್ತಿಯ 2ನೇ ಚರಣದ ಪಂದ್ಯಗಳು ಅರಬ್ಬರ ನಾಡು ಯುಎಇಗೆ ಸ್ಥಳಾಂತರಗೊಳ್ಳಲಿದೆ ಎಂದು ಶನಿವಾರ ಬೆಳಗ್ಗೆ ವರದಿಗಳು ಹರಡಿದವು. ಆದರೆ ಅದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಬಿಸಿಸಿಐ, ಯುಎಇ ಅಥವಾ ಬೇರೆ ಯಾವುದೇ ದೇಶಕ್ಕೆ ಐಪಿಎಲ್ ಟೂರ್ನಿಯನ್ನು ಸ್ಥಳಾಂತರಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದು, ಚುನಾವಣೆಯ ನಡುವೆಯೂ ಸಂಪೂರ್ಣ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸುವ ವಿಶ್ವಾಸ ವ್ಯಕ್ತಪಡಿಸಿದೆ.
ಸದ್ಯ ಮಾರ್ಚ್ 22ರಿಂದ ಏಪ್ರಿಲ್ 7ರವರೆಗೆ ನಡೆಯಲಿರುವ ಐಪಿಎಲ್ನ ಮೊದಲ ಚರಣದ 21 ಪಂದ್ಯಗಳ ವೇಳಾಪಟ್ಟಿ ಮಾತ್ರ ಪ್ರಕಟಗೊಂಡಿವೆ. ಪ್ಲೇಆಫ್-ಫೈನಲ್ ಸಹಿತ ಇನ್ನುಳಿದ 53 ಪಂದ್ಯಗಳ ವೇಳಾಪಟ್ಟಿಯನ್ನು ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಪ್ರಕಟಿಸುವುದಾಗಿ ಬಿಸಿಸಿಐ ತಿಳಿಸಿತ್ತು. ಈ ನಡುವೆ ಐಪಿಎಲ್ನಲ್ಲಿ ಆಡುವ ಎಲ್ಲ ಆಟಗಾರರ ಪಾಸ್ ಪೋರ್ಟ್ ಸಲ್ಲಿಸುವಂತೆ ತಂಡಗಳು ಬೇಡಿಕೆ ಇಟ್ಟಿವೆ ಮತ್ತು ಬಿಸಿಸಿಐ ಅಧಿಕಾರಿಗಳು ಯುಎಇಗೆ ಭೇಟಿ ನೀಡಿ ಕ್ರೀಡಾಂಗಣ ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದ್ದು, ಇದು ಐಪಿಎಲ್ ಸ್ಥಳಾಂತರದ ಮುನ್ಸೂಚನೆ ಎಂದೂ ಹೇಳಲಾಗಿದೆ. ಆದರೆ ಐಪಿಎಲ್ ಚೇರ್ಮನ್ ಅರುಣ್ ಧುಮಾನ್ ಇದನ್ನು ನಿರಾಕರಿಸಿದ್ದಾರೆ.
"ನಾವು ಸರ್ಕಾರಿ ಸಂಸ್ಥೆಗಳ ಜತೆಗೆ ನಿಕಟ ಸಂಪರ್ಕದಲ್ಲಿದ್ದೇವೆ. ಚುನಾವಣೆ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ನಾವು ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಅಂತಿಮಗೊಳಿಸುವ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೇವೆ. ಟೂರ್ನಿಯ 2ನೇ ಚರಣವೂ ಸಂಪೂರ್ಣವಾಗಿ ಭಾಋತದಲ್ಲೇ ನಡೆಯಲಿದೆ. ವಿದೇಶಕ್ಕೆ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ' ಎಂದು ಅರುಣ್ ಧುಮಾನ್ ಸ್ಪಷ್ಟಪಡಿಸಿದ್ದಾರೆ.
ಈ ಮುನ್ನ 2009ರ ಸಾರ್ವತ್ರಿಕ ಚುನಾವಣೆಯ ವೇಳೆ ಸಂಪೂರ್ಣ ಐಪಿಎಲ್ ದಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡಿದ್ದರೆ, 2014ರಲ್ಲಿ ಮೊದಲ ಚರಣದ ಪಂದ್ಯಗಳು ಯುಎಇಯಲ್ಲಿ ನಡೆದಿತ್ತು. 2019ರಲ್ಲಿ ಚುನಾವಣೆಯ ನಡುವೆಯೂ ಸಂಪೂರ್ಣ ಐಪಿಎಲ್ ಟೂರ್ನಿ ಭಾರತದಲ್ಲೇ ಯಶಸ್ವಿಯಾಗಿ ಆಯೋಜನೆಗೊಂಡಿತ್ತು.